ಬೆಂಗಳೂರು : ಕಾಂಗ್ರೆಸ್ ಪಕ್ಷಕ್ಕೆ ಕಗ್ಗಂಟಾಗಿದ್ದ ನಾಲ್ಕು ಕ್ಷೇತ್ರಗಳ ಟಿಕೆಟ್ ಕೊನೆಗೂ ಫೈನಲ್ ಆಗಿದ್ದು, ಇಂದು ಸಂಜೆ ಮೂರನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ರಾಜ್ಯದಿಂದ ಬಾಕಿ ಉಳಿದಿರುವ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ವೇಳೆ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಹಲವು ಸುತ್ತಿನ ಚರ್ಚೆ ಬಳಿಕ ಇದೀಗ ಪಟ್ಟಿ ಅಂತಿಮಗೊಳಿಸಲಾಗಿದೆ.
ಚಾಮರಾಜನಗರ ಕ್ಷೇತ್ರಕ್ಕೆ ಸಚಿವ ಹೆಚ್ ಸಿ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅಂತಿಮವಾಗಿದ್ದಾರೆ. ಮಗನ ಬದಲು ಅಪ್ಪನ ಅಭ್ಯರ್ಥಿ ಮಾಡಲು ಪಟ್ಟು ಹಿಡಿದಿದ್ದ ಸಿಎಂ ಸಿದ್ದರಾಮಯ್ಯ ಅವರು, ಕೊನೆಗೆ ಮಹದೇವಪ್ಪ ಅವರ ಹಠಕ್ಕೆ ಮಣಿದು ಪುತ್ರ ಸುನೀಲ್ ಬೋಸ್ ಗೆ ಟಿಕೆಟ್ ನೀಡಿದ್ದಾರೆ.

ಕೊನೆಯ ಕ್ಷಣದವರೆಗೆ ಕಗ್ಗಂಟಾಗಿರುವ ಕೋಲಾರ ಟಿಕೆಟ್, ಸಚಿವ ಮುನಿಯಪ್ಪ ಹಾಗೂ ಮಾಜಿ ಶಾಸಕ ರಮೇಶ್ ಕುಮಾರ್ ಬಣದ ನಡುವೆ ಪೈಪೋಟಿ ಏರ್ಪಟ್ಟಿತ್ತು. ಮುನಿಯಪ್ಪ ಅವರು ತಮ್ಮ ಅಳಿಯ ಚಿಕ್ಕಪೆದ್ದಣ್ಣನಿಗೆ ಟಿಕೆಟ್ ಕೊಡಿಸಲು ಕೊನೆಯ ಹಂತದವರೆಗೆ ಪ್ರಯತ್ನಿಸಿದ್ದರು. ಆದರೆ, ಎಲ್.ಹನುಮಂತಯ್ಯ ಪರವಾಗಿ ನಿಂತಿದ್ದ ರಮೇಶ್ ಕುಮಾರ್ ಬಣ ಮೇಲುಗೈ ಸಾಧಿಸಿದೆ. ಹೀಗಾಗಿ ಎಲ್. ಹನುಮಂತಯ್ಯಗೆ ಟಿಕೆಟ್ ಬಹುತೇಕ ಫೈನಲ್ ಆಗಿದೆ.

ಇನ್ನೂ ಚಿಕ್ಕಬಳ್ಳಾಪುರದಲ್ಲಿ ರಕ್ಷಾ ರಾಮಯ್ಯ ಹೆಸರು ಅಂತಿಮವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ರಕ್ಷಾ ರಾಮಯ್ಯ ಅವರ ಪರವಾಗಿ ನಿಂತ ಕಾರಣ ಅವರಿಗೆ ಟಿಕೇಟ್ ದೊರೆತಿದೆ. ಹೀಗಾಗಿ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹಾಗೂ ಶಿವಶಂಕರ ರೆಡ್ಡಿಗೆ ಟಿಕೆಟ್ ಮಿಸ್ ಆಗಿದೆ.

ಬಳ್ಳಾರಿಯಲ್ಲಿ ಶಾಸಕ ಇ. ತುಕಾರಾಂಗೆ ಟಿಕೆಟ್ ಫೈನಲ್ ಆಗಿದ್ದು, ಅವರು, ತಮ್ಮ ಪುತ್ರಿ ಸೌಪರ್ಣಿಕಾಗೆ ಟಿಕೆಟ್ ಕೇಳಿದ್ದರು. ಆದರೆ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು ತುಕಾರಾಂ ಅವರನ್ನೇ ಸ್ಫರ್ಧೆ ಮಾಡುವಂತೆ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.