ಹುಬ್ಬಳ್ಳಿ: ಹುಬ್ಬಳ್ಳಿ -ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ವಿರುದ್ಧ ಸಮರ ಸಾರಿರುವ ದಿಂಗಾಲೇಶ್ವರ ಶ್ರೀಗಳು ಪಟ್ಟು ಸಡಿಲಿಸದೇ ಇದ್ದುದ್ದರಿಂದ ಬಿಜೆಪಿ ಹೈಕಮಾಂಡ್ ಗೆ ಇಕ್ಕಟ್ಟು ಪರಿಸ್ಥಿತಿ ಎದುರಿಸುವಂತಾಗಿದೆ. ಅನಾಯಾಸವಾಗಿ ಗೆಲ್ಲೋ ಬಿಜೆಪಿ ಲೆಕ್ಕಾಚಾರ ತಲೆಕೆಳಗಾಗಿದೆ.
ಬಿಜೆಪಿಯ ಭದ್ರ ಕೋಟೆಯಾಗಿರೋ ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಸತತ ಐದನೇ ಬಾರಿ ಗೆಲ್ಲಬೇಕೆನ್ನೋ ಜೋಶಿ ಕನಸಿಗೆ ಶ್ರೀಗಳು ಕಂಠಕರಾಗಿದ್ದಾರೆ. ಯಡಿಯೂರಪ್ಪ ಆದಿಯಾಗಿ ಅನೇಕ ಮುಖಂಡರು ಮನವೊಲಿಕೆ ಮಾಡಿದ್ರೂ ಯಾವುದೇ ರೀತಿಯ ಫಲ ಸಿಗಲಿಲ್ಲ. ಪ್ರಹ್ಲಾದ್ ಜೋಶಿ ಅವರನ್ನು ಸೋಲಿಸೋದೆ ಗುರಿ ಎನ್ನುತ್ತಿರೋ ಶ್ರೀಗಳು, ಚುನಾವಣಾ ಅಖಾಡಕ್ಕೆ ಇಳಿಯದೇ ಜೋಶಿ ಸೋಲಿಗೆ ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ನಾಯಕರೊಬ್ಬರನ್ನು ಬಂಡಾಯ ಅಭರ್ಥಿಯನ್ನಾಗಿ ನಿಲ್ಲಿಸೋ ಲೆಕ್ಕಾಚಾರ ಮಾಡಲಾಗಿದ್ದು, ಇನ್ನೊಂದೆಡೆ ಮಠಾಧೀಶರನ್ನು ಶ್ರೀಗಳು ಒಗ್ಗೂಡಿಸುತ್ತಿದ್ದಾರೆ. ಮತ್ತೊಂದು ಕಡೆ ಇಂದು ಭಕ್ತರ ಅಭಿಪ್ರಾಯವನ್ನು ಶ್ರೀಗಳು ಸಂಗ್ರಹಿಸಿದ್ದಾರೆ. ಬಿಜೆಪಿಯ ಅತೃಪ್ತರಿಗೂ ಗಾಳ ಹಾಕುತ್ತಿರುವ ಶ್ರೀಗಳು, ತೆರೆಮರೆಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಭಕ್ತರ ಜೊತೆಗೆ ಸಭೆ ಆರಂಭಿಸಿದ ದಿಂಗಾಲೇಶ್ವರ ಶ್ರೀ
ಧಾರವಾಡದ ಸೇವಾಲಯ ಹಾಲ್‌ನಲ್ಲಿ ಭಕ್ತರರೊಂದಿಗೆ ಸಭೆ ನಡೆಸಿದ ದಿಂಗಾಲೇಶ್ವರ ಶ್ರೀ, ಲೋಕಸಭಾ ಚುನಾವಣೆಯ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಜೋಶಿಯನ್ನು ಸೋಲಿಸುವುದೇ ನನ್ನ ಗುರಿ ಎಂದು ಶ್ರೀಗಳು ಸಮರ ಸಾರಿದ್ದರು. ಚುನಾವಣೆಗೆ ಸ್ಪರ್ಧಿಸಬೇಕೋ..? ಜೋಶಿ ಸೋಲಿಸಲು ಏನೂ ಮಾಡಬೇಕೆಂದು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ನಂತರ ಮಾತನಾಡಿದ ಅವರು, ಈಗಾಗಲೇ ನಮ್ಮ ನಿಲುವು ಕೇಂದ್ರದವರೆಗೂ ಮುಟ್ಟಿದೆ, ನನ್ನ ಹೋರಾಟ ಈಗಿನಿಂದ ಆರಂಭವಾಗಿಲ್ಲ, ಮೊದಲನೆಯ ಹೋರಾಟ ಐದು ವರ್ಷ ಮುಗುವಿದ್ದಾಗ ಆರಂಭವಾಗಿತ್ತು. ಮೊದಲು ತಾಯಿಯೊಂದಿಗೆ ಹೋರಾಟ ಮಾಡಿದವನು ನಾನು. ನಾನೂ ಹತ್ತು ವರ್ಷದವನು ಇದ್ದಾಗ ಹೋರಾಟ ಮಾಡಿ ಮನೆ ಬಿಟ್ಟು, ಸನ್ಯಾಸಿ ಆದವನು. ವ್ಯಕ್ತಿಯ ಹಿತಕ್ಕಾಗಿ ಹೋರಾಟ ಮಾಡಿದವನು ನಾನಲ್ಲ. ವೀರಶೈವ ಲಿಂಗಾಯತ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದವನು ನಾನು ಎಂದರು.
ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಎಂದು ಹೋರಾಟ ಮಾಡುತ್ತಿದ್ದಾಗ, ಅವೆರಡೂ ಒಂದೇ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದೆ. ಯಡಿಯೂರಪ್ಪನವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ಬಿಜೆಪಿ ಹೈಕಮಾಂಡ್ ವಿರುದ್ಧ ಹೋರಾಟ ಮಾಡಿದ್ದೆ. ಹಿಂದಿನ ಸರ್ಕಾರದಲ್ಲಿ 40% ಕಮಿಷನ್ ವಿರುದ್ಧ ಹೋರಾಟ ಮಾಡಿದ್ದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ವಿರುದ್ಧ ಹೋರಾಟವನ್ನ ಈಗ ಆರಂಭ ಮಾಡಿದ್ದೇನೆ ಎಂದು ವಿವರಿಸಿದರು.
ನನಗೆ ನ್ಯಾಯ ಸಿಗುವವರೆಗೂ ನಾನು ಕೊರಳಲ್ಲಿ ಮಾಲೆ ಹಾಕುವುದಿಲ್ಲ ಎಂದು ಘೋಷಿಸಿದ ಅವರು, ನನ್ನ ಹೋರಾಟಕ್ಕೆ ನ್ಯಾಯ ಸಿಗುವವರೆಗೂ ನಾನಿರುವ ವೇದಿಕೆಯಲ್ಲಿ ಮಾಲೆ ಹಾಕಲು ಬೀಡುವುದಿಲ್ಲ. ಗುರಿ ಮುಟ್ಟುವವರೆಗೂ ರಾಜ್ಯದ ಜನತೆ ನನಗೆ ಮಾಲೆ ಹಾಕಬೇಡಿ. ಹೋರಾಟಕ್ಕೆ ಜಯ ಸಿಕ್ಕ ಮೇಲೆ ಧಾರವಾಡ ಲೋಕಸಭಾ ಕ್ಷೇತ್ರದ ಜನರಿಗೆ ಮಾಲೆ ಹಾಕಬೇಕು. ಜಾತಿ ಮತ್ತು ಪಕ್ಷದ ಪರವಾದ ಹೋರಾಟ ನನ್ನದ್ದಲ್ಲ. ನಮ್ಮ ಮಠ ಜಾತ್ಯಾತೀತ ಮಠ ಎಂದರು.

ಜೋಶಿಯವರನ್ನ ನಮ್ಮ ಸಮಾಜದದವರು ಗೆಲ್ಲಿಸಿದ್ದರು. ಗೆಲ್ಲಿಸಿದವರನ್ನೇ ಜೋಶಿಯವರು ಮರೆತರು. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಮೂರು ಜನರಿಗೆ ಟಿಕೆಟ್ ಆಮಿಷ ತೋರಿಸಿದ್ರು.
ಡಾ.ಮಹೇಶ ನಾಲವಾಡ ಅವರನ್ನ ಬಳಕೆ ಮಾಡಿಕೊಂಡು ಬೀಸಾಕಿದ್ದಾರೆ. ಅಂಗಡಿ, ಕಾಂತೇಶ ಅವರನ್ನ ಸಹ ಜೋಶಿಯವರು ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಪ್ರಚಾರ ಮಾಡಲು ಕಳಿಸಿದ್ರು.
ಈಶ್ವರಪ್ಪನವರಿಗೂ ಮೋಸ ಮಾಡಿದವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಎಂದು ಕಿಡಿಕಾರಿದರು.
ಜೋಶಿ ನಿಮಗೆ ಮೋಸ ಮಾಡುತ್ತಾರೆ ನಾನು ಲಿಖಿತ ರೂಪದಲ್ಲಿ ಬರೆದು ಕೊಡುತ್ತೆನೆಂದು ಈಶ್ವರಪ್ಪನವರಿಗೆ ನಾ ಹೇಳಿದ್ಧೆ. ಈಗ ಅವರ ಮಗನಿಗೆ ಟಿಕೆಟ್ ಕೊಡದೆ ಜೋಶಿ ಮೋಸ ಮಾಡಿದ್ದಾರೆ. ಕೇವಲ ಲಿಂಗಾಯತರಿಗೆ ಅಷ್ಟೇ ಅಲ್ಲದೇ, ದಲಿತರಿಗೂ ಮೋಸ ಮಾಡಿದ್ದಾರೆ. ಅನೇಕ ಬಹುಸಂಖ್ಯಾತರು ಜೋಶಿ ಹೊಡೆತಕ್ಕೆ ನುಚ್ಚು ನೂರಾಗಿದ್ದಾರೆ. ಅನೇಕ ವ್ಯಕ್ತಿಗಳನ್ನು ಜೋಶಿ ನಾಶ ಮಾಡಿದ್ದಾರೆ. ಹದಿನೈದು ವರ್ಷದ ಹಿಂದೆ ಕೇಂದ್ರ ಮಂತ್ರಿ ಆದ ವ್ಯಕ್ತಿ ಈಗ ಶಾಸಕನಾಗಿ ಇವರ ಕೈಗೊಂಬೆ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೋಶಿ ಏನ್ ಹೇಳ್ತಾರೆ, ಆ ರೀತಿ ಒದರುತ್ತಿದ್ದಾರೆ. ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದ ದಿಂಗಾಲೇಶ್ವರ ಶ್ರೀ, ಸದಾಕಾಲವೂ ಮೋದಿ ಪಕ್ಕ ಇರುವ ಜೋಶಿ ನಮ್ಮ ನಾಡಿಗಾಗಿ ಏನೂ ಮಾಡಿದ್ರು.ಸಣ್ಣಪುಟ್ಟ ಕೆಲಸಕ್ಕಾಗಿ ನಾನು ವಿದ್ಯಾರ್ಥಿಗಳನ್ನ ಜೋಶಿ ಹತ್ತಿರ ಕಳಿಸಿದ್ರೆ, ಅವರ ಕೆಲಸ ಮಾಡಿಲ್ಲ.

ಇವರ ಸಂಸದರಾಗಿದ್ದು ಜನರ ಕೆಲಸ ಮಾಡಲಿಕ್ಕೆ,
ಜೋಶಿ ಪ್ರಧಾನ ಮಂತ್ರಿ ಪಕ್ಕ ಇದ್ದಾಗ ನಮ್ಮ ನಾಡಿಗೆ ಏನಾದ್ರೂ ತಂದು ಹಾಕ್ತಾರೆಂದು ಕಾಯ್ದು ನೋಡಿದ್ವಿ. ಆದ್ರೆ ಜೋಶಿ ಏನೂ ತಂದು ಹಾಕಲಿಲ್ಲ, ಎಲ್ಲವನ್ನೂ ತಿಂದ್ರು ಹಾಕಿದ್ದಾರೆ ಎಂದು ಟಿಕೀಸಿದರು.
ಸ್ವಾಮೀಜಿಗಳಿಗೆ ರಾಜಕಾರಣ ಏಕೆ ಬೇಕೆಂದು ಜೋಶಿ ಹಿಂಬಾಲಕರು ಸಾಮಾಜಿಕ ಜಾಲತಾಣಗಳಲ್ಲಿ ಹಾಕ್ತಾರೆ ಮತ್ತು ಮಾತನಾಡುತ್ತಾರೆ. ನಿಮ್ಮ ಕಾರ್ಯಕ್ರಮ ವೇದಿಕೆ ಹಂಚಿಕೆಕೊಂಡು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲು ಸ್ವಾಮೀಜಿಗಳು ಬೇಕಾಗಿತ್ತಾ..? ನಾನು ಮಠದಲ್ಲಿ ಇದ್ರು ಅಷ್ಟೇ, ಬಯಲಿನಲ್ಲಿ ಇದ್ದರು ಅಷ್ಟೇ ಎಂದು ತಿಳಿದು ಈ ಹೋರಾಟ ಮಾಡುತ್ತಿದ್ದೆನೆ.
ಮಠಾಧಿಪತಿಗಳು ಸ್ವಾಭಿಮಾನ ಬಿಟ್ಟು ಬದುಕಬಾರದು. ನೊಂದವರ ಬೆನ್ನಿಗೆ ಸ್ವಾಮೀಜಿಗಳು ನಿಲ್ಲಬೇಕು. ಪಕ್ಷದ ಕಾರ್ಯಕರ್ತರಿಗೆ ಇರುವ ನಿಷ್ಠೆ, ಆ ಪಕ್ಷದಿಂದ ಗೆದ್ದು ಬಂದವರಿಗೆ ಇರುವುದಿಲ್ಲ ಎಂದರು.
ದಲಿತ ನಾಯಕ ಶಾಸಕನಾಗಿ ಆಯ್ಕೆಯಾಗಿ ನಾಲ್ಕು ತಿಂಗಳ ಕಳೆದ್ರೂ ಜೋಶಿ ಅವರನ್ನ ತಮ್ಮ ಮನೆಯೊಳಗೆ ಬಿಟ್ಟುಕೊಂಡಿರಲಿಲ್ಲ. ಚುನಾವಣೆ ಮೊದಲು ನಾನು ಅವರನ್ನು ನೋಡಿಕೊಳ್ಳುತ್ತೆನೆ. ಚುನಾವಣೆ ಮುಗಿದ ಮೇಲೆ ಅವರು ನನ್ನನ್ನು ನೋಡಿಕೊಳ್ಳಲಿ, ನಾನು ಎಲ್ಲದಕ್ಕೂ ಸಿದ್ದ. ನಾಲ್ಕು ಲಕ್ಷ ಮತಗಳ ಅಂತರದಿಂದ ಗೆದ್ದು ಬರ್ತೆನಿ ಎಂದು ಜೋಶಿ ಹೇಳುತ್ತಿದ್ದಾರೆ. ಇವರಿಗೆ ಎಷ್ಟು ಅಹಂಕಾರ ಬಂದಿದೆ ಎನ್ನುವುದಕ್ಕೆ ಇದು ಉದಾಹರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತದಾರರ ಇವರ ಕಿಸೆಯಲ್ಲಿ ಇದ್ದಾರೆನೂ..? ಎಂದು ಪ್ರಶ್ನಿಸಿದ ಅವರು, ಪ್ರಧಾನಿ ಮಂತ್ರಿಗಳ ಹೆಸರಲ್ಲಿ ಇವರು ರಾಜ್ಯದಲ್ಲಿ ಗುಂಡಾಗಿರಿ ಮಾಡುತ್ತಿದ್ದಾರೆ. ಇಂತವರನ್ನ ಪ್ರಧಾನಿಯವರು ಹತ್ತಿಕ್ಕಬೇಕು. ಚುನಾವಣೆಗೆ ನಾನೇ ಸ್ಪರ್ಧೆ ಮಾಡುವಂತೆ ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಪಕ್ಷೇತರ ಅಭ್ಯರ್ಥಿ ಆಗಬೇಕೆಂದು ಭಕ್ತರು ಹೇಳಿದ್ದಾರೆ. ಉತ್ತರ ಭಾರತದ ರೀತಿಯಲ್ಲಿ ದಕ್ಷಿಣ ಭಾರತದಲ್ಲಿ ಸ್ವಾಮೀಜಿಗಳು ರಾಜಕಾರಣಕ್ಕೆ ಬರಬೇಕೆಂದು ಭಕ್ತರು ಸಲಹೆ ನೀಡಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ನೀವೇ ಬರಬೇಕೆಂದು ಭಕ್ತರು ಒಕ್ಕೊರಲಿನ ಅಭಿಪ್ರಾಯ ಹೇಳಿದ್ದಾರೆ. ನಮ್ಮ ಹಿರಿಯ ಗುರುಗಳು ಮತ್ತು ಮಠದ ಭಕ್ತರ ಅಭಿಪ್ರಾಯ ಕೇಳಬೇಕಿದೆ ಎಂದರು.




