ಬೆಂಗಳೂರು: ಕಾಂಗ್ರೆಸ್ ನಿಂದ ನನಗೆ ಆಹ್ವಾನ ಬಂದಿದ್ದು ನಿಜ. ನಾವು ನಿಮಗೆ ಟಿಕೆಟ್ ಕೊಡುತ್ತೇವೆ. ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಕಾಂಗ್ರೆಸ್ ನಿಂದ ಆಹ್ವಾನ ಬಂದಿತ್ತು. ಆದರೆ ನಾನು, ಕಾಂಗ್ರೆಸ್ ಗೆ ಸೇರಲ್ಲ ಎಂದು ಮಾಜಿ ಸಿಎಂ ಡಿವಿ ಸದಾನಂದ ಗೌಡ ಸ್ಪಷ್ಟಪಡಿಸಿದರು.
ಆದರೆ ನಾನು ಪಕ್ಷ ಶುದ್ದೀಕರಣ ಮಾಡುವತ್ತ ಗಮನ ಹರಿಸುತ್ತೇನೆ ಎಂದು ಹೇಳಿದರು. ಟಿಕೆಟ್ ಕೈತಪ್ಪಿದ್ದರಿಂದ ನೋವಾಗಿದ್ದು ನಿಜ. ಆದರೆ ನನ್ನ ಈ ಸ್ಥಿತಿಗೆ ಕಾರಣರಾದವರು ಪಶ್ಚಾತ್ತಾಪ ಅನುಭವಿಸುತ್ತಾರೆ ಎಂದರು.
ರಾಜ್ಯದಲ್ಲಿ ಮೋದಿ ಪರ ವಾತಾವರಣ ಸೃಷ್ಟಿಸಬೇಕು
ರಾಜ್ಯದಲ್ಲಿ ಮೋದಿ ಪರವಾದ ವಾತಾವರಣ ಸೃಷ್ಟಿಯಾಗಬೇಕು. ಅವರು ಪರಿವರ್ತನೆಯ ಹರಿಕಾರ. ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು. ಇದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಜನರ ಪರವಾದ ಹಾಗೂ ಜನರು ಒಪ್ಪಿಕೊಳ್ಳುವ ಪಕ್ಷವಾಗಬೇಕು ಎಂದರು.
ಮೋದಿ ಬಿಜೆಪಿ ಕರ್ನಾಟಕದಲ್ಲಿ ಇರಬೇಕು. ಪರಿವಾರ ವಾದ, ಭ್ರಷ್ಟಾಚಾರ ವಾದ, ಜಾತಿವಾದ ಮುಕ್ತವಾದ ಪಕ್ಷ ಬಿಜೆಪಿ ಆಗಬೇಕು. ಶುದ್ದೀಕರಣದ ಅಭಿಯಾನಕ್ಕೆ ವೇಗ ಕೊಡಲು ನನ್ನಿಂದ ಮಾತ್ರ ಸಾಧ್ಯ ಎಂದರು.
ನಾನು ಪಕ್ಷಕ್ಕಾಗಿ ಕೆಲಸ ಮಾಡಿದ ನಿಷ್ಠಾವಂತ ಕಾರ್ಯಕರ್ತ. ನಾನು ಸಿಂಗಲ್ ಮ್ಯಾನ್ ಆರ್ಮಿ ಅಲ್ಲ. ಪಕ್ಷದಲ್ಲಿ ಒಂದಷ್ಟು ಜನರು ಶುದ್ಧೀಕರಣ ಬಯಸುತ್ತಾರೆ. ಅವರನ್ನು ಕ್ರೋಡೀಕರಣ ಆಗುತ್ತಾರೆ.
ಪಕ್ಷದ ಜವಾಬ್ದಾರಿ ವಹಿಸಿದವರು ಸ್ವಾರ್ಥಿಗಳು ಆಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಕುಟುಂಬ,ಮಕ್ಕಳು, ಜಾತಿ, ತನ್ನವರಿಗೆ ಸೀಮಿತ ಮಾಡಿದ್ದಾರೆ. ಮೋದಿಯವರ ಮೇರಾ ದೇಶ್ ಮೇರಾ ಪರಿವಾರ್ ಆಗಬೇಕು ಬಿಜೆಪಿ ಎಂದು ಅಭಿಪ್ರಾಯ ಪಟ್ಟರು.
ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗುತ್ತಿದೆ
ಸರ್ವಾಧಿಕಾರ ರಾಜಕೀಯದಲ್ಲಿ ನಡೆಯುವುದಿಲ್ಲ. ಬಿಜೆಪಿ ಶುದ್ದೀಕರಣ ಆಗುವವರೆಗೆ ನಾನು ವಿರಮಿಸುದಿಲ್ಲ. ಲೋಕಸಭಾ ಚುನಾವಣೆಯ ಬಳಿಕ ಶುದ್ದೀಕರಣ ಕಾರ್ಯಕ್ಕೆ ವೇಗ ಕೊಡಲಾಗುವುದು ಎಂದರು.
ಯಾವುದೇ ಬೆಲೆ ತೆತ್ತಾದರೂ ನಾನು ಪಕ್ಷ ಶುದ್ದೀಕರಣ ಕೆಲಸ ಮಾಡುತ್ತೇನೆ. ಆಡಳಿತ ಮಾಡುವವರು ಸತ್ಯವಂತರಾಗಬೇಕು. ಸುಳ್ಳು ಹೇಳಬಾರದು. ಬೆಂಗಳೂರು ಉತ್ತರದಲ್ಲಿ ಟಿಕೆಟ್ ಗಾಗಿ ಒಬ್ಬನ ಹೆಸರು ಮಾತ್ರ ಇತ್ತು. 142 ಜನರು ನನ್ನ ಹೆಸರನ್ನು ಆಯ್ಕೆ ಮಾಡಿದ್ದರು. ಆದರೆ ಇದನ್ನು ಕೇಂದ್ರದಲ್ಲಿ ಮಂಡನೆ ಮಾಡಲು ಸಾಧ್ಯವಾಗದವರು ನಮ್ಮ ನಾಯಕರಲ್ಲ.
ಮೋದಿ ವಾದವನ್ನು ತಿರುಚಿದ್ರಾ ಅದನ್ನು ಶುದ್ದೀಕರಣ ಮಾಡಬೇಕು ಎಂಬುವುದು ನನ್ನ ಉದ್ದೇಶವಾಗಿದೆ. ಕೆ.ಎಸ್ ಈಶ್ವರಪ್ಪ ಈಗಾಗಲೇ ಹಲವಾರು ಸಂಗತಿಗಳನ್ನು ಹೇಳಿದ್ದಾರೆ ಎಂದರು.

ಶೋಭಾ ಕರಂದ್ಲಾಜೆ ಅವರಿಗೆ ಬೆಂಬಲ ಕೊಡುತ್ತೀರಾ? ಎಂಬ ಪ್ರಶ್ನೆಗೆ, ಶೋಭಾ ಕರಂದ್ಲಾಜೆ ಪರವಾಗಿ ನಾನು ಈಗಾಗಲೇ ಪ್ರಚಾರ ಮಾಡಿದ್ದೇನೆ. ಅವರಿಗೆ ಬೆಂಬಲ ಕೊಡದೆ ಇರುವ ಪ್ರಶ್ನೆ ಉದ್ಭವವಾಗಲ್ಲ ಎಂದರು.
ಆರತಿ ಎತ್ತಿ ಕರೆದು ಮಂಗಳಾರತಿ ಮಾಡಿದ್ರು!
ನನ್ನನ್ನು ಚೆಂದ ಆರತಿ ಎತ್ತಿ ಬನ್ನಿ ಸ್ಪರ್ಧೆ ಮಾಡಿ ಎಂದು ಕರೆದರು, ಆದರೆ ಇವಾಗ ಮಂಗಳಾರತಿ ಮಾಡಿ ಕಳಿಸಿದ್ದಾರೆ ಎಂದು ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಒಕ್ಕಲಿಗ ಸಂಘದ ಭೇಟಿ ವಿಚಾರವಾಗಿ ಮಾತನಾಡಿ, ಒಕ್ಕಲಿಗ ಸಂಘದವರು ನಮ್ಮ ಸಮಾಜಕ್ಕೆ ಬಿಜೆಪಿಯಲ್ಲಿ ಪ್ರಾತಿನಿಧ್ಯ ಕಡಿಮೆ ಆಗ್ತಿದೆ ಎಂದಿದ್ದಾರೆ. ದೇವೇಗೌಡರ ಮೆಟೀಲಿಯಲ್ ಗೆ ಬಿಜೆಪಿ ಸ್ಟಿಕ್ಕರ್ ಅಂಟಿಸುತ್ತಿದೆ ಎಂದು ಹೇಳಿದ್ದಾರೆ ಎಂದು ಉಲ್ಲೇಖಿಸಿದರು.