ಹಾವೇರಿ : ಹಾವೇರಿ ಲೋಕಸಭಾ ಚುನಾವಣೆಗೆ ಬಿಜೆಪಿಯಲ್ಲಿ ಆಕಾಂಕ್ಷಿತರ ಪಟ್ಟಿಗೇನು ಕಡಿಮೆಯಿಲ್ಲ, ಇದರಲ್ಲಿ ತಾವೇನೂ ಕಡಿಮೆಯಿಲ್ಲ ಎಂಬಂತೆ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿರುವ ಕೆ ಎಸ್ ಈಶ್ವರಪ್ಪ ಅವರ ಪುತ್ರ ಕೆ ಇ. ಕಾಂತೇಶ್ ಟೀಕೆಟ್ ಗಾಗಿ ಶತಾಯಗತಾಯ ಪ್ರಯತ್ನ ಮುಂದುವರೆಸಿದ್ದಾರೆ.
ಮಗನಿಗೆ ಹೇಗಾದರೂ ಮಾಡಿ ಲೋಕಸಭಾ ಟಿಕೇಟ್ ಕೊಡಿಸಬೇಕೆಂದು ತೀವ್ರತರ ಲಾಭಿ ನಡೆಸುತ್ತಿರುವ ಈಶ್ವರಪ್ಪ, ವರಿಷ್ಠರ ದುಂಬಾಲು ಬಿದ್ದಿದ್ದಾರೆ. ಇನ್ನೊಂದೆಡೆ ಅವರ ಪುತ್ರ ಕಾಂತೇಶ ಸಿಂಧಗಿ ಮಠಕ್ಕೆ ಭೇಟಿ ನೀಡಿ ಅವರ ಮೂಲಕ ಒತ್ತಡ ಹೇರುವ ತಂತ್ರಕ್ಕೆ ಮೊರೆಹೋಗಿದ್ದಾರೆ.
ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠದಲ್ಲಿ ವಿಶೇಷ ಪೂಜೆ ಅನ್ನೋದಕ್ಕಿಂತ ಅನೇಕ ವರ್ಷಗಳಿಂದ ಮಠಕ್ಕೆ ಬರೋದು ರೂಢಿ, ಅದೇ ರೀತಿಯಲ್ಲಿ ಬಂದು ಗುರುಗಳ ಆಶೀರ್ವಾದ ಪಡೆದುಕೊಂಡಿದ್ದೇನೆ.
ಮತ್ತೊಮ್ಮೆ ನರೇಂದ್ರಮೋದಿ ಪ್ರಧಾನಿ ಆಗಬೇಕು ಎಂಬ ಅಭಿಲಾಶೆಯಿಂದ ಪೂಜೆ ಮಾಡಿದ್ದೀನಿ, ನಮ್ಮಲ್ಲಿ ಗೊಂದಲ ಇಲ್ಲ, ಟಿಕೆಟ್ ಕೇಳೋದು ಎಲ್ಲರ ಹಕ್ಕು, ಹೈಕಮಾಂಡ್ ನಿಶ್ಚಯ ಮಾಡಿ ಯಾರಿಗೆ ಟಿಕೆಟ್ ಅನ್ನುತ್ತೋ ಅವರ ಪರ ಕೆಲಸ ಮಾಡೋದು ಪದ್ದತಿ, ಖಂಡಿತವಾಗಿ ನಾನು ಟಿಕೆಟ್ ನಿರೀಕ್ಷೆಯಲ್ಲಿದ್ದೇನೆ ಎಂದರು.
ಸಿಗದೇ ಹೋದರೆ ಎಂಬ ಪ್ರಶ್ನೆಯೇ ಇಲ್ಲ ನೂರಕ್ಕೆ ನೂರು ವಿಶ್ವಾಸ ಇದೆ. ಯಾವುದೇ ಕಾರಣಕ್ಕೂ ನನಗೆ ಅನ್ಯಾಯ ಆಗಲ್ಲ, ಈಶ್ವರಪ್ಪ ಅವರು ಅಮಿತ್ ಶಾ ಅವರನ್ನು ಭೇಟಿಯಾಗಿ ಬಂದಿದ್ದಾರೆ, ಅಮಿತ್ ಶಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವಿವರಿಸಿದರು.

ಸಿ.ಇ.ಸಿ ಮೀಟಿಂಗ್ ಮುಗಿದ ಬಳಿಕ ಖಂಡಿತವಾಗಿ ಸಿಹಿ ಸುದ್ದಿ ಸಿಗುತ್ತೆ, ಬೆಂಬಲಿಗರು ತಾಳ್ಮೆಯಿಂದ ಇರಬೇಕು, ಲೋಕಸಭಾ ಕ್ಯಾಂಡಿಡೇಟ್ ನಾನೇ ಆಗ್ತೀನಿ ಅನ್ನೋ ವಿಶ್ವಾಸ ಇದೆ, ಒಂದು ವೇಳೆ ಅಲ್ಲ ನೂರಕ್ಕೆ ನೂರು ವಿಶ್ವಾಸ ಇದೆ, ಕೊಡೋದೆ ಇಲ್ಲ ಎಂಬ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೇವಲ ಹಾವೇರಿಯಲ್ಲಷ್ಟೇ ಅಲ್ಲ ಈ ಸಿಚುವೇಶನ್ ಎಲ್ಲಾ ಕಡೆ ಇದೆ, ಬಸವರಾಜ ಬೊಮ್ಮಾಯಿ ಹೆಸರು ಫಿಕ್ಸ್ ಆದರೆ, ಬಿಸಿ ಪಾಟೀಲ್ ಫಿಕ್ಸ್ ಆದರೂ ನಾವು ಓಡಾಡಿ ಕೆಲಸ ಮಾಡ್ತೀವಿ, ನಾನು ಸ್ಥಳೀಯನವನೇ, ಸಾಮಾನ್ಯ ಕಾರ್ಯಕರ್ತರಿಗೆ ಟಿಕೇಟ್ ಕೊಟ್ಟರೂ ನಾನು ಕೆಲಸ ಮಾಡ್ತೀವಿ, ಶಿವಮೊಗ್ಗದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ ಚನ್ನಬಸಪ್ಪ ಅವರನ್ನು ಗೆಲ್ಲಿಸಿದ್ದೇವೆ, ನಾನೂ ಒಬ್ಬ ಸಾಮಾನ್ಯ ಕಾರ್ಯಕರ್ತ, ತ್ಯಾಗದ ಪ್ರಶ್ನೆ ಉದ್ಬವವಾಗಲ್ಲ ಅಂತಾ ಪರೋಕ್ಷವಾಗಿ BC ಪಾಟೀಲ್ ಕಾಂತೇಶ್ ಟಾಂಗ್ ನೀಡಿದರು.
ಬಿಜೆಪಿ ಈ ಮಟ್ಟಕ್ಕೆ ಬರೋದಕ್ಕೆ ಅನೇಕ ಹಿರಿಯರು ತಪಸ್ಸು ಮಾಡಿದ್ದಾರೆ, ಎಷ್ಟೋ ಜನ ಪ್ರಚಾರಕರು ದೇಶ, ಪಕ್ಷಕ್ಕಾಗಿ ಮನೆ ಬಿಟ್ಟು, ಮದುವೆ ಆಗದೇ ಕೆಲಸ ಮಾಡಿದ್ದಾರೆ ಎಂದು ವಿವರಿಸಿದರು.