ರೂಪಾಂತರಿ ಕೊರೊನಾ ವೈರಸ್ ಓಮಿಕ್ರಾನ್ ಬಗ್ಗೆ ಆತಂಕ ಪಡುವ ಅವಶ್ಯಕತೆಯಿಲ್ಲ : ಸುಧಾಕರ್

ಬೆಂಗಳೂರು : ದಕ್ಷಿಣ ಆಫ್ರಿಕಾ ಸೇರಿದಂತೆ ನಾಲ್ಕು ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ನ ರೂಪಾಂತರ ತಳಿ ಓಮಿಕ್ರಾನ್ ಪತ್ತೆಯಾಗಿದೆ. ಅತೀ ವೇಗವಾಗಿ ಹರಡುತ್ತಿರುವ ಈ ಓಮಿಕ್ರಾನ್ ವೈರಸ್ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ರೂಪಾಂತರಿ ಕೊರೊನಾ ವೈರಸ್ ಬಹಳ ವೇಗವಾಗಿ ಹರಡುತ್ತಿರುವ ವೈರಸ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸುಧಾಕರ್ ಹೇಳಿದ್ದಾರೆ.
ರೂಪಾಂತರಿ ವೈರಸ್ ಇರುವ ದೇಶದಿಂದ ರಾಜ್ಯಕ್ಕೆ ಯಾರಾದ್ರು ಬಂದರೆ ಅವರನ್ನು ವಿಮಾನ ನಿಲ್ದಾಣದಲ್ಲೇ ಪರೀಕ್ಷೆ ಮಾಡಲಾಗುತ್ತಿದೆ. ಪಾಸಿಟಿವ್ ಬಂದರೆ ಅವರನ್ನು ಪ್ರತ್ಯೇಕವಾಗಿ ಇಡಲು ಸೂಚನೆ ನೀಡಲಾಗಿದೆ ಹಾಗೆಯೇ ಒಂದು ವಾರದ ನಂತರ ಮತ್ತೆ ಪರೀಕ್ಷಿಸಿ ನೆಗೆಟಿವ್ ಬಂದರೆ ಮಾತ್ರ ಅವರನ್ನು ಮನೆಗೆ ಕಳುಹಿಸಲಾಗುವುದು ಎಂದು ವಿವರಿಸಿದರು.

ಪ್ರತಿಯೊಬ್ಬರು ಎರಡು ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳಿ, ಯಾವ ತೊಂದರೆಯಿಲ್ಲ ಎಂದು ಸುಧಾಕರ್ ಸ್ಪಷ್ಟಪಡಿಸಿದರು. ಸುಮಾರು 45 ಲಕ್ಷ ಜನರು ಎರಡನೇ ಡೋಸ್ ಲಸಿಕೆಯನ್ನು ಇದುವರೆಗೂ ಪಡೆದಿಲ್ಲ, ಅವಧಿ ಮುಗಿದರೂ ಅವರೂ ಪಡೆದಿಲ್ಲ, ಉದಾಸೀನ ಮಾಡಿದರೆ ಗಂಭೀರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಖಾಸಗಿ ಸೇರಿದಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಗಳಿಗೇನು ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಎಲ್ಲರೂ ಜತೆ ಸೇರಿ ಕೊರೊನಾ ವೈರಸ್ ಅನ್ನು ಓಡಿಸಬೇಕಾಗಿದೆ. ಕಡ್ಡಾಯವಾಗಿ ಮಾಸ್ಕ, ಸ್ಯಾನಿಟೈಸರ್ ಬಳಸಬೇಕಾಗಿದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ವಿವರಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗಿನಿಂದ ಔಷಧಿ ತರಲು ಚೀಟಿ ಬರೆದುಕೊಡದಂತೆ ಔಷಧಿಗಳನ್ನು ದಾಸ್ತಾನು ಇಡಲಾಗುವುದು ಎಂದು ಸಚಿವರು ತಿಳಿಸಿದರು.

More News