ಬೆಂಗಳೂರು : ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಿನ್ನೆ ಲೋಕಸಭಾ ಚುನಾವಣೆ ಸಂಬಂಧ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಕೆಲವು ನಾಟಕೀಯ ಘಟನೆಗಳು ನಡೆದವು. ತಾವು ಸಚಿವರಾಗಿದ್ದೇವೆ, ನಾನು ನಿಲ್ಲಲ್ಲ, ನನ್ನ ಕುಟುಂಬಸ್ಥರು ನಿಲ್ಲಲ್ಲ ಎಂದು ಹೇಳಿದರೂ, ಅವರ ಮನವೊಲಿಸುವ ಪ್ರಯತ್ನಗಳು ನಡೆದವು.
ವರಿಷ್ಠರು ಎಷ್ಟೇ ಪ್ರಯತ್ನ ನಡೆಸಿದರೂ ಕೊನೆಯಲ್ಲಿ ಸಿಕ್ಕ ಉತ್ತರ ಮಾತ್ರ ನಾನು ಸಚಿವನಾಗಿದ್ದೇನೆ. ಇಲ್ಲೇ ಇರುತ್ತೇನೆ ಎನ್ನುವುದು. ಇದರಿಂದ ಸ್ವಲ್ಪ ವಿಚಲಿತರಾದ ಕಾಂಗ್ರೆಸ್ ವರಿಷ್ಠರು ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ. ಇನ್ನೊಂದೆಡೆ ಪರ್ಯಾಯ ಕ್ಯಾಂಡಿಡೇಟ್ ಹುಡುಕುವತ್ತ ಚಿತ್ತ ಹರಿಸಿದ್ದಾರೆ.
ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಹರೀಶ್ ಚೌಧರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿಗಳು ಭಾಗಿಯಾಗಿದ್ದರು. ಹಾಗೆಯೇ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಉಪಸ್ಥಿತಿರಿದ್ದರು.
ಕಳೆದ ಸಿಇಸಿ ಸಭೆಯಲ್ಲಿ ರಾಜ್ಯದ 7 ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದ ಕಾಂಗ್ರೆಸ್, ಇಂದಿನ ಸಭೆಯಲ್ಲಿ 21 ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಚರ್ಚೆ ನಡೆಸಿತು. ಬಳಿಕ ಕೇಂದ್ರ ಚುನಾವಣಾ ಸಮಿತಿಗೆ ಕೆಲವು ಹೆಸರನ್ನು ಶಿಫಾರಸ್ಸು ಮಾಡಿದೆ.

ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಗೆ ಸಚಿವ ಸತೀಶ್ ಜಾರಕಿಹೊಳಿಗೆ ಬುಲಾವ್ ನೀಡಿದ್ದರಿಂದ ಅವರು ಸಭೆಗೆ ಆಗಮಿಸಿದರು. ಬೆಳಗಾವಿ, ಚಿಕ್ಕೋಡಿ ಟಿಕೆಟ್ ಗೊಂದಲ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿಗೆ ಬುಲಾವ್ ನೀಡಲಾಗಿತ್ತು.
ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಸ್ಪರ್ಧೆ ಮಾಡಲು ವರಿಷ್ಠರು ತಿಳಿಸಿದರು. ಹಾಗೆಯೇ ಅವರ ಸ್ಪರ್ಧೆಯ ಬಗ್ಗೆ ನಾಯಕರು ಮನವೊಲಿಸಲು ಪ್ರಯತ್ನಿಸಿದರು. ಆದರೆ, ಸ್ಪರ್ಧೆಗೆ ಹಿಂದೇಟಾಕಿದ ಸತೀಶ್ ಜಾರಕಿಹೊಳಿ, ಚಿಕ್ಕೋಡಿಯಲ್ಲಿ ಲಕ್ಷಣರಾವ್ ಚಿಂಗಳೆಗೆ ಟಿಕೆಟ್ ನೀಡಲು ಮನವಿ ಮಾಡಿದರು.
ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ತಮ್ಮದು ಎಂದು ತಿಳಿಸಿದರಾದರೂ ವರಿಷ್ಠರು, ಚಿಂಗಳೆ ಬೇಡ ತಮ್ಮ ಪುತ್ರಿ ಪ್ರಿಯಾಂಕಾಳನ್ನು ಕಣಕ್ಕಿಳಿಸಿ ಎಂದು ಮನವೊಲಿಕೆ ಮಾಡಿದ್ದಾರೆ. ಸಿಎಂ, ಡಿಸಿಎಂ, ಸುರ್ಜೇವಾಲ ಅವರಿಂದ ಮನವೊಲಿಕೆ ಮಾಡಿದರಾದರೂ ಸತೀಶ್ ಜಾರಕಿ ಹೊಳಿ ಪಟ್ಟು ಸಡಿಸಲಿಲ್ಲ. ಬದಲಿಗೆ ತಮ್ಮ ಬೆಂಬಲಿಗನಿಗೆ ಟಿಕೇಟ್ ನೀಡಲು ಒತ್ತಾಯಿಸಿದರು ಎಂದು ತಿಳಿದುಬಂದಿದೆ.
ನಂತರ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಗೆ ಬುಲಾವ್ ಹೋಗಿದ್ದು, ಸಚಿವ ರಾಮಲಿಂಗಾರೆಡ್ಡಿಗೆ, ಬುಲಾವ್ ಹಿನ್ನೆಲೆಯಲ್ಲಿ ಸಭೆಗೆ ಆಗಮಿಸಿ ರಾಮಲಿಂಗಾರೆಡ್ಡಿ, ಬೆಂಗಳೂರು ದಕ್ಷಿಣಕ್ಕೆ ತಮ್ಮ ಪುತ್ರಿಯನ್ನು ನಿಲ್ಲಿಸಲು ಮನವಿ ಮಾಡಿದಲು ಎನ್ನಲಾಗಿದೆ.
ಆದರೆ, ಈ ಸಂಬಂಧ ಹೆಚ್ಚು ಆಸಕ್ತಿಯನ್ನು ರಾಮಲಿಂಗಾರೆಡ್ಡಿ ಅವರು ತೋರಿಸಲಿಲ್ಲ ಎಂದು ತಿಳಿದುಬಂದಿದ್ದು, ಒಟ್ಟಿನಲ್ಲಿ ಕಾಂಗ್ರೆಸ್ ಗೆ ಕೆಲವು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಆದ್ದರಿಂದ ಬೆಳಗಾವಿ ಟಿಕೆಟ್ ಆಯ್ಕೆ ಪೆಂಡಿಂಗ್ ಇಡಲಾಗಿದೆ ಎಂದು ತಿಳಿದುಬಂದಿದೆ.