ಟಂಡರ್ ಗೆ 40% ಕಮಿಷನ್ ಆರೋಪ : ಡಿ.ಕೆ ಶಿವಕುಮಾರ್ ಅಕ್ರಮ ದಾಖಲೆ ಬಿಡುಗಡೆ ಮಾಡಲಿ -ಸಚಿವ ಗೋವಿಂದ ಕಾರಜೋಳ

ಬೆಂಗಳೂರು: ನೀರಾವರಿ,ಲೋಕೋಪಯೋಗಿ,ಗ್ರಾಮೀಣಾಭಿವೃದ್ಧಿ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಟೆಂಡರ್ ಗಳಲ್ಲಿ ಶೇ 40ರಷ್ಟು ಕಮಿಷನ್ ಪಡೆದ ದಾಖಲೆಗಳನ್ನು ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಲಿ.ಎಲ್ಲರನ್ನೂ ತನಿಖೆಗೆ ಒಳಪ ಡಿಸಲಿ ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ನೀರಾವರಿ ಇಲಾಖೆ ಸಚಿವ ಗೋವಿಂದ ಕಾರಜೋಳ ಸವಾಲು ಹಾಕಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‌ಶೇ.40 ರಷ್ಟು ಕಮೀಷನ್  ಪಡೆಯಲಾಗುತ್ತಿದೆ ಎಂದು ಆರೋ ಪಿಸಿ ಗುತ್ತಿಗೆದಾರ ಸಂಘದ ಸದಸ್ಯರು ಪ್ರಧಾನಿ,ರಾಜ್ಯಪಾಲರಿಗೆ ದೂರು ನೀಡಿರುವ ಕುರಿತು ಸಮಗ್ರ ತನಿಖೆಗೆ ಮುಖ್ಯಮಂತ್ರಿಗಳು ಆದೇಶ ಮಾಡಿದ್ದಾರೆ.ತನಿಖಾ ವರದಿ ಬಂದ ತಕ್ಷಣ ನಿರ್ದಾಕ್ಷಿ ಣ್ಯವಾಗಿ ಸರ್ಕಾರ ಕ್ರಮ ಕೈಗೊಳ್ಳಲಿದ್ದಾರೆ.ಯಾರೇ ತಪ್ಪು ಮಾಡಿರಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ತನಿಖೆಯಾದಲ್ಲಿ ಯಾರು ತಪ್ಪೆಸಗಿದ್ದಾರೆ ಎಂದು ತಿಳಿಯಲಿದೆ.ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನಾನು ಕೂಡ ಮುಖ್ಯಮಂತ್ರಿ ಅವರಿಗೆ ಒತ್ತಾಯಿಸುತ್ತೇನೆ.ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಅಕ್ರಮ ನಡೆದಿರುವ ದಾಖಲೆ ಬಿಡುಗಡೆ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಅವರ ಬಳಿ ಏನೇ ದಾಖಲೆ ಇದ್ದರೂ ಬಿಡು ಗಡೆ ಮಾಡಲಿ,ಮುಖ್ಯ ಕಾರ್ಯದರ್ಶಿ ಅವರಿಗೆ ಡಿ.ಕೆ.ಶಿವಕುಮಾರ್ ದಾಖಲೆಗಳನ್ನು ಸಲ್ಲಿಸಲಿ ಎಂದು ಅವರು ಮನವಿ ಮಾಡಿದರು.

ಲಖನ್ ಸ್ಪರ್ಧೆಗೂ ನಮಗೂ ಸಂಬಂಧವಿಲ್ಲ: ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಯಾಗಿ  ಸ್ಪರ್ಧೆ ಮಾಡಲು ಅರ್ಹತೆ ಇರುವವರು ಸ್ಪರ್ಧಿಸಬಹುದು.ಆದರೆ ನಮ್ಮ ಪಕ್ಷದ ವತಿಯಿಂದ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ.ನಮ್ಮ ಅಭ್ಯ ರ್ಥಿ ಕವಟಗಿಮಠ ಗೆದ್ದು ಬರಲಿದ್ದಾರೆ. 20 ಸ್ಥಾನಕ್ಕೆ ನಾವು ಸ್ಪರ್ಧಿಸಿದ್ದು 15 ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲಖನ್ ಜಾರಕಿಹೊಳಿ ಸ್ಪರ್ಧೆ ವಿಚಾರದಲ್ಲಿ ಪಕ್ಷವಿರೋಧಿ ಚಟುವಟಿಕೆ ಪ್ರಶ್ನೆಯೇ ಬರುವುದಿಲ್ಲ.ರಮೇಶ್ ಜಾರಕಿಹೊಳಿ ನಮ್ಮ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ವೇಳೆ ಭಾಗವಹಿಸಿದ್ದರು ನಮ್ಮ ಅಭ್ಯರ್ಥಿ ಗೆಲ್ಲಬೇಕು ಎಂದು ಹೇಳಿದ್ದಾರೆ ಇದರಲ್ಲಿ ಪಕ್ಷವಿರೋಧಿ ಚಟುವಟಿಕೆ ಆಗುವುದಿಲ್ಲವೆಂದು ಸಮರ್ಥಿಸಿಕೊಂಡರು.

ನಮ್ಮ ಮತಗಳಿವೆ ನಾವು ಗೆಲ್ಲುತ್ತೇವೆ : ನಾವು ಯಾರ ನಾಮಪತ್ರವನ್ನು ವಾಪಸ್ ಪಡೆಯುವಂತೆ ಒತ್ತಡ ಹೇರುವುದಿಲ್ಲ.ಸ್ಪರ್ಧೆ ಬೇರೆಯೇ.ಬಿಜೆಪಿಗೆ ನಮ್ಮದೇ ಆದ ಮತದಾರರು ಇದ್ದಾರೆ.ಪಕ್ಷದ ಕಾರ್ಯಕರ್ತರು ಸ್ಥಳೀಯ ಸಂಸ್ಥೆಗಳಿಗೆ ಚುನಾಯಿತರಾಗಿದ್ದಾರೆ. ಗ್ರಾಮ ಪಂಚಾಯಿತಿ,ಪಟ್ಟಣ ಪಂಚಾಯಿತಿ,ಪುರಸಭೆ, ನಗರಸಭೆಯಲ್ಲಿ ನಮ್ಮ ಕಾರ್ಯಕರ್ತರು ಗೆದ್ದಿದ್ದಾರೆ ಅವರೆಲ್ಲಾ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಅಭ್ಯರ್ಥಿ ಗೆಲ್ಲಿಸಲಿದ್ದಾರೆ ಎಂದರು.

ತಂತ್ರಗಾರಿಕೆ ಇಲ್ಲ,ಕೆಲಸ ಕಾರ್ಯವೇ ಅಸ್ತ್ರ : ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಬೆಂಗಳೂರಿಗೆ ತಂತ್ರಗಾರಿಕೆ ಮಾಡಲು ಬಂದಿರುವ ಬಗ್ಗೆ ಗೊತ್ತಿಲ್ಲ,ಮುಂದಿನ ಚುನಾವಣೆಗೆ ನಮ್ಮ ಯಾವುದೇ ತಂತ್ರಗಾರಿಕೆ ಇರುವುದಿಲ್ಲ,ನಮ್ಮ ಕೆಲಸ,ಕಾರ್ಯವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದರು.

More News