ಬೆಂಗಳೂರು : ಕಾಂಗ್ರೆಸ್ ಕರ್ನಾಟಕದ 17 ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಎರಡನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಸಚಿವರ ಮಕ್ಕಳಿಗೆ ಮಣೆ ಹಾಕಿದೆ.
ಸಾಕಷ್ಟು ಕಸರತ್ತು ಹಾಗೂ ಭಾರೀ ಪೈಪೋಟಿಯ ನಡುವೆ ಲೋಕಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದ್ದ 21 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ, ಪಟ್ಟಿ ಬಿಡುಗಡೆ ಮಾಡಿದೆ. ಆ ಮೂಲಕ ಕಾಂಗ್ರೆಸ್ ರಾಜ್ಯದಲ್ಲಿ ಈವರೆಗೆ ಒಟ್ಟು 24 ಕೈ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಇನ್ನು ನಾಲ್ಕು ಕ್ಷೇತ್ರಗಳ ಹೆಸರನ್ನು ಬಾಕಿ ಉಳಿಸಿಕೊಂಡಿದೆ. ಎಐಸಿಸಿ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಮಂಗಳವಾರ ರಾತ್ರಿ ನಡೆದ ಕೇಂದ್ರ ಚುನಾವಣ ಸಮಿತಿ (ಸಿಇಸಿ)ಯ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ರಾಜ್ಯದ ಏಳು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಇದೀಗ ಎರಡನೇ ಪಟ್ಟಿಯಲ್ಲಿ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಎರಡನೇ ಪಟ್ಟಿಯಲ್ಲಿ ಅಂದುಕೊಂಡಂತೆ ಯಾವೊಬ್ಬ ಹಾಲಿ ಸಚಿವರನ್ನೂ ಲೋಕಸಭೆ ಅಖಾಡಕ್ಕೆ ಇಳಿಸಿಲ್ಲ. ಲೋಕಾ ಕಣಕ್ಕಿಳಿಯಲು ಹಿಂದೇಟು ಹಾಕಿದ್ದ ಸಚಿವರು ತಮ್ಮ ಬದಲಿಗೆ ಮಕ್ಕಳನ್ನು ಲೋಕಾ ಅಖಾಡಕ್ಕೆ ಇಳಿಸಿದ್ದಾರೆ.
ಐವರು ಸಚಿವರ ಮಕ್ಕಳಿಗೆ ಕಾಂಗ್ರೆಸ್ ಮಣೆ:

ಕಾಂಗ್ರೆಸ್ ಹೈ ಕಮಾಂಡ್ ಪ್ರಕಟಿಸಿದ ರಾಜ್ಯದ 17 ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಐವರು ಸಚಿವರ ಮಕ್ಕಳಿಗೆ ಮಣೆ ಹಾಕಿದೆ. ಸಚಿವರನ್ನು ಅಖಾಡಕ್ಕೆ ಇಳಿಸುವ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಆದರೆ ಬಹುತೇಕ ಸಚಿವರು ಅಖಾಡಕ್ಕೆ ಇಳಿಯಲು ಹಿಂದೇಟು ಹಾಕಿದ್ದರು. ಇದೀಗ ಸಚಿವರು ತಾವು ಸ್ಪರ್ಧಿಸುವ ಬದಲು ತಮ್ಮ ಮಕ್ಕಳನ್ನು ಅಖಾಡಕ್ಕೆ ಇಳಿಸಲು ಸಫಲರಾಗಿದ್ದಾರೆ. ಇತ್ತ ಕಾಂಗ್ರೆಸ್ ಹೈ ಕಮಾಂಡ್ ಸಚಿವರ ಮಕ್ಕಳಿಗೆ ಮಣೆ ಹಾಕಿದೆ.
ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ರನ್ನು ಅಖಾಡಕ್ಕೆ ಇಳಿಸಲಾಗಿದೆ. ಇನ್ನು ಬಾಗಲಕೋಟೆಯಲ್ಲಿ ವೀಣಾ ಕಾಶಪ್ಪನವರ್ ರ ಪ್ರಬಲ ಲಾಬಿ ಮಧ್ಯೆ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್ ಗೆ ಹೈ ಕಮಾಂಡ್ ಮಣೆ ಹಾಕಿದೆ. ಇತ್ತ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿಯನ್ನು ಕಣಕ್ಕಿಳಿಸಿದೆ. ಇನ್ನು ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಗೆ ಟಿಕೆಟ್ ನೀಡಿದೆ. ಅದೇ ರೀತಿ ಬೀದರ್ ನಲ್ಲಿ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆಗೆ ಮಣೆ ಹಾಕಿದೆ. ಬೀದರ್ ಕ್ಷೇತ್ರಕ್ಕೆ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಪ್ರಬಲ ಆಕಾಂಕ್ಷಿಯಾಗಿದ್ದರು.
ಮಲ್ಲಿಕಾರ್ಜುನ ಖರ್ಗೆ ಅಳಿಯನಿಗೆ ಟಿಕೆಟ್:

ಇತ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಲಬುರ್ಗಿ ಲೋಕಸಭೆ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಸಾಕಷ್ಟು ಬೇಡಿಕೆ ಇತ್ತು. ಆದರೆ ನಿರೀಕ್ಷೆಯಂತೆ ಖರ್ಗೆ ಈ ಬಾರಿ ಸ್ಪರ್ಧಿಸದಿರಲು ನಿರ್ಧರಿಸಿದ್ದು, ಕಲಬುರ್ಗಿ ಕ್ಷೇತ್ರದಲ್ಲಿ ತಮ್ಮ ಅಳಿಯ ರಾಧಾಕೃಷ್ಣ ದೊಡ್ಡಮನಿಗೆ ಟಿಕೆಟ್ ನೀಡಿದ್ದಾರೆ.
ರಾಧಾಕೃಷ್ಣ ದೊಡ್ಡಮನಿ ಉದ್ಯಮಿಯಾಗಿದ್ದು, ರಾಜಕೀಯವಾಗಿ ಯಾವತ್ತೂ ತೆರೆಮರೆಯಲ್ಲೇ ಕೆಲಸ ಮಾಡಿದವರು. ಗುರುಮಿಠ್ಕಲ್ ಕ್ಷೇತ್ರದಲ್ಲಿ ರಾಧಾಕೃಷ್ಣ ಹೆಚ್ಚು ಚಿರಪರಿಚಿತ ವ್ಯಕ್ತಿಯಾಗಿದ್ದಾರೆ. ಈ ಬಾರಿ ಖರ್ಗೆ ತಮ್ಮ ಬದಲಿಗೆ ಅಳಿಯನಿಗೆ ಟಿಕೆಟ್ ನೀಡಿದ್ದಾರೆ.
ಶಾಮನೂರು ಸೊಸೆ, ಮಾಜಿ ಸಚಿವರ ಪುತ್ರರಿಗೆ ಟಿಕೆಟ್:

ಇನ್ನು ದಾವಣಗೆರೆ ಲೋಕಸಭೆ ಕ್ಷೇತ್ರದಿಂದ ನಿರೀಕ್ಷೆಯಂತೆಯೇ ಶಾಮನೂರು ಶಿವಶಂಕರಪ್ಪರ ಸೊಸೆ ಹಾಗೂ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪತ್ನಿ ಪ್ರಭಾ ಮಲ್ಲಿಕಾರ್ಜುನಗೆ ಟಿಕೆಟ್ ನೀಡಲಾಗಿದೆ. ಇನ್ನು ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ರೆಹಮಾನ್ ಖಾನ್ ಪುತ್ರ ಮನ್ಸೂರ್ ಅಲಿ ಖಾನ್ ಗೆ ಬೆಂಗಳೂರು ಕೇಂದ್ರದಿಂದ ಟಿಕೆಟ್ ನೀಡಲಾಗಿದೆ. ಬೆಂಗಳೂರು ಕೇಂದ್ರಕ್ಕೆ ಎನ್.ಎ.ಹ್ಯಾರೀಸ್ ಪುತ್ರ ನಲಪಾಡ್ ಪ್ರಬಲ ಆಕಾಂಕ್ಷಿಯಾಗಿದ್ದು, ತೀವ್ರ ಲಾಬಿ ನಡೆಸಿದ್ದರು. ಆದರೆ ಹೈ ಕಮಾಂಡ್ ನಲಪಾಡ್ ಬದಲು ಮನ್ಸೂರ್ ಅಲಿ ಖಾನ್ ಗೆ ಮಣೆ ಹಾಕಿದೆ.
ಹೊಸ ಮುಖಗಳಿಗೆ ಟಿಕೆಟ್:

ಧಾರವಾಡ ಜಿಲ್ಲೆ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿಗೆ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ನವಲಗುಂದ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ವಿನೋದ ಅಸೂಟಿ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಎನ್.ಎಚ್.ಕೋನರಡ್ಡಿ ಕಾಂಗ್ರೆಸ್ ಸೇರಿದ್ದರಿಂದ ಅವರಿಗೆ ಟಿಕೆಟ್ ಕೈ ತಪ್ಪಿತ್ತು. ಈ ಬಾರಿ ಕ್ಷೇತ್ರದಲ್ಲಿ ಟಿಕೆಟ್ ಗೆ ಪ್ರಬಲ ಪೈಪೋಟಿ ಇದ್ದರೂ ಕೊನೆಗೆ ಹೈ ಕಮಾಂಡ್, ಕ್ಷೇತ್ರದಲ್ಲಿ ಕುರುಬ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅಸೂಟಿ ಅವರಿಗೆ ಟಿಕೆಟ್ ನೀಡಿದೆ.
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲೂ ಕಾಂಗ್ರೆಸ್ ಹೊಸಮುಖಕ್ಕೆ ಮಣೆ ಹಾಕಿದೆ. ವೃತ್ತಿಯಲ್ಲಿ ವಕೀಲರಾಗಿರುವ ಪದ್ಮರಾಜ್ ಗೆ ಟಿಕೆಟ್ ನೀಡಿದೆ.
ಬಿಲ್ಲವ ಸಮುದಾಯದ ಯುವ ನಾಯಕರಾಗಿರುವ ಅವರು, ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿಯವರ ಪ್ರೀತಿಯ ಶಿಷ್ಯನಾಗಿದ್ದಾರೆ. ಪದ್ಮರಾಜ್ ಅವರು ವೃತ್ತಿಯಲ್ಲಿ ವಕೀಲರಾಗಿದ್ದು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.
ಮೈಸೂರು ಕ್ಷೇತ್ರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಎಂ.ಲಕ್ಷ್ಮಣ್ ಗೆ ಟಿಕೆಟ್ ನೀಡಿದೆ.
ಕಳೆದೆರಡು ವರ್ಷಗಳಿಂದ ಕೊಡುಗು ಜಿಲ್ಲೆಯ ಉಸ್ತುವಾರಿಯಾಗಿ ಎಂ.ಲಕ್ಷ್ಮಣ್ ದುಡಿಯುತ್ತಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪ್ರತಾಪ್ ಸಿಂಹಗೆ ಬಿಜೆಪಿಯಿಂದ ಟಿಕೆಟ್ ನಿರಾಕರಿಸಿ, ರಾಜ ವಂಶಸ್ಥ ಯದುವೀರ್ ಒಡೆಯರ್‌ಗೆ ಮಣೆ ಹಾಕಿದೆ. ಇದರಿಂದ ಹಿನ್ನೆಲೆಯಲ್ಲಿ ಮೈಸೂರಿನ ಕಾಂಗ್ರೆಸ್ ಒಕ್ಕಲಿಗ ಸಮುದಾಯದ ಮತಗಳನ್ನು ತನ್ನ ಪರವಾಗಿ ಸೆಳೆಯಲು ಕಾಂಗ್ರೆಸ್ ಮುಂದಾಗಿದೆ. ಹೀಗಾಗಿ ಮೈಸೂರಲ್ಲಿ ಸಕ್ರಿಯರಾಗಿರುವ ಒಕ್ಕಲಿಗ ಎಂ.ಲಕ್ಷ್ಮಣ್ ಗೆ ಟಿಕೆಟ್ ನೀಡಿದೆ.
ಇನ್ನೂ ನಾಲ್ಕು ಕ್ಷೇತ್ರ ಬಾಕಿ:

ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬಳ್ಳಾರಿ ಈ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ. ಕೋಲಾರದಿಂದ ರಾಜ್ಯಸಭೆ ಮಾಜಿ ಸದಸ್ಯ ಡಾ.ಎಲ್. ಹನುಮಂತಯ್ಯ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅಳಿಯನ ನಡುವೆ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆದಿದೆ. ಇನ್ನು ಚಾಮರಾಜನಗರ ಕ್ಷೇತ್ರದಿಂದ ಸಚಿವ ಹೆಚ್.ಸಿ.ಮಹದೇವಪ್ಪ ಅಖಾಡಕ್ಕೆ ಇಳಿಯಲು ಆಸಕ್ತಿ ಹೊಂದಿಲ್ಲ. ತನ್ನ ಬದಲು ಮಗ ಸುನಿಲ್ ಬೋಸ್ ಕಣಕ್ಕಿಳಿಸುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಚಾಮರಾಜನಗರ ಕ್ಷೇತ್ರದಲ್ಲಿ ಮಹದೇವಪ್ಪನವರೇ ನಿಲ್ಲುವಂತೆ ಪಟ್ಟು ಹಿಡಿದಿದ್ದಾರೆ. ಇದರಿಂದ ಚಾಮರಾಜನಗರ ಗೊಂದಲ ಹಾಗೇ ಮುಂದುವರಿದಿದೆ.
ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಮಾಜಿ ಸಚಿವ ಎಂ.ಆರ್.ಸೀತಾರಾಮ್ ಪುತ್ರ ಹಾಗೂ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ರಕ್ಷಾ ರಾಮಯ್ಯ ಮುಂಚೂಣಿಯಲ್ಲಿದ್ದಾರೆ. ಆದರೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಕೂಡ ತೀವ್ರ ಲಾಬಿ ನಡೆಸುತ್ತಿದ್ದಾರೆ. ಹೀಗಾಗಿ ಈ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಮಾಡದೇ ಹಾಗೇ ಉಳಿಸಿಕೊಂಡಿದೆ. ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲೂ ತೀವ್ರ ಪೈಪೋಟಿ ಎಸುರಾಗಿತ್ತು. ವಿಮೆಸ್.ಉಗ್ರಪ್ಪ, ಸಚಿವ ನಾಗೇಂದ್ರ ಸಂಬಂಧಿ, ವೆಂಕಟೇಶ್ ಪ್ರಸಾದ್ ಆಕಾಂಕ್ಷಿಗಳಾಗಿದ್ದರು. ಆದರೆ ಕೊನೆಗೆ ಸಿಎಂ ಸಿದ್ದರಾಮಯ್ಯ ಆಪ್ತ ಶಾಸಕ ತುಕಾರಾಂ ಹೆಸರು ಫೈನಲ್ ಆಗಿದೆ ಎನ್ನಲಾಗಿದೆ. ಇನ್ನು ಎರಡು ದಿನಗಳಲ್ಲಿ ಈ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.

ಯಾರಿಗೆ ಯಾವ ಕ್ಷೇತ್ರದ ಟಿಕೆಟ್:
ಬೀದರ್ : ಸಾಗರ್ ಖಂಡ್ರೆ
ಚಿತ್ರದುರ್ಗ : ಬಿ.ಎನ್.ಚಂದ್ರಪ್ಪ
ದಾವಣಗೆರೆ : ಪ್ರಭಾ ಮಲ್ಲಿಕಾರ್ಜುನ್
ಕೊಪ್ಪಳ : ರಾಜಶೇಖರ್ ಹಿಟ್ನಾಳ್
ಚಿಕ್ಕಮಗಳೂರು -ಉಡುಪಿ : ಜಯಪ್ರಕಾಶ್ ಹೆಗ್ಡೆ
ಬೆಳಗಾವಿ : ಮೃಣಾಲ್ ಹೆಬ್ಬಾಳ್ಕರ್
ಬಾಗಲಕೋಟೆ : ಸಂಯುಕ್ತ ಪಾಟೀಲ್
ಬೆಂಗಳೂರು ಕೇಂದ್ರ : ಮನ್ಸೂರ್ ಅಲಿ ಖಾನ್
ಬೆಂಗಳೂರು ಉತ್ತರ : ಪ್ರೊ.ರಾಜೀವ್ ಗೌಡ
ಬೆಂಗಳೂರು ದಕ್ಷಿಣ : ಸೌಮ್ಯ ರೆಡ್ಡಿ
ಚಿಕ್ಕೋಡಿ : ಪ್ರಿಯಾಂಕ್ ಜಾರಕಿಹೊಳಿ
ಧಾರವಾಡ : ವಿನೋದ್ ಅಸೂಟಿ
ದಕ್ಷಿಣ ಕನ್ನಡ : ಆರ್.ಪದ್ಮರಾಜ್
ಕಲಬುರಗಿ : ರಾಧಾಕೃಷ್ಣ ದೊಡ್ಡಮನಿ
ಮೈಸೂರು -ಎಂ.ಲಕ್ಷ್ಮಣ್
ಉತ್ತರ ಕನ್ನಡ : ಅಂಜಲಿ ನಿಂಬಾಳ್ಕರ್
ರಾಯಚೂರು : ಜಿ.ಕುಮಾರ್ ನಾಯಕ್