G PARAMESHWAR VISIT SIDDAGTANGA MATH: ಸಿದ್ಧಗಂಗಾ ಶ್ರೀಗಳ ಕೊಡುಗೆ ವಿಸ್ಮಯ: ಗೃಹ ಸಚಿವ ಪರಮೇಶ್ವರ

ತುಮಕೂರು (ಏಪ್ರಿಲ್ 1):- ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಶಿವಕುಮಾರ ಶಿವಯೋಗಿ ಮಹಾಸ್ವಾಮೀಜಿಯವರ 117ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಗೃಹ ಸಚಿವರಾದ ಡಾ.‌ ಜಿ.ಪರಮೇಶ್ವರ ಅವರು ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಶ್ರೀ ಸಿದ್ಧಗಂಗಾ ಮಠದಲ್ಲಿರುವ ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.

ತದನಂತರ ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು, ಮಠದಲ್ಲಿ ಪ್ರಸಾದ ಸೇವಿಸಿದರು‌.

ಬಳಿಕ ಮಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ ಅವರು, ‘ಇಡೀ ದೇಶದಲ್ಲಿ ಶಿವಕುಮಾರ ಸ್ವಾಮೀಜಿಯವರ ಕೊಡುಗೆ ಒಂದು ರೀತಿಯ ವಿಸ್ಮಯ. ಎಷ್ಟೊಂದು ಬಡ ಮಕ್ಕಳಿಗೆ ಅನ್ನ ದಾಸೋಹ, ವಿದ್ಯಾದಾನ ಮಾಡುವ ದೊಡ್ಡ ಪ್ರಯತ್ನ ದೇಶದಲ್ಲಿ ಎಲ್ಲೂ ಇಲ್ಲ’ ಎಂದು ಹೇಳಿದರು.

‘ಈ ದೇಶದಲ್ಲಿ ಸಾಮಾನ್ಯ ಜನರು ಪ್ರಜ್ಞಾವಂತರಾಗಬೇಕು. ಆಗ ಅಭಿವೃದ್ಧಿ ಸುಲಭವಾಗುತ್ತದೆ ಎಂಬ ಮಹಾತ್ಮ ಗಾಂಧೀಜಿಯವರ ಮಾತನ್ನು ಶಿವಕುಮಾರ ಸ್ವಾಮೀಜಿಯವರು ಆಗಾಗ್ಗೆ ಹೇಳುತ್ತಿದ್ದರು. ಹೀಗಾಗಿ, ಮಕ್ಕಳಿಗೆ ಶಿಕ್ಷಣ ಕೊಡುವುದು ಅತೀ ಮುಖ್ಯ ಎಂಬುದು ಶ್ರೀಗಳಿಗೆ ತಿಳಿದಿತ್ತು. ಇಡೀ ರಾಜ್ಯದಲ್ಲಿ ಎಲ್ಲ ಭಾಗದಿಂದ ಬಂದ ಬಡ ಮಕ್ಕಳು ವಿದ್ಯೆ ಕಲಿತು, ಜೀವನವನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ’ ಎಂದರು.

‘ಮಠದಲ್ಲಿ ಕಲಿತ ಅನೇಕ ಜನ ವಿದೇಶದಲ್ಲಿದ್ದಾರೆ. ರಾಜ್ಯ ಮತ್ತು ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಡೀ ದೇಶದಲ್ಲಿ ಇದೊಂದು ಬಹಳ ದೊಡ್ಡ ಕೊಡುಗೆ ಅನ್ನಿಸುತ್ತದೆ. ಸ್ವಾಮೀಜಿಯವರು ಮಾಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಭಾರತರತ್ನ ನೀಡಬೇಕು. ಈಗಾಗಲೇ ರಾಜ್ಯ ಸರ್ಕಾರವು ಶಿಫಾರಸ್ಸು ಮಾಡಿರುವುದನ್ನು ಪರಿಗಣಿಸಿದರೆ ಸಾಕು.‌ ಸ್ವಾಮೀಜಿಯವರಿಗೆ ಭಾರತ ರತ್ನ ಕೊಡಬೇಕು ಅಂತ ಕೇಂದ್ರ ಸರ್ಕಾರಕ್ಕೆ ಅನ್ನಿಸಿದರೆ ಯಾವ ಅರ್ಜಿಯು ಬೇಕಾಗುವುದಿಲ್ಲ’ ಎಂದು ಹೇಳಿದರು.

More News