Dinesh Gundurao: ಮಾಡಬಾರದ್ದು ಮಾಡಿ ಜೈ ಶ್ರೀರಾಮ್ ಎನ್ನುವುದು ಬಿಜೆಪಿಗೆ ರೂಢಿ: ಬಿಜೆಪಿ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ

ಬಿಜೆಪಿ ನಾಯಕರು ಮಾಡಬಾರದ್ದನ್ನು ಮಾಡಿ, ಅದನ್ನು ಧರ್ಮದ ಹೆಸರಿನಲ್ಲಿ ಮುಚ್ಚಿಹಾಕುವ ಕೆಲಸ ಮಾಡುತ್ತಾರೆ. ಇದಕ್ಕೆಲ್ಲ ಈ ಸಲದ ಚುನಾವಣೆಯಲ್ಲಿ ಜನ ಪಾಠ ಕಲಿಸಿಯೇ ಕಲಿಸುತ್ತಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗಾಂಧಿನಗರ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮಾಡಬಾರದ್ದು ಮಾಡಿ, ಜೈ ಶ್ರೀರಾಮ್ ಎನ್ನುವುದನ್ನು ರೂಢಿ ಮಾಡಿಕೊಂಡಿದ್ದಾರೆ. ದೇವರು, ಧರ್ಮದ ಹೆಸರಿನಲ್ಲಿ ಮಾಫಿಯಾದಂತೆ ಅಧಿಕಾರ ನಡೆಯುತ್ತಿದೆ. ವಿಪಕ್ಷ ನಾಯಕರನ್ನು ಜೈಲಿಗೆ ಕಳಿಸುವುದು ಅಥವಾ ಅವರನ್ನು ಹೆದರಿಸಿ ತಮ್ಮ ಪಕ್ಷಕ್ಕೆ ಹೋಗುವಂತೆ ಮಾಡಿಕೊಳ್ಳುತ್ತಿದ್ದಾರೆ. ಇದೊಂದು ರೀತಿಯ ಮಾಫಿಯಾದಂತೆ ನಡೆಯುತ್ತಿದೆ ಎಂದರು.

ಎಲೆಕ್ರಟ್ರೋಲ್ ಬಾಂಡ್ ಮೂಲಕ ಕೋಟ್ಯಾಂತರ ಅವ್ಯವಹಾರ ಮಾಡಿದೆ. ಅದನ್ನು ಪ್ರಶ್ನೆಯನ್ನೇ ಮಾಡುವಂತಿಲ್ಲ, ಈಗಾಗಲೇ ಜಾರ್ಖಂಡ್, ದೆಹಲಿ ಸಿಎಂಗಳನ್ನು ಜೈಲಿಗೆ ಹಾಕಿದ್ದಾರೆ. ಐಡಿ, ಇಡಿ ವಿರೋಧ ಪಕ್ಷಗಳನ್ನು ಮುಗಿಸಲು ಕೆಲಸ ಮಾಡುತ್ತಿವೆಯಾ?
ಇವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಅಂಬೇಡ್ಕರ್ ಕೊಟ್ಟ ಸಂವಿಧಾನ ಬಿಜೆಪಿ ಮತ್ತೊಮ್ಮೆ ಗೆದ್ದರೆ ಉಳಿಯುವುದಿಲ್ಲ ಎಂದು ಎಚ್ಚರಿಸಿದರು.

ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣ ಇದೆ. ನಾವು ಅಧಿಕಾರಕ್ಕೆ ಬರುವ ಮುನ್ನ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದೆವು, ಅದನ್ನು ಜಾರಿಗೆ ತಂದು ಮಾತು ಉಳಿಸಿಕೊಂಡಿದ್ದೇವೆ. 55 ಸಾವಿರ ಕೋಟಿ ರು ಖರ್ಚು ಮಾಡುವುದು ಸುಲಭವಲ್ಲ. ಅದಕ್ಕೆ ಬಡವರಿಗಾಗಿ ಮಿಡಿಯುವ ಹೃದಯವಂತಿಕೆ ಬೇಕು. ನಮ್ಮ ಸರಲಾರಕ್ಕೆ ಅಂತಹದ್ದಿದೆ. ಬಿಜೆಪಿ ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡ್ತಿದೆ. ದಿವಾಳಿ ಆಗುತ್ತೆ ಎನ್ನುತ್ತಾರೆ. ಇಡೀ ದೇಶದಲ್ಲಿ ತೆರಿಗೆ ಕೊಡುವುದರಲ್ಲಿ ಎರಡನೇ ಸ್ಥಾನದಲ್ಲಿ ಇದ್ದೇವೆ. ಬಂಡವಾಳ ಹೂಡಿಕೆಯಲ್ಲಿ ನಾವು ಮೂರನೇ ಸ್ಥಾನದಲ್ಲಿದ್ದೇವೆ. ಇದೆಲ್ಲ ಒಳ್ಳೆಯ ಬೆಳವಣಿಗೆ ಅಲ್ಲವೇ ಎಂದು ಪ್ರಶ್ನಿಸಿದರು.

ಹಿಂದೂ ವಿರೋಧಿ ಲೇಬಲ್ !
ಏನೇ ಪ್ರಶ್ನೆ ಮಾಡಿದರೂ ಹಿಂದೂ ವಿರೋಧಿ ಎಂದು ಬಿಂಬಿಸುವುದು ಮಾತ್ರ ಅವರಿಗೆ ಗೊತ್ತಿದೆ. ನಮ್ಮ ಸರಕಾರವನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಾರೆ. ಮುಜರಾಯಿ ಇಲಾಖೆ ಹಣ ದುರ್ಬಳಕೆ ಎಂದು ಬೊಮ್ಮೆ ಹೊಡೆಯುತ್ತಾರೆ. ಹಿಂದೂ ದೇವಾಲಯಗಳ ಹಣ ದೇವಸ್ಥಾನಗಳಿಗೆ ಕೊಡಲಷ್ಟ ಬಳಕೆ ಮಾಡಲಾಗುತ್ತಿದೆ. ಆದರೂ, ಜನರ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ. ಪ್ರತಿ ವರ್ಷ ನಾಲ್ಕು ಲಕ್ಷ ಕೋಟಿ ತೆರಿಗೆ ಕೊಡುತ್ತಿದ್ದೇವೆ. ಆದರೆ ಐವತ್ತು ಸಾವಿರ ಕೋಟಿ ರು.ಮಾತ್ರ ವಾಪಸ್ ಸಿಗುತ್ತದೆ. ದಕ್ಷಿಣ ಭಾರತದಲ್ಲಿ ಎಲ್ಲ ರಾಜ್ಯಗಳಿಗೆ ಅನ್ಯಾಯವಾಗ್ತಿದೆ. ಪ್ರಥಮ ಬಾರಿಗೆ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇವೆ ಎಂದು ತಿಳಿಸಿದರು.

ಮನ್ಸೂರ್ ಮಾತು ಕಡಿಮೆ: ಕೆಲಸ ಜಾಸ್ತಿ:
ಬೆಂಗಳೂರು ಕೇಂದ್ರ ಲೋಕಸಭೆ ಅಭ್ಯರ್ಥಿ ಮನ್ಸೂರ್ ಆಲಿಖಾನ್ ಅವರನ್ನು ಕೊಂಡಾಡಿದ ದಿನೇಶ್ ಗುಂಡೂರಾವ್, ಮನ್ಸೂರ್ ಆಲಿಖಾನ್ ಮಾತು ಕಡಿಮೆ, ಕೆಲಸ ಜಾಸ್ತಿ, ಅವರನ್ನು ನಾನು ಯುವ ಕಾಂಗ್ರೆಸ್ ಕಾಲಘಟ್ಟದಿಂದ ನೋಡಿದ್ದೇನೆ. ಅವರು ಕ್ರಿಯಾಶೀಲ ಕಾರ್ಯಕರ್ತರು. ಗೋವಾದಲ್ಲಿ ಮಾಡಿದ ಕೆಲಸ ನೋಡಿ, ಎಐಸಿಸಿ ಕಾರ್ಯದರ್ಶಿ ಮಾಡಿದರು. ತೆಲಂಗಾಣದ ಉಸ್ತುವಾರಿ ಮಾಡಲಾಯಿತು. ಅಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಈ ಬಾರಿ ಅವರು ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮನ್ಸೂರ್ ಆಲಿಖಾನ್ ಮಾತನಾಡಿ, ನಾನೊಬ್ನ ಸಾಮಾನ್ಯ ಕಾರ್ಯಕರ್ತ. ನನ್ನ ಜೀವನದಲ್ಲಿ ದಿನೇಶ್ ಗುಂಡೂರಾವ್ ಅವರು ಟರ್ನಿಂಗ್ ಪಾಯಿಂಟ್ ಆಗಿದ್ದಾರೆ. ಕಾರ್ಯಕರ್ತರೇ ನಮ್ಮ ಶಕ್ತಿ, ಬೂತ್ ಮಟ್ಟದಲ್ಲಿ ನೀವು ಏಮ್ ಮಾಡ್ತಿದ್ದೀರಿ ಅನ್ನೋದು ಮುಖ್ಯ. ನಿಮ್ಮಿಂದಲೇ ಗೆಲುವಿನ ಅಭಿಯಾನ ಶುರುವಾಗಲಿ ಎಂದು ಹೇಳಿದರು.
ಬಿಜೆಪಿ ನಾಯಕರು 400 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಾರೆ. ಅಂತಹ ನಂಬಿಕೆ ಇದ್ದರೆ ಏಕೆ ಇಬ್ಬರು ಸಿಎಂಗಳನ್ನು ಆರೆಸ್ಟ್ ಮಾಡಿದ್ದಾರೆ. ಇಂತಹದ್ದೆಲ್ಲ ಏಕೆ ಮಾಡ್ತಿದ್ದಾರೆ. ನಾವು ಉಚಿತ ಯೋಜನೆ ಕೊಡುತ್ತಿದ್ದೇವೆ. ಇದರ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟರೆ ಸಾಕು, ನಮ್ಮ ಗೆಲುವು ಸುಲಭವಾಗಲಿದೆ. ಪ್ರಸ್ತುತ ನಮ್ಮ ಕ್ಷೇತ್ರದ ಸಂಸದರು ಎಷ್ಟು ಸಲ ಕರ್ನಾಟಕದ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರಿಗೆ ಅವರ ಕೊಡುಗೆ ಏನು? ತೆರಿಗೆ ಅನುದಾನ ಕೊಡುತ್ತಿಲ್ಲ. ಈ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಇಂತಹವರನ್ನೆಲ್ಲ ಏಕೆ ಗೆಲ್ಲಿಸಬೇಕು ಎಂದು ಪ್ರಶ್ನೆ ಮಾಡಿದರು‌.

ಸಭೆಯಲ್ಲಿ ಚಿಕ್ಕಬಳ್ಳಾಪುರ ಮಾಜಿ ಶಾಸಕ ವೆಂಕಟರಮಣಯ್ಯ, ಮಾಜಿ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಆರ್.ಎಸ್. ಸತ್ಯನಾರಾಯಣ, ಕೆಪಿಸಿಸಿಯ ರಾಮಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗೌತಮ್ ಕುಮಾರ್, ಮಾಜಿ ಜಿಲ್ಲಾಧ್ಯಕ್ಷ ಮಂಜಪ್ಪ, ಜಿ. ಶೇಖರ್ ಸೇರಿದಂತೆ ಕ್ಷೇತ್ರದ ಎಲ್ಲ ಮಾಜಿ ಬಿಬಿಎಂಪಿ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಕ್ರಿಕೆಟ್ ಆಡಿ ಗಮನ ಸೆಳೆದ ಮನ್ಸೂರ್ ಖಾನ್ :
ಗಾಂಧಿ ನಗರದ ಬಿಬಿಎಂಪಿ ಆಟದ ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವ ದಿನೇಶ್ ಗುಂಡೂರಾವ್ ಹಾಗೂ ಅಭ್ಯರ್ಥಿ ಮನ್ಸೂರ್ ಆಲಿಖಾನ್, ಮೊದಲಿಗೆ ಗಣೇಶ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದರು. ಅಲ್ಲಿಯೇ ಮಜ್ಜಿಗೆ ಮಾರುವ ವೃದ್ಧೆ ಬಳಿ ಮಜ್ಜಿಗೆ ಖರೀದಿಸಿ ಸವಿದರು. ನಂತರ ಸ್ಥಳೀಯ ತುವಕರ ಜತೆಯಲ್ಲಿ ಕೆಲ ಕಾಲ ಕ್ರಿಕೆಟ್ ಆಡುವ ಮೂಲಕ ಯುವಕರ ಜತೆಗೆ ಉಭಯ ಕುಶಲೋಪರಿ ನಡೆಸಿದರು. ಸಚಿವರು ಮತ್ತು ಲೋಕಸಭೆ ಅಭ್ಯರ್ಥಿಯ ಈ ನಡೆ ಸ್ಥಳೀಯ ಯುವಕರ ಮನಗೆದ್ದಿತು.

More News