ಮುಂಬರುವ ಜನವರಿ ತಿಂಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನ (IPL) ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲಾ ತಂಡಗಳು ಸೇರಿದಂತೆ ಬಿಸಿಸಿಐ(BCCI) ಭರ್ಜರಿ ತಯಾರಿ ನಡೆಸುತ್ತಿವೆ.
ಈ ಬಾರಿ ಐಪಿಎಲ್ ನಲ್ಲಿ ಎರಡು ಹೊಸ ತಂಡಗಳಾದ ಲಖನೌ ಮತ್ತು ಅಹಮದಾಬಾದ್ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಆಟಗಾರರನ್ನು ಉಳಿಸುವುದು ಮತ್ತು ಕಳುಹಿಸುವ ಪ್ರಕ್ರಿಯೆ ಆರಂಭಗೊಂಡಿವೆ. ಲಖನೌ ಮತ್ತು ಅಹಮದಾಬಾದ್ ತಂಡಗಳಿಗೆ ಮೂವರು ಪ್ರಮುಖ ಆಟಗಾರರನ್ನು ಸೇರ್ಪಡೆ ಮಾಡಲು ನವೆಂಬರ್ 30ರವರೆಗೆ ಸಮಯವಕಾಶವಿದೆ. ಆದ್ದರಿಂದ ಈ ಗಡುವಿನೊಳಗೆ ಆಟಗಾರರನ್ನು ಸೇರಿಸಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡುತ್ತಿವೆ.
ಆದ್ದರಿಂದ ಅನೇಕ ಅಚ್ಚರಿ ಬೆಳವಣಿಗೆಗಳು ನಡೆಯಲಿದ್ದು, ಕನ್ನಡಿಗ ಕೆ ಎಲ್ ರಾಹುಲ್ ಪಂಜಾಬ್ ಕಿಂಗ್ಸ್ ಪ್ರಾಂಚೈಸಿ ತೊರೆಯುವುದು ಬಹುತೇಕ ಖಚಿತವಾಗಿದ್ದು, ನೂತನ ತಂಡವನ್ನು ಸೇರಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ.

ಪಂಜಾಬ್ ಕಿಂಗ್ಸ್ ತಂಡದ ಕಪ್ತಾನನಾಗಿ ತಂಡವನ್ನು ಮುನ್ನೆಡೆಸಿದ್ದ ಕೆ ಎಲ್ ರಾಹುಲ್ ಅವರನ್ನು ಲಖನೌ ತಂಡ ಬಲೆ ಬೀಸಿದ್ದು, ಅಲ್ಲಿ ಸೇರಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಮೊದಲು ಕೆ ಎಲ್ ರಾಹುಲ್ ಆರ್ ಸಿಬಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು, ಈಗ ಅವರು ಬಹುತೇಕ ಲಖನೌ ತಂಡದ ಪಾಲಾಗಲಿದ್ದಾರೆ ಎನ್ನುವ ಸುದ್ದಿ ಬಂದಿದೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಆರ್ ಅಶ್ವಿನ್ ಮತ್ತು ಶ್ರೇಯಸ್ ಅಯ್ಯರ್ ಹೊರಬೀಳಲಿದ್ದಾರೆ, ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಷಬ್ ಪಂತ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಗಳಿವೆ.

ಹಾಗೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದಿನ ಮೂರು ವರ್ಷಗಳ ಕಾಲ ಮಹೇಂದ್ರ ಸಿಂಗ್ ಧೋನಿಯವರನ್ನು ಉಳಿಸಿಕೊಳ್ಳುಲಿದೆ ಎಂದು ತಿಳಿದುಬಂದಿದೆ. 2025ರವರೆಗೆ ಐಪಿಎಲ್ ನಲ್ಲಿ ಆಡುವುದಾಗಿ ಈ ಹಿಂದೆ ಎಂ ಎಸ್ ಧೋನಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.




