ಬೆಂಗಳೂರು : ಲೋಕಸಭೆ ಅಭ್ಯರ್ಥಿ ಘೋಷಣೆಯಾಗಿದೆ, ಇದುವರೆಗೂ ಯಾರೊಬ್ಬರೂ ನನ್ನನ್ನು ಬೆಂಬಲ ಕೊಡಿ ಎಂದು ಕೇಳಿಲ್ಲ, ನನ್ನ ಕ್ಷೇತ್ರದಲ್ಲಿ 7-8 ಬಾರಿ ಪ್ರಚಾರ ಮಾಡಿದ್ದಾರೆ, ಯಾರು ನನ್ನನ್ನು ಸಂಪರ್ಕಿಸಿಲ್ಲ, ಇಷ್ಟೆಲ್ಲಾ ಆದ ಮೇಲೆ ಸುಮ್ಮನೆ ಇದ್ದರೆ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತೆ, ನನ್ನ ಕ್ಷೇತ್ರಕ್ಕೆ ಯಾರು ಸಹಾಯ ಮಾಡುತ್ತಾರೋ ಅವರಿಗೆ ಬೆಂಬಲ ನೀಡುತ್ತೇನೆ ಎಂದು ಬಿಜೆಪಿ ಶಾಸಕ ಸ್ ಟಿ ಸೋಮಶೇಖರ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ನನ್ನನ್ನು ಸಂಪರ್ಕ ಮಾಡದೆ ಇದ್ದದ್ದಕ್ಕೆ ಇಂದು ಸಭೆ ಕರೆದಿದ್ದೇನೆ, ನನಗೆ ಸಹಾಯ ಮಾಡಿದವರಿಗೆ ಪ್ರಚಾರ ಮಾಡುತ್ತೇನೆ, ಅವರ ಕೈಲಿ ಏನ್ ಮಾಡೋಕಾಗುತ್ತೋ ಮಾಡ್ಲಿ ಎಂದು ಬಿಜೆಪಿ ಮುಖಂಡರಿಗೆ ಸವಾಲು ಹಾಕಿದರು.
ಸ್ಥಳೀಯ ನಾಯಕರು ಸೇರಿದಂತೆ ಅನೇಕ ಮುಖಂಡರು ಏನೆಲ್ಲ ಅವಮಾನ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ, ಚಿಕ್ಕಮಂಗಳೂರಿಂದ ಗೋ ಬ್ಯಾಕ್ ಎಂದು ಹೊರ ಹಾಕಿದವರನ್ನು ತಂದು ಚುನಾವಣೆಗೆ ನಿಲ್ಲಿಸಿದ್ದಾರೆ, ಅಂತವರನ್ನು ಬೆಂಗಳೂರಿನವರು ವೆಲ್ಕಂ ಮಾಡಬೇಕಾ ಎಂದು ಪ್ರಶ್ನಿಸಿದರು.
ರಾಜ್ಯ ಮಾತ್ರವಲ್ಲದ ಕೇಂದ್ರ ನಾಯಕರು ನನ್ನ ಸಂಪರ್ಕಿಸಿಲ್ಲ, ಮೊನ್ನೆ ಅಮಿತ್ ಶಾ ಬಂದ್ರೂ ಕೂಡ ನನಗೆ ಆಹ್ವಾನ ನೀಡಿಲ್ಲ, ನಿನ್ನೆಯವರೆಗೂ ಕಾದಿದ್ದೆ, ಆದ್ರೂ ನೋ ರೆಸ್ಪಾನ್ಸ್, ಇವತ್ತು ಕಾರ್ಯಕರ್ತರ ಸಭೆ ಕರೆದಿದ್ದೇನೆ, ನಮ್ಮ ಅವಶ್ಯಕತೆ ಇಲ್ಲದವರು ಬಳಿ ನಾವೇಕೆ ಹೋಗಬೇಕು ಎಂದು ಕೆಂಗೇರಿಯ ಬಂಡೆ ಮಠದಲ್ಲಿ ಎಸ್ ಟಿ ಸೋಮಶೇಖರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭೆ ಚುನಾವಣೆ ಬಳಿಕ ಅಧಿಕೃತ ಕಾಂಗ್ರೆಸ್ ಸೇರ್ಪಡೆ ಸುಳಿವು ನೀಡಿದ ಎಸ್ ಟಿ ಎಸ್
ಈ ಮೂಲಕ ಲೋಕಸಭೆ ಚುನಾವಣೆ ನಂತರ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗುವ ಸುಳಿವು ನೀಡಿದ ಎಸ್ ಟಿ ಸೋಮಶೇಖರ್, ಕಾಂಗ್ರೆಸ್ ಸೇರ್ತಿರಾ ಎಂದಿದ್ದಕ್ಕೆ ಕಾದು ನೋಡಿ ಎಂದು ಹೇಳಿದರು. ಇವಾಗ ಯಾರ ಬಂದು ಕೇಳಿದರು ನಾನು ಬೆಂಬಲ ನೀಡುವುದಿಲ್ಲ, ನನಗೆ ಯಾವ ಹೈಕಮಾಂಡ್ ಕೂಡ ಇಲ್ಲ, ನನಗೆ ನನ್ನ ಕ್ಷೇತ್ರದ ಮತದಾರರೇ ಹೈಕಮಾಂಡ್, ಮತದಾರರ ತೀರ್ಮಾನವೇ ನನ್ನ ಅಂತಿಮ ನಿರ್ಧಾರ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಪರ ಮನೆ ಮನೆಗೆ ತೆರಳಿ ಪ್ರಚಾರ ಮಾಡ್ತೇನೆ, ಪ್ರಚಾರ ಮಾಡಬೇಕಾದದ್ದು ನನ್ನ ಕಮೆಂಟ್ಮೆಂಟ್, ಪ್ರತಿದಿನ ಬಿಜೆಪಿಯವರು ನನ್ನನ್ನು ಏನ್ ಟಾರ್ಗೆಟ್ ಮಾಡಿದ್ದಾರೆ ಎಂಬುದು ಗೊತ್ತಿದೆ, ಎಲ್ಲವೂ ಮತದಾರರ ಮುಂದೆ ಬಿಚ್ಚಿಟ್ಟಿದ್ದೇನೆ ಎಂದು ತಿಳಿಸಿದರು.




