ಬೆಂಗಳೂರು : ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ಮಂಡ್ಯದ ಜನರನ್ನು ಬಳಸಿಕೊಂಡು ಜನರಿಗೆ ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಸಿದ್ದರಾಮಯ್ಯ ವಿರುದ್ದ ಪದೇ ಪದೇ ಒಕ್ಕಲಿಗರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಎಂಎಲ್ ಸಿ ಮರಿತಿಬ್ಬೇಗೌಡ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಸಕ್ಕರೆ ಕಾರ್ಖಾನೆ, ನೀರಾವರಿಗೆ 2000 ಕೋಟಿ ರೂಪಾಯಿ ನೀಡಿರುವುದು ಇಷ್ಟು ಅನುದಾನ ನೀಡಿರುವುದು ಇತಿಹಾಸವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಈ ಅಭಿವೃದ್ದಿಗಾಗಿ ಮಂಡ್ಯ ಜಿಲ್ಲೆಯ ರೈತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ ಮರಿ ತಿಬ್ಬೇಗೌಡ, ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಾಲ್ಕು ಭಾರಿ ಆಯ್ಕೆಯಾಗಿ ಬಂದಿದ್ದೇನೆ, ಎಸ್ ಎಂ ಕೃಷ್ಣ ಸಿಎಂ ಆಗಿದ್ದಾಗ ಕಾಂಗ್ರೆಸ್ ಪಕ್ಷದಿಂದ ಶಾಸಕನಾಗಿ ಆಯ್ಕೆಯಾಗಿದ್ದೆ, 2006ರಲ್ಲಿ ಪಕ್ಷೇತರನಾಗಿ ಮತ್ತೆರಡು ಬಾರಿ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿ ಬಂದಿದ್ದೇನೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ರೈತ ಕುಟುಂಬದಿಂದ ಬಂದವನಾಗಿದ್ದು, ಮೈಸೂರು ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದು ಮೈಸೂರು ವಿವಿ ಸಿಂಡಿಕೇಟ್ ಸದಸ್ಯರಾಗಿ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದೆ ಎಂದು ತಿಳಿಸಿದರಲ್ಲದೆ, ಎಚ್ ಡಿ ಕುಮಾರಸ್ವಾಮಿ ಬಗ್ಗೆ ವಿರೋಧ ಮಾಡಿದ್ದೆ ನನ್ನನ್ನು ಮೂಲೆಗುಂಪು ಮಾಡಲಾಯಿತು ಎಂದರು.