ಬೆಂಗಳೂರು : ಏಪ್ರಿಲ್ 6 ರಿಂದ ರಾಜ್ಯದ್ಯಂತ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಜಂಟಿ ಪ್ರಚಾರ ಆರಂಭಿಸಲಿದ್ದಾರೆ, ಈ ಪ್ರಚಾರ ಕಾರ್ಯಕ್ಕೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಚಾಲನೆ ನೀಡಲಿದ್ದಾರೆ.
ಕೋಲಾರದ ಮುಳಬಾಗಿಲು ಕುರುಡುಮಲೆಯಲ್ಲಿ ಪ್ರಚಾರಕ್ಕೆ ಚಾಲನೆ ನೀಡಲಾಗುತ್ತಿದ್ದು, ಕುರುಡುಮಲೆ ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ದೊರೆಯಲಿದೆ. ವಿಘ್ನ ನಿವಾರಕನಿಗೆ ಅಗ್ರ ಪೂಜೆ ಸಲ್ಲಿಕೆ ಬಳಿಕ ರಾಜ್ಯ ಪ್ರವಾಸ ಮತ್ತು ಪ್ರಚಾರ ಚುರುಕುಗೊಳ್ಳಲಿದೆ.

ಮೊದಲ ಹಂತದ ೧೪ ಕ್ಷೇತ್ರಗಳಲ್ಲಿ ಜೋಡೆತ್ತುಗಳ ಜಂಟಿ ಪ್ರವಾಸ ಇದಾಗಿದ್ದು, ಉಭಯ ನಾಯಕರು ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ. ಗ್ಯಾರೆಂಟಿಗಳನ್ನು ಮುಂದಿಟ್ಟುಕೊಂಡೇ ಜನರ ವಿಶ್ವಾಸಗಳಿಸುವ ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್, ಗಣೇಶನಿಗೆ ಪೂಜೆ ಸಲ್ಲಿಸಿದರೆ ದಿಗ್ವಿಜಯ ಗ್ಯಾರೆಂಟಿ ಎಂಬ ನಂಬಿಕೆ ಮೂಡಿದ್ದರಿಂದ ಅದೇ ರೀತಿಯಲ್ಲಿ ನಡೆದುಕೊಳ್ಳಿಲಿದ್ದಾರೆ.
ಕಳೆದ ಬಾರಿ ವಿಧಾನಸಭೆ ಚುನಾವಣೆಗೆ ಇಲ್ಲಿಂದಲೇ ಪ್ರಚಾರ ಆರಂಭಿಸಿದ್ದ ಕಾಂಗ್ರೆಸ್, 135 ಸೀಟುಗಳನ್ನು ಗೆದ್ದಿತ್ತು. ಅದೇ ರೀತಿಯಲ್ಲಿ ಈ ಬಾರಿ ಲೋಸಭೆಯಲ್ಲಿ 20 ಕ್ಕೂ ಅಧಿಕ ಸೀಟು ಗಲ್ಲಬೇಕೆಂಬ ಉದ್ದೇಶ ಅವರದ್ದಾಗಿದೆ. ಈ ಹಿನ್ನೆಲೆಯಲ್ಲಿ ಗಣೇಶನಿಗೆ ಪೂಜೆ ಸಲ್ಲಿಸಿದ ನಂತರ ಜಂಟಿ ಪ್ರಚಾರ ಆರಂಭಿಸಲಿದ್ದಾರೆ.




