ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA)ಯಲ್ಲಿ ಭಾರೀ ಪ್ರಮಾಣದ ಕ್ಲಿನಿಂಗ್ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ ಬೆನ್ನಲ್ಲೆ ಇಂದೂ ಕೂಡ ಬಿಡಿಎ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿ ಶೋಧ ಕಾರ್ಯ ಮುಂದುವರೆಸಿದೆ.
ಭ್ರಷ್ಟಾಚಾರ ನಿಗ್ರಹ ದಳದಿಂದ ಬಿಡಿಎ ಕೇಂದ್ರ ಕಚೇರಿ ಸೇರಿದಂತೆ ಒಟ್ಟು ಕಚೇರಿಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದೆ. ಆರ್ ಟಿ ನಗರದಲ್ಲಿನ ಬಿಡಿಎ ಉತ್ತರ ವಿಭಾಗದ ಕಚೇರಿ, ವಿಜಯನಗರದಲ್ಲಿನ ಪಶ್ಚಿಮ ವಿಭಾಗದ ಕಚೇರಿ, ಹೆಚ್ ಎಸ್ ಆರ್ ಲೇಔಟ್ ನ ಪೂರ್ವ ವಿಭಾಗ ಕಚೇರಿ ಮತ್ತು ಬನಶಂಕರಿಯಲ್ಲಿನ ದಕ್ಷಿಣ ವಿಭಾಗದ ಅಧಿಕಾರಿಗಳ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲನೆ ನಡೆಸಿದ್ದಾರೆ.
ಬಿಡಿಎ ಭೂಸ್ವಾಧೀನಾಧಿಕಾರಿಗಳ ಕಚೇರಿಯಲ್ಲಿ BDA ನಿಂದ ವಶಪಡಿಸಿಕೊಂಡ ಜಮೀನಿನ ಪರಿಹಾರದ ಮೊತ್ತವನ್ನು ಸುಳ್ಳು ಮಾಹಿತಿ ನೀಡಿ ಖೊಟ್ಟಿ ದಾಖಲಾತಿಗಳನ್ನು ಸೃಷ್ಠಿಸಿ, ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿಗಳು ಅನರ್ಹ ವ್ಯಕ್ತಿಗಳಿಗೆ ಇದರ ಲಾಭವನ್ನು ಸಿಗುವಂತೆ ಮಾಡಲಾಗಿದ್ದು, ದಾಳಿ ವೇಳೆ ದಾಖಲಾತಿಗಳು ದೊರೆತಿವೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಉದ್ದೇಶಿತ ಕಾರ್ಯಕ್ಕೆ ಬಳಸಿಕೊಳ್ಳದ ಸಿಎ ಸೈಟ್
ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಭಾರತ್ ಹೆಚ್.ಬಿ.ಸಿ.ಎಸ್ ಲೇಔಟ್‍ನ ನಾಗರೀಕ ಸೌಲಭ್ಯ ನಿವೇಶನ (ಸಿ.ಎ.ಸೈಟ್)ಗಳನ್ನು ನಾಗರೀಕ ಸೌಲಭ್ಯಗಳ ಉದ್ದೇಶಕ್ಕಾಗಿ ಸಂಘ ಸಂಸ್ಥೆಗಳಿಗೆ ಹಂಚಿಕೆ ಮಾಡಿದ್ದು, ಸದರಿ ಸಂಘ ಸಂಸ್ಥೆಗಳು ಉದ್ದೇಶಿತ ಸೌಲಭ್ಯಗಳಿಗಾಗಿ ಬಳಕೆ ಮಾಡಿಕೊಳ್ಳದೆ ಷರತ್ತುಗಳು ಉಲ್ಲಂಘನೆಯಾಗಿರುವುದು ಕಂಡುಬಂದಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ನಗರ, ಹೆಚ್.ಎಸ್.ಆರ್. ಲೇಔಟ್, 3ನೇ ಸೆಕ್ಟರ್ ಮತ್ತು ಬೆಂಗಳೂರು ನಗರ, ಮಹಾಲಕ್ಷ್ಮೀ ಬಡಾವಣೆ, ಸಿ.ಎ ನಿವೇಶನಗಳನ್ನು ನಾಗರೀಕ ಸೌಲಭ್ಯ ನಿವೇಶನ(ಸಿ.ಎ.ಸೈಟ್)ಗಳನ್ನು ಬಿ.ಡಿ.ಎ ಅನುಮೋದಿತ ನಕ್ಷೆ ರೀತಿ ಕಟ್ಟಡವನ್ನು ನಿರ್ಮಾಣ ಮಾಡದೇ ನಿಯಮ ಉಲ್ಲಂಘನೆ ಮಾಡಲಾಗಿದೆ. ಆದರೆ ಬಿಡಿಎ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಕಣ್ಣು ಮುಚ್ಚಿಕುಳಿತಿದಿರುವುದು ಕಂಡುಬಂದಿರುತ್ತದೆ.
ಸರ್ಕಾರಕ್ಕೆ ನಷ್ಛವನ್ನುಂಟು ಮಾಡುವ ಅಧಿಕಾರಿಗಳ ಕ್ರಮ
ಕಡತಗಳ ಪರಿಶೀಲನೆಯಿಂದ ನಿವೇಶನ ಹಂಚಿಕೆದಾರರಿಗೆ ಹಂಚಿಕೆಯಾದ ಸ್ಥಳದಲ್ಲಿ ಹಂಚಿಕೆ ಮಾಡದೇ ನಿಯಮ ಬಾಹಿರವಾಗಿ ಬೇರೆ ಕಡೆಗಳಲ್ಲಿ ಹಂಚಿಕೆ ಮಾಡಿ ಅವ್ಯವಹಾರ ನೀಡಿರುವುದು ಕಂಡುಬಂದಿದ್ದು, ಈ ಬಗ್ಗೆಯೂ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಳೆಯ ಬಡಾವಣೆಗಳಲ್ಲಿ ದೊಡ್ಡ ನಿವೇಶನಗಳನ್ನು ಯಾರಿಗೂ ಸಹ ಹಂಚಿಕೆ ಮಾಡದೇ ಹಾಗೆಯೇ ಖಾಲಿ ಬಿಟ್ಟು ತಾತ್ಕಾಲಿಕವಾಗಿ ಖಾಸಗೀ ವ್ಯಕ್ತಿಗಳಿಗೆ ಶೆಡ್‍ಗಳನ್ನು ನಿರ್ಮಾಣ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟು ಸರ್ಕಾರಕ್ಕೆ ನಷ್ಟವನ್ನು ಮಾಡಿರುವುದು ಕಂಡುಬಂದಿದೆ. ಜಮೀನು ಮಾಲೀಕರಿಂದ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಂಡು ಜಮೀನು ಮಾಲೀಕರಿಗೆ ಪರಿಹಾರವನ್ನು ನೀಡಿ, ಭೂ ಮಾಲೀಕರಿಗೆ ಹಂಚಿಕೆಯಾಗಿದ್ದ ನಿವೇಶನಗಳನ್ನು ವಾಪಸ್ಸು ಬಿಡಿಎಗೆ ವಶಪಡಿಸಿಕೊಳ್ಳದೇ ಬೇರೆಯವರಿಗೆ ಹಂಚಿಕೆ ಮಾಡಿರುವುದು ಕಂಡುಬಂದಿದೆ.
ಹರಾಜು ಪ್ರಕ್ರಿಯೆ ಮೂಲಕ ಮೂಲೆ ನಿವೇಶನ ಮಾರಾಟ ಮಾಡದ ಅಧಿಕಾರಿಗಳು
ಮೂಲೆ ನಿವೇಶನ(ಕಾರ್ನರ್ ಸೈಟ್)ಗಳನ್ನು ಹರಾಜು ಪ್ರಕ್ರಿಯೆ ಮುಖಾಂತರ ಮಾರಾಟ ಮಾಡಬೇಕಾಗಿರುತ್ತದೆ. ಆದರೆ, ಹರಾಜು ಪ್ರಕ್ರಿಯೆ ಮಾಡದೇ ಮೂಲೆ ನಿವೇಶನ(ಕಾರ್ನರ್ ಸೈಟ್)ಗಳನ್ನು ಹಂಚಿಕೆ ಮಾಡಿ ಸರ್ಕಾರಕ್ಕೆ ನಷ್ಟವನ್ನುಂಟು ಮಾಡಿರುವುದು ಕಂಡಿಬಂದಿದೆ, ವಿಭಾಗ ಕಛೇರಿಗಳಲ್ಲಿ ಕಡತಗಳ ಸಂಖ್ಯೆಯ ಆಧಾರದ ಮೇಲೆ ಖಚಿತ ಅಳತೆ ರೆಕಾರ್ಡ್ ಅನ್ನು ನಿರ್ವಹಣೆ ಮಾಡಬೇಕಾಗಿರುತ್ತದೆ. ಆದರೆ, ವಿಭಾಗ ಕಛೇರಿಗಳಲ್ಲಿ ಖಚಿತ ಅಳತೆಯ ರೆಕಾರ್ಡ್‍ಗಳನ್ನು ನಿರ್ವಹಣೆ ಮಾಡದಿರುವುದು ಕಂಡುಬಂದಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಸಂಬಂಧಪಟ್ಟಂತೆ ಭೂ ಸ್ವಾಧೀನಪಡಿಸಿಕೊಂಡು, ಪರಿಹಾರವನ್ನು ನೈಜ ಜಮೀನು ಮಾಲೀಕರಿಗೆ ನೀಡದೇ 3ನೇ ವ್ಯಕ್ತಿಗೆ ನೀಡಿರುವುದು ಕಂಡುಬಂದಿದ್ದು, ತನಿಖೆ ಮುಂದುವರೆದಿದೆ. ಮೇಲ್ಕಂಡ ಕಛೇರಿಗಳಲ್ಲಿ ಶೋಧನಾ ಕಾರ್ಯ ಮುಂದುವರೆದಿದ್ದು, ಇದರ ನಡುವೆಯೇ ಇಂದೂ ಕೂಡ ಬಿಡಿಎ ಕಛೇರಿಯಲ್ಲಿನ ಅವ್ಯವಹಾರದ ಕುರಿತು ಸಾರ್ವಜನಿಕರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರನ್ನು ನೀಡಿರುವ ಹಿನ್ನೆಲೆಯಲ್ಲಿ ದೂರನ್ನು ದಾಖಲಿಸಿ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.




