SIT Formed To Probe PSI Recruitment Scam: ಪಿಎಸ್‌ಐ ನೇಮಕಾತಿ ಹಗರಣದ ಹೆಚ್ಚಿನ ತನಿಖೆಗೆ ಎಸ್‌ಐಟಿ ರಚನೆ : ಕೃಷ್ಣ ಬೈರೇಗೌಡ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪಿಎಸ್‌ಐ ನೇಮಕಾತಿ ಹಗರಣದ ಸಂಬಂಧ ಹೆಚ್ಚಿನ ತನಿಖೆಗಾಗಿ ನ್ಯಾ. ವೀರಪ್ಪ ಆಯೋಗದ ಶಿಫಾರಸ್ಸಿನ ಮೇರೆಗೆ ಎಸ್‌ಐಟಿ ರಚನೆ ಮಾಡಲು ಬುಧವಾರ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸತತ ಮೂರು ತಾಸಿಗೂ ಅಧಿಕ ಸುಧೀರ್ಘ ಸಚಿವ ಸಂಪುಟ ಸಭೆ ನಡೆದಿದ್ದು, ಸಭೆ ಬಳಿಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಭೆಯ ನಿರ್ಣಯಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪಿಎಸ್‌ಐಗಳ ನೇಮಕಾತಿ ಹಗರಣವನ್ನು ನ್ಯಾ.ಬಿ. ವೀರಪ್ಪ ನೇತೃತ್ವದ ಆಯೋಗಕ್ಕೆ ವಹಿಸಲಾಗಿತ್ತು. ಈ ಆಯೋಗ ವರದಿ ನೀಡಿದ್ದು, ಸರ್ಕಾರದವರು, ಖಾಸಗಿಯವರು ಮತ್ತು ಮಧ್ಯವರ್ತಿಗಳು ಸೇರಿ ಒಟ್ಟು 113 ಮಂದಿ ಭಾಗಿಯಾಗಿದ್ದಾರೆ ಎಂದು ವರದಿ ನೀಡಿದೆ. ಇದರಲ್ಲಿ ಕೆಲವರು ಬಹಿರಂಗವಾಗಿ ಹೇಳಿಕೆ ನೀಡಿದ್ದು, ಅಧಿಕೃತವಾಗಿ ಆಯೋಗದ ಮುಂದೆ ಬಂದು ಹೇಳಿಕೆ ಕೊಡುವಂತೆ ನೋಟಿಸ್ ಕೊಟ್ಟಾಗ ಅವರು ಬಂದಿಲ್ಲ. ಅವರನ್ನು ಕಡ್ಡಾಯವಾಗಿ ಬಂದು ಹೇಳಿಕೆ ಕೊಡುವಂತೆ ಸೂಚಿಸುವ ಆಧಿಕಾರ ಆಯೋಗಕ್ಕೆ ಇಲ್ಲ. ಹೀಗಾಗಿ ಈ ಸಂಬಂಧ ಎಸ್‌ಐಟಿ ತನಿಖೆಗೆ ವಹಿಸಬೇಕು ಎಂದು ಶಿಫಾರಸು ಮಾಡಿದ್ದರಿಂದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಎಸ್‌ಐಟಿಗೆ ವಹಿಸಲು ನಿರ್ಧರಿಸಲಾಯಿತು ಎಂದು ಹೇಳಿದರು.

ಈ ಸಂಬಂಧ ಈಗಾಗಲೇ ಸಿಐಡಿ ಸಹ ಒಟ್ಟು 17 ಕೇಸುಗಳನ್ನು ದಾಖಲಿಸಿಕೊಂಡು ತನ್ನದೇ ರೀತಿಯಲ್ಲಿ ತನಿಖೆ ಮಾಡುತ್ತಿದೆ. ಈಗ ನ್ಯಾ.ಬಿ.ವೀರಪ್ಪ ಅವರ ಸಿಫಾರಸು ಮೇರೆಗೆ ಎಸ್ಐಟಿಗೆ ವಹಿಸಲಾಗುತ್ತಿದೆ. ಆದರೆ, ಇದರಿಂದ ಸಿಐಡಿ ತನಿಖೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿನ 7 ಜಿಲ್ಲೆಗಳಲ್ಲಿ ಹೊಸದಾಗಿ 33 ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಗಳ ನಿರ್ಮಾಣ ಕಾಮಗಾರಿಗಳನ್ನು ಒಟ್ಟು 132 ಕೋಟಿ ರೂ. ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

ಇದಲ್ಲದೆ, ಬೀದರ್ ಪಶು ವೈದ್ಯಕೀಯ ವಿಶ್ವವಿದ್ಯಾಲಯ ವ್ಯಾಪ್ತಿಯ ದಕ್ಷಿಣ ಕನ್ನಡದ ಕಡಬ ಪಶು ವೈದ್ಯಕೀಯ ಕಾಲೇಜಿನಲ್ಲಿ ಗ್ರಂಥಾಲಯ, ವಿದ್ಯಾರ್ಥಿ-ವಿದ್ಯಾರ್ಥಿನಿಯರ ಪ್ರತ್ಯೇಕ ವಸತಿಗೃಹಗಳು ಹೀಗೆ ಎರಡನೇ ಹಂತದ ಸಮಗ್ರ ಅಭಿವೃದ್ಧಿಗಾಗಿ 163.75 ಕೋಟಿ ನೀಡಲು ಹಾಗೂ ಇದೇ ವಿವಿಯ ಅಥಣಿ ಪಶು ವೈದ್ಯಕೀಯ ಕಾಲೇಜಿನ ಸಮಗ್ರ ಅಭಿವೃದ್ಧಿಗೆ 82 ಕೋಟಿ ರೂ. ನೀಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.

ಮೈಸೂರಿನಲ್ಲಿ ಮಹಾರಾಣಿ ಕಾಲೇಜ್ ಹೊಸ ಹಾಸ್ಟೆಲ್ ಸ್ಥಾಪನೆಗೆ 170 ಕೋಟಿ ರೂ. ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿದೆ. ರೈತರ ಉತ್ಪಾದನೆ, ಲಾಭಾಂಶ ಹೆಚ್ಚು ಆಗಬೇಕು. ಬೆಳೆ ಸಂರಕ್ಷಣೆಗೆ 67 ಕೋಟಿ ರೂ. ವೆಚ್ಚದಲ್ಲಿ ಬಯೋಟೆಕ್ ಅಭಿವೃದ್ಧಿಗೆ ಅಗ್ರಿ ಇನ್ನೊವೇಷನ್ ಸೆಂಟರ್ ಮಾಡಲು ತೀರ್ಮಾನಿಸಲಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪ ಜಾಗವಿದ್ದು, ಅಲ್ಲಿ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು.

ಮೆಟ್ರೋ ಮೂರನೇ ಹಂತದ ಕಾಮಗಾರಿಗೆ ಸಂಪುಟ ಒಪ್ಪಿಗೆ:

ನಗರದ ಸಂಚಾರ ದಟ್ಟಣೆ ನಿವಾರಣೆಗಾಗಿ ‘ನಮ್ಮ ಮೆಟ್ರೋ’ ಮೂರನೇ ಹಂತದ ಕಾಮಗಾರಿಗೆ ಬುಧವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.

ಈಗಾಗಲೇ ಇರುವಂತಹ ರಿಂಗ್‌ರಸ್ತೆಗೆ ಹೊಂದಿಕೊಂಡಂತೆ ಹೆಬ್ಬಾಳ ಮೇಲ್ಸೇತುವೆಯಿಂದ ಗುರುಗುಂಟೆ ಪಾಳ್ಯ ಮಾರ್ಗವಾಗಿ ತುಮಕೂರು ರಸ್ತೆ, ಮಾಗಡಿ ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ ಮಾರ್ಗವಾಗಿ ಜೆಪಿನಗರ ತಲುಪುವ 15,611 ಕೋಟಿ ರೂ. ಮೊತ್ತದ ಮೆಟ್ರೋ ಮೂರನೇ ಹಂತದ ಕಾಮಗಾರಿಗೆ ಸಂಪುಟದಲ್ಲಿ ಒಪ್ಪಿಗೆ ಸೂಚಿಸಲಾಯಿತು ಎಂದು ಸಭೆ ಬಳಿಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಜೆಪಿ ನಗರದಿಂದ ಸಿಲ್ಕ್‌ಬೋರ್ಡ್‌, ಕೆ.ಆರ್. ಪುರಂ ಮಾರ್ಗವಾಗಿ ಹೆಬ್ಬಾಳಕ್ಕೆ ಒಂದು ಭಾಗದಲ್ಲಿ ಈಗಾಗಲೇ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಒಂದೆರಡು ವರ್ಷಗಳಲ್ಲಿ ರೈಲು ಓಡಾಟ ಸಾಧ್ಯವಾಗಲಿದೆ. ಅದರ ಮುಂದುವರಿದ ಭಾಗವಾಗಿ ಮತ್ತೊಂದು ಭಾಗದಕ್ಕೆ ಮೆಟ್ರೋ ಒದಗಿಸಲು ಮೂರನೇ ಹಂತದ ಒಟ್ಟಾರೆ 32.15 ಕಿ.ಮೀ. ಯೋಜನೆಗೆ ಚಾಲನೆ ನೀಡಲು ನಿರ್ಧರಿಸಲಾಯಿತು ಎಂದರು.

ಮೂರನೇ ಹಂತದ ಕಾಮಗಾರಿಯನ್ನು 2028ರ ವೇಳೆಗೆ ಪೂರ್ಣಗೊಳಿಸುವುದಾಗಿ ಬಿಎಂಆರ್‌ಸಿಎಲ್ ವಿಶ್ವಾಸ ವ್ಯಕ್ತಪಡಿಸಿದೆ. 15,611 ಕೋಟಿ ರೂ. ಮೊತ್ತದ ಯೋಜನೆಗೆ ರಾಜ್ಯ ಸರ್ಕಾರ ಶೇ.85ರಷ್ಟು ಮತ್ತು ಕೇಂದ್ರ ಸರ್ಕಾರ ಶೇ.15ರಷ್ಟು ಹಣ ಒದಗಿಸಲಿವೆ. ಇದಕ್ಕಾಗಿ ಭೂಮಿ ಸ್ವಾಧೀನ ಸಹ ಅಗತ್ಯವಿದ್ದು, ಬಿಎಂಆರ್‌ಸಿಎಲ್ ಈಗಾಗಲೇ ಯೋಜನಾ ವರದಿ ಸಿದ್ಧಪಡಿಸಿದೆ. ಅದಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಸಹ ಪಡೆದಿದೆ ಎಂದು ಸಚಿವರು ವಿವರಿಸಿದರು.

ನಿವೇಶನ ಕಂತು ಪಾವತಿಸಲು ಸಮಯ:

ಕೆಂಪೇಗೌಡ ಲೇಔಟ್ ಸೇರಿ ವಿವಿಧ ಹೊಸ ಬಡಾವಣೆಗಳಲ್ಲಿನ 2016-17ನೇ ಸಾಲಿನಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಆಗ ಲೀಸ್ ಕಂ ಸೇಲ್ ನಿವೇಶನಗಳ ಹಂಚಿಕೆಯಾದವರು ತಮ್ಮ ಪಾಲಿನ ಕಂತುಕಟ್ಟಲು ಸಾಧ್ಯವಾಗದೆ ನಿವೇಶನ ವಾಪಸ್‌ ಆಗಿವೆ. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಬಡ ಜನರು ಸೂಕ್ತ ಕಾಲದಲ್ಲಿ ಹಣ ಪಾವತಿ ಮಾಡಲು ಸಾಧ್ಯವಾಗಿಲ್ಲ. ಇಂತಹವರಿಗೆ ಅನ್ಯಾಯ ಆಗಬಾರದು ಎಂದು ಈಗ ಮತ್ತೆ ಅಂತಹವರಿಗೆ 3 ತಿಂಗಳ ಕಾಲಾವಕಾಶ ನೀಡಿ ಫಲಾನುಭವಿ ಪಾಲಿನ ಕಂತು ಕಟ್ಟಲು ಸಮಯ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಕೆ.ಆರ್ ಪುರಂ ಎನ್‌ಜಿಎಫ್ ಜಾಗದಲ್ಲಿ ಬೃಹತ್ ಪಾರ್ಕ್‌:

ಕೆ.ಆರ್. ಪುರ ತಾಲ್ಲೂಕಿನ ಎನ್‌ಜಿಎಫ್‌ನಲ್ಲಿ 110 ಎಕರೆ ಜಮೀನು ಲಭ್ಯವಿದ್ದು, ಇದನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕು ಎಂದು ವಿವಿಧ ಪ್ರಸ್ತಾವನೆಗಳು ಬಂದಿದ್ದವು. ಆದರೆ, ಅಲ್ಲಿ ಸುಮಾರು 65 ಎಕರೆ ಜಾಗದಲ್ಲಿ ಟ್ರೀ ಪಾರ್ಕ್‌ ನಿರ್ಮಿಸಲು ಇಂದಿನ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು. ಇದಕ್ಕಾಗಿ 11 ಕೋಟಿ ರೂ. ಒದಗಿಸಲಾಗುವುದು ಎಂದು ಸಚಿವರು ಹೇಳಿದರು.

ಇಲ್ಲಿ ಸುಮಾರು ಒಂದು ಎಕರೆ ಜಾಗ 25ರಿಂದ 30 ಕೋಟಿ ರೂ. ಬೆಲೆಬಾಳುತ್ತಿದೆ. ಅಂದರೆ, ಸುಮಾರು 1500 ಕೋಟಿ ರೂ. ಮೌಲ್ಯದ ಜಾಗವನ್ನು ಪಾರ್ಕ್‌ ನಿರ್ಮಿಸಲು ಬಳಸಿಕೊಳ್ಳಲು ನಿರ್ಧರಿಸಲಾಯಿತು. ನಗರದ ಮಧ್ಯಭಾಗದಲ್ಲಿ ಲಾಲ್‌ಬಾಗ್, ಕಬ್ಬನ್‌ಪಾರ್ಕ್‌ ಇವೆ. ಆದರೆ, ಹೊರವಲಯದ ಜನರಿಗೆ ಅಂತಹ ಸೌಲಭ್ಯಗಳು ಇಲ್ಲ. ಆದ್ದರಿಂದ ವಿವಿಧ ಜಾತಿಯ ಮರಗಳು, ಮಕ್ಕಳು ಮತ್ತು ವಯಸ್ಕರಿಸಿಗೆ ಸೌಲಭ್ಯಗಳು, ಕ್ರೀಡಾಂಗಣ ಹೀಗೆ ವಿವಿಧ ಸೌಲಭ್ಯ ಒಳಗೊಂಡ ಪಾರ್ಕ್‌ ನಿರ್ಮಿಸಲು ನಿರ್ಧರಿಸಲಾಯಿತು ಎಂದರು.

ಸಿಎಎ, ಜಾತಿಗಣತಿ ವಿಷಯ ಚರ್ಚೆಯಾಗಿಲ್ಲ:

ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವ ಸಿಎಎ ಬಗ್ಗೆಯಾಗಲೀ ಅಥವಾ ರಾಜ್ಯದಲ್ಲಿ ಸಲ್ಲಿಕೆಯಾಗಿರುವ ಜಾತಿಗಣತಿ ವರದಿ ಬಗ್ಗೆಯಾಗಲೀ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಯಾಗಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಸಿಎಎ ಕಾಯ್ದೆಯಲ್ಲಿ ದಕ್ಷಿಣ ಭಾರತದವರಿಗೆ ಒಂದು ನ್ಯಾಯ, ಉತ್ತರದವರಿಗೆ ಒಂದು ನ್ಯಾಯ ಮಾಡಲಾಗಿದೆ. ಶ್ರೀಲಂಕಾ ಸರ್ಕಾರ ಮತ್ತು ಎಲ್‌ಟಿಟಿಇ ಸಂಘರ್ಷದಲ್ಲಿ ನಿರಾಶ್ರಿತರಾಗಿ ದಕ್ಷಿಣದ ರಾಜ್ಯಗಳಿಗೆ ವಲಸೆ ಬಂದವರಿಗೆ ಸಿಎಎ ಅಡಿ ಪೌರತ್ವ ನೀಡುವ ಬಗ್ಗೆ ಯಾವುದೇ ಪಸ್ತಾಪ ಇಲ್ಲ. ಎಲ್‌ಟಿಟಿ ಬಗ್ಗೆ ಯಾವ ಕ್ರಮವಾದರೂ ಕೈಗೊಳ್ಳಲಿ ಅದರ ಬಗ್ಗೆ ನಮ್ಮ ಭಿನ್ನಾಭಿಪ್ರಾಯವಿಲ್ಲ. ಆದರೆ, ತಮಿಳುನಾಡಿನ ಸಾಕಷ್ಟು ಜನರು ನಿರಾಶ್ರಿತರಾಗಿ ಬಂದಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶ ಮುಂತಾದ ದೇಶಗಳಿಂದ ನಿರಾಶ್ರಿತರಾಗಿ ಬಂದವರಿಗೆ ಪೌರತ್ವ ನೀಡಲು ಮುಂದಾದ ಸರ್ಕಾರ, ಶ್ರೀಲಂಕಾದಿಂದ ದಕ್ಷಿಣದ ರಾಜ್ಯಗಳಿಗೆ ನಿರಾಶ್ರಿತರಾಗಿ ಬಂದವರ ಬಗ್ಗೆ ಏಕೆ ಒಲವು ತೋರುತ್ತಿಲ್ಲ ಎಂದು ಪ್ರಶ್ನಿಸಿದರು.

ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ

ಕರ್ನಾಟಕ ಎಂದು ಹೆಸರಿಟ್ಟು 50 ವರ್ಷವಾಗಿ ಈ ಸಂದರ್ಭದಲ್ಲಿ ಕನ್ನಡ ನಾಡಿನ ಸಂಕೇತ ಭುವನೇಶ್ವರಿ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ನಿರ್ಮಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಕೆಂಗಲ್ ಹನುಮಂತಯ್ಯ ಪ್ರತಿಮೆ ರಸ್ತೆಯ ಎಡಭಾಗದಲ್ಲಿ ಪ್ರತಿಮೆ ಸ್ಥಾಪನೆಯಾಗಲಿದ್ದು, ಇದಕ್ಕಾಗಿ 23 ಕೋಟಿ ರೂ. ವೆಚ್ಚದ ಪ್ರಾಥಮಿಕ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಲಾಗಿದೆ. ಕಲ್ಲು ಅಥವಾ ಲೋಹದ ಪ್ರತಿಮೆ ನಿರ್ಮಾಣ ಮಾಡುವುದು, ಅದರ ಎತ್ತರ ಹೀಗೆ ಮುಂತಾದವುಗಳ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದು ಸಚಿವರು ಹೇಳಿದರು.

More News