DK SHIVAKUMAR IN MANDYA: ಮಂಡ್ಯದಲ್ಲಿ ಸ್ಪರ್ಧೆ ಮಾಡಲು ನಿಮ್ಮ ಬಳಿ ಬೇರೆ ಜನ ಇರಲಿಲ್ಲವೇ? ನಿಮ್ಮನ್ನು ಶಾಸಕ, ಮುಖ್ಯಮಂತ್ರಿ ಮಾಡಿದ ಜನರಿಗೆ ಅವಕಾಶ ನೀಡಬಹುದಿತ್ತಲ್ಲವೇ? ಡಿ.ಕೆ. ಶಿವಕುಮಾರ್ ಆಕ್ರೋಶ

ಇದು ಐತಿಹಾಸಿಕ ಸಭೆ. ಭಾರತ ಜೋಡೋ ಯಾತ್ರೆ ಮೂಲಕ ರಾಜ್ಯದಲ್ಲಿ ರಾಹುಲ್ ಗಾಂಧಿ ಅವರು ಚಾಮರಾಜನಗರದಿಂದ ರಾಯಚೂರಿನವರೆಗೂ ಹೆಜ್ಜೆ ಹಾಕಿದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಆಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅವರ ಕಾಲ್ಗುಣ ಶಕ್ತಿಶಾಲಿಯಾಗಿದೆ.
ದೇಶದ ಬಡವರ ಬೆಲೆಏರಿಕೆ, ನಿರುದ್ಯೋಗ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲು ಹೆಜ್ಜೆ ಹಾಕಿದ್ದಾರೆ. ಮಂಡ್ಯದಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಇಲ್ಲಿಗೆ ಬಂದಿದ್ದಾರೆ. ಮಂಡ್ಯದಲ್ಲಿ 1 ಕ್ಷೇತ್ರ ಹೊರತಾಗಿ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಿದ್ದೀರಿ. ರಾಜ್ಯದಲ್ಲಿ 136 ಕ್ಷೇತ್ರಗಳನ್ನು ಗೆಲ್ಲಿಸಿ ಬಲಿಷ್ಠ ಸರ್ಕಾರ ಅಧಿಕಾರಕ್ಕೆ ತಂದಿದ್ದೀರಿ.
ನಾನು ವಿರೋಧ ಪಕ್ಷದ ಅಭ್ಯರ್ಥಿ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಕಾರಣ, ಅವರು ಎಂದಿಗೂ ನಿಮ್ಮ ಕಷ್ಟಗಳಿಗೆ ಸ್ಪಂದಿಸಿಲ್ಲ. ಮಂಡ್ಯದಲ್ಲಿ ಒಂದೇ ಒಂದು ಸಾಕ್ಷಿಗುಡ್ಡೆ ಬಿಟ್ಟಿಲ್ಲ. ಅವರ ತಂದೆ ಕಾಂಗ್ರೆಸ್ ಪಕ್ಷದಿಂದ ಪ್ರಧಾನಮಂತ್ರಿಯಾದರು. ಅವರು ಮುಖ್ಯಮಂತ್ರಿಯಾದರೂ ಯಾವುದೇ ಕೊಡುಗೆ ನೀಡಿಲ್ಲ. ಹೀಗಾಗಿ ಅವರ ಬಗ್ಗೆ ಮಾತು ಅನಾವಶ್ಯಕ.

ನಾವು ನಿಮ್ಮ ಬದುಕು ಕಟ್ಟಿಕೊಡುವ ಬಗ್ಗೆ ಆಲೋಚಿಸಿದರೆ, ಬಿಜೆಪಿಯವರು ಕೇವಲ ಭಾವನಾತ್ಮಕ ರಾಜಕೀಯದ ಬಗ್ಗೆ ಯೋಚಿಸುತ್ತಾರೆ. ನಮ್ಮ ಸರ್ಕಾರ ನಿಮ್ಮ ಬದುಕು ಕಟ್ಟಿಕೊಡಲು ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದು, ಮೇಕೆದಾಟು ಯೋಜನೆ ನಾವು ಪ್ರಾರಂಭ ಮಾಡಿಯೇ ಮಾಡುತ್ತೇವೆ ಎಂಬ ಸಂಕಲ್ಪ ಮಾಡಿದ್ದೇವೆ. ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಇದ್ದರೂ ಮೇಕೆದಾಟು ಯೋಜನೆಗೆ ಅನುಮತಿ ನೀಡಲಿಲ್ಲ. ಈಗಿರುವ ಕಷ್ಟ ಕಾಲದಲ್ಲಿ ನಾವು ಈ ಭಾಗದ ರೈತರ ಬೆಳೆಗಳಿಗೆ ನೀರು ಹರಿಸಿದ್ದೇವೆ.
ನಾನು ಹಾಗೂ ಸಿದ್ಧರಾಮಯ್ಯ ಅವರು ಈ ಅವಧಿಯಲ್ಲಿ ಆ ಯೋಜನೆ ಆರಂಭಿಸುತ್ತೇವೆ. ಇಂದು ಜೆಡಿಎಶ್ ಮಾಜಿ ಶಾಸಕರಾದ ಶ್ರೀನಿವಾಸ್ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಅವರೇನು ದಡ್ಡರೇ? ಕಳೆದ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಮ್ ಎಂದು ಹೇಳಿದ್ದರು. ಆಗ ಈ ರೀತಿ ಯಾಕೆ ಹೇಳಿದರು ಎಂದು ನಾನು ಪ್ರಶ್ನೆ ಮಾಡಿದೆ. ಆಗ ಸಿದ್ದರಾಮಯ್ಯ ಅವರ ಜತೆಯೂ ಜಗಳ ಮಾಡಿದೆ. ಆಗ ಅವರು ಹೇಳಿದರು. ಅವರು ಬಿಜೆಪಿ ಜತೆ ಒಳಗೊಳಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಈಗ ಎ ಮತ್ತು ಬಿ ಟೀಮ್ ಸೇರಿ ಒಂದೇ ಟೀಮ್ ಆಗಿದೆ.

ರಾಹುಲ್ ಗಾಂಧಿ ಅವರು ಭಾರತದಲ್ಲಿ ನ್ಯಾಯ ಯಾತ್ರೆ ಮಾಡಿದ್ದಾರೆ. ಈಗ ಮಂಡ್ಯದಲ್ಲಿ ನಿಮ್ಮ ಸೇವೆ ಮಾಡಲು ಮಂಡ್ಯದವರಿಗೇ ಸ್ಥಳಿಯರಿಗೆ, ಉದ್ಯಮಿಗೆ, ರೈತನ ಮಗ ವೆಂಕಟರಮಣೇಗೌಡ ಅವರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇಲ್ಲಿ ಕೇವಲ ಸ್ಟಾರ್ ಚಂದ್ರು ಅವರು ಮಾತ್ರ ಅಭ್ಯರ್ಥಿಯಲ್ಲ. ಇಲ್ಲಿ ಈ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಅಭ್ಯರ್ಥಿಯೇ.
ಜೆಡಿಎಸ್ ಅಭ್ಯರ್ಥಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಸ್ಪರ್ಧೆ ಮಾಡಲು ನಿಮ್ಮ ಬಳಿ ಬೇರೆ ಜನ ಇರಲಿಲ್ಲವೇ? ನಿಮ್ಮನ್ನು ಶಾಸಕ, ಮುಖ್ಯಮಂತ್ರಿ ಮಾಡಿದ ಜನರಿಗೆ ಅವಕಾಶ ನೀಡಬಹುದಿತ್ತಲ್ಲವೇ? ನಿಮ್ಮನ್ನು ಆರಿಸಿ ಕಳುಹಿಸಿದ ಜನರ ಕಿವಿ ಮೇಲೆ ಹೂವ ಇಟ್ಟು ಈಗ ಈ ಮಂಡ್ಯ ಜನರನ್ನು ಯಾಮಾರಿಸಲು ಬಂದಿದ್ದೀರಾ? ಹಾಸನ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೋಲಾರ ಈ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದ್ದು, ರಾಜ್ಯದಲ್ಲಿ ಕಾಂಗ್ರೆಸ್ 20 ಕ್ಷೇತ್ರಗಳನ್ನು ಗೆಲ್ಲಲಿದೆ.

ಈ ಮಣ್ಣಿನ ಮಹಿಳೆಯರು ತಮ್ಮ ಸ್ವಾಭಿಮಾನಕ್ಕಾಗಿ ಹೋರಾಟ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳು. ನಿಮಗೆ ಅಪಮಾನ ಮಾಡಿದವರನ್ನು ಗೋಬ್ಯಾಕ್ ಎಂದು ಹೇಳಿದ್ದೀರಿ. ಅವರನ್ನು ಕೇವಲ ಮಂಡ್ಯದಿಂದ ಮಾತ್ರವಲ್ಲ, ರಾಜ್ಯದಿಂದಲೇ ಗೋಬ್ಯಾಕ್ ಮಾಡಿ. ನಮ್ಮ ಗ್ಯಾರಂಟಿ ಯೋಜನೆಗಳಿಂದ ಈ ತಾಯಂದಿರು ದಾರಿತಪ್ಪುತ್ತಿದ್ದಾರೆ ಎಂದು ಹೇಳಿದವರಿಗೆ ನೀವು ಧಿಕ್ಕಾರ ಕೂಗಿದ್ದೀರ. ನಿಮ್ಮ ಶೌರ್ಯ ಹಾಗೂ ಶಕ್ತಿಗೆ ನಮಿಸುತ್ತೇನೆ. ನೀವು ಹಳ್ಳಿ ಹಳ್ಳಿಗೆ ಹೋಗಿ ಪ್ರಚಾರ ಮಾಡಿ, ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಬೇಕು.
ಸಾವಿರಾರು ಮಂದಿ ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಮಂಡ್ಯದ ಎಲ್ಲಾ ಶಾಸಕರು, ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ನಾನು ನಿಮಗೆ ಒಂದು ಮಾತು ಹೇಳಿದ್ದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಅದೇ ರೀತಿ ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು, ಈ ಕೈ ಗಟ್ಟಿಯಾಗಿ ಕರ್ನಾಟ ರಾಜ್ಯ ಸಮೃದ್ಧವಾಯಿತು, ಮಂಡ್ಯಕ್ಕೆ ಅನುಕೂಲವಾಯಿತು. ನೀವೆಲ್ಲರೂ ಸೇರಿ 2ನೇ ಕ್ರಮ ಸಂಖ್ಯೆಯ ಹಸ್ತದ ಗುರುತಿಗೆ ಆಶೀರ್ವಾದ ಮಾಡಬೇಕು. ರಾಹುಲ್ ಗಾಂಧಿ ಅವರು ನಿಮಗೆ ಶಕ್ತಿ ನೀಡಲು ಬಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾಂಗ್ರೆಸ್ ಗ್ಯಾರಂಟಿ ತಾತ್ಕಾಲಿಕ ಎಂದು ಹೇಳಿದ್ದಾನೆ. ಅಂದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ. ಮಿಸ್ಟರ್ ಯಡಿಯೂರಪ್ಪ, ಮಿಸ್ಟರ್ ವಿಜಯೇಂದ್ರ ನಮ್ಮ ಕಾಂಗ್ರೆಸ್ ಗ್ಯಾರಂಟಿ ಜನರ ಬದುಕಿನ ಭಾಗ. ಇದನ್ನು ಸ್ಥಗಿತಗೊಳಿಸುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ. ಇದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದರು.

More News

You cannot copy content of this page