ಬೆಂಗಳೂರು : ಮಗುವೊಂದನ್ನು ದತ್ತು ಸ್ವೀಕರಿಸಿದ ಸಂಬಂಧ ಸೋಷಿಯಲ್ ಮಿಡಿಯಾ ಸೆಲಿಬ್ರಿಟಿ ಸೋನು ಶ್ರೀನಿವಾಸ ಗೌಡ ಎಂಬಾಕೆಯ ವಿರುದ್ಧ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಮಕ್ಕಳ ಕಲ್ಯಾಣಭಿವೃದ್ದಿ ಸಮಿತಿ (CHILD WELFARE COMMITTEE) ನೀಡಿರುವ ದೂರಿನ ಹಿನ್ನೆಲೆಯಲ್ಲಿ ಆಕೆಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಮಗುವನ್ನ ದತ್ತು ತೆಗೆದುಕೊಳ್ಳುವಲ್ಲಿ ಸೋನುಗೌಡ ಕಾನೂನು ಉಲ್ಲಂಘಿಸಿದ್ದಾರೆ ಎಂದು ಸಿಡಬ್ಲ್ಯುಸಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ದೂರು ದಾಖಲಾಗಿದ್ದು, ಸೋನುಗೌಡರಿಗೆ ನೋಟಿಸ್ ನೀಡಿ, ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದ 8 ವರ್ಷದ ಮಗುವನ್ನ ಸೋನುಗೌಡ ದತ್ತು ಪಡೆದಿದ್ದರು. ದತ್ತು ಪಡೆದ ಮೇಲೆ ಅವರು ಸಾರ್ವಜನಿಕವಾಗಿ ಯಾವುದೇ ಮಾಹಿತಿ ಹಂಚಿಕೊಳ್ಳುವಂತಿಲ್ಲ. ಆದರೆ ಸೋನುಗೌಡ ವಿಡಿಯೋದಲ್ಲಿ ಮಗುವಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಮಗುವಿನ ತಂದೆ, ತಾಯಿಗೂ ಕೂಡ ನೊಟೀಸ್ ನೀಡಿರುವ ಪೊಲೀಸರು, ಮಗುವನ್ನ ದತ್ತು ತೆಗೆದುಕೊಂಡಿದ್ದು ನಿಜನಾ ..?, ದತ್ತು ಕೊಡುವಾಗ ಹಣ ಪಡೆದಿದ್ರಾ …? ಮುಂತಾದ ಮಾಹಿತಿಯ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.
ಮಗುವನ್ನು ದತ್ತು ಸ್ವೀಕರಿಸಿದ ಮೇಲೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಮಗ್ರ ಮಾಹಿತಿ ಪಡೆಯುವ ಉದ್ದೇಶದಿಂದ ಸೋನು ಶ್ರೀನಿವಾಸ್ ಗೌಡರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.




