ಕನ್ನಡ ನಾಡಿಗೆ ಹೊಸ ಸಾಂಸ್ಕೃತಿಕ ದಿಕ್ಸೂಚಿ ನೀಡಲು ಸರ್ಕಾರ ಪ್ರಮುಖ ಪಾತ್ರ ವಹಿಸಲಿದೆ: ಸಿಎಂ

ಬೆಂಗಳೂರು : ಸಾಹಿತ್ಯ ಮತ್ತು ಸಂಸ್ಕೃತಿಯ ನಡುವಿನ ಕೊಂಡಿಯಾಗಿ, ಕನ್ನಡ ನಾಡಿಗೆ ಒಂದು ಹೊಸ ಸಾಂಸ್ಕೃತಿಕ ದಿಕ್ಸೂಚಿಯನ್ನು ನೀಡಬೇಕಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ 66ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡದ ಹೆಸರಾಂತ ಲೇಖಕರ 66 ಕನ್ನಡ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸಾಹಿತಿಗಳಿಂದ ಸಂಸ್ಕೃತಿಯ ಕುರಿತ ಚಿಂತನೆ ಸಾಧ್ಯ ಎಂದರು.
ಕನ್ನಡ ನಾಡು ಕೇವಲ ಆರ್ಥಿಕವಾಗಿ ಬೆಳೆದರೆ ಸಾಲದು, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿಯೂ ಬೆಳೆಯಬೇಕು. ನಮ್ಮ ಸಂಸ್ಕೃತಿ ನಾವೇನಾಗಿದ್ದೇವೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ನಾವು ಏನಾಗಬೇಕಿತ್ತು ಹಾಗೂ ಏನಾಗಿದ್ದೇವೆ ಎಂಬ ಚಿಂತನೆ ಮಾಡುವ ಸಂಸ್ಕೃತಿ ಇಂದಿನ ಆಧುನಿಕ ಯುಗದಲ್ಲಿ ಮಾಡಬೇಕಿದೆ ಎಂದರು.
ಈ ಚಿಂತನೆಯನ್ನು ಸಾಹಿತಿಗಳು ಮಾಡಲು ಸಾಧ್ಯ. ಸಮಾಜದಲ್ಲಿ ಸಾಹಿತಿ ಹಾಗೂ ಸಾಹಿತ್ಯದ ಬಗ್ಗೆ ಅಪಾರ ಗೌರವವಿದೆ. ಕನ್ನಡ ಸಂಸ್ಕೃತಿಯ ಬೆಳವಣಿಗೆ ಸಾಹಿತಿಗಳ ಮುಖಾಂತರವಾದಾಗ ಅವರ ಬಗೆಗಿನ ಗೌರವದೊಂದಿಗೆ ಪ್ರೀತಿ ವಿಶ್ವಾಸವೂ ಮೂಡುತ್ತದೆ ಎಂದು ನುಡಿದರು.
ಸಾಹಿತ್ಯಕ್ಕೆ ಭಾಷೆ , ಜಾತಿ ಧರ್ಮದ ಹಂಗು ಇಲ್ಲ
ಮನುಜಕುಲ ತನ್ನ ಬುದ್ಧಿಶಕ್ತಿ ಹಾಗೂ ವಾಕ್ ಶಕ್ತಿಯಿಂದ ಎಂತಹ ವಿಷಮ ಪರಿಸ್ಥಿತಿಯಲ್ಲೂ ಬದುಕುತ್ತಾನೆ. ತನ್ನ ಚಿಂತನಾಶಕ್ತಿಯಿಂದ ಒಗ್ಗಿಕೊಳ್ಳುವಿಕೆಯ ಗುಣ ಮನುಷ್ಯನಿಗಿದೆ. ಈ ಚಿಂತನೆ ಶಬ್ಧರೂಪ ಪಡೆದು ಅಕ್ಷರ, ಬರಹ, ಸಾಹಿತ್ಯ ಮೂಡಿತು. ಹೀಗೆ ಜ್ಞಾನ, ವಿಜ್ಞಾನ, ತಂತ್ರಜ್ಞಾನ ನಿರ್ಮಿಸಲು ಮನುಷ್ಯನಿಂದ ಸಾಧ್ಯವಾಯಿತು ಎಂದರು.


ಸಾಹಿತ್ಯಕ್ಕೆ ಭಾಷೆ, ಧರ್ಮ ಮತ್ತು ಜಾತಿಯ ಹಂಗಿಲ್ಲ. ಶುಭ್ರ, ಸತ್ಯ ಚಿಂತನೆಯಿಂದ ಮೂಡಿದ ಸಾಹಿತ್ಯ ನಮ್ಮಲ್ಲಿ ಬೆರೆಗು ಮತ್ತು ಚೈತನ್ಯ ಮೂಡಿಸುತ್ತದೆ. ಸತ್ಯ ಶೋಧನೆ, ಸತ್ಯ ಪರಿಕಲ್ಪನೆ ಶ್ರೇಷ್ಠ ಸಾಹಿತ್ಯಕ್ಕೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕನ್ನಡದಲ್ಲಿ ಇಂತಹ ಶ್ರೇಷ್ಠ ಸಾಹಿತಿಗಳ ಸರಮಾಲೆಯೇ ಇದೆ. ಈಗಿನ ಜಾಗತೀಕರಣ ಖಾಸಗೀಕರಣ ಯುಗದಲ್ಲಿ ಅಂತ:ಕರಣ ಕಾಣೆಯಾಗಿದ್ದು, ಲಾಭ ನಷ್ಟದ ಲೆಕ್ಕಾಚಾರ ಮಾತ್ರ ಉಳಿದಿದೆ. ಆರ್ಥಿಕತೆಯಲ್ಲಿ ಪಾಪಪುಣ್ಯದ ಭಾವ ಮೂಡಿದರೆ ಸತ್ಯ ಮಾರ್ಗದಲ್ಲಿ ನಡೆಯಲು ಅನುಕೂಲವಾಗುತ್ತದೆ. ಬದುಕಿನಲ್ಲಿಯೂ ಲಾಭ ನಷ್ಟದ ಭಾವ ಮೂಡಿದರೆ ಆಧ್ಯಾತ್ಮದತ್ತ ನಡೆಯಲು ಸಹಕಾರಿಯಾಗುತ್ತದೆ. ಈ ಚಿಂತನೆಗಳಿಂದ ಕೂಡಿದ ಸಾಹಿತ್ಯ ದೊರಕಿದಲ್ಲಿ ನಮ್ಮಲ್ಲಿ ಮರೆಯಾಗುತ್ತಿರುವ ಅಂತ:ಕರಣವನ್ನೂ ಪುನ: ಸ್ಥಾಪಿಸಿದಂತಾಗುತ್ತದೆ ಎಂದು ತಿಳಿಸಿದರು.


ಇಂದು 66ನೇ ರಾಜ್ಯೋತ್ಸವ ಸಂದರ್ಭದಲ್ಲಿ 66 ಕನ್ನಡ ಪುಸ್ತಕಗಳನ್ನು ಲೋಕಾರ್ಪಣೆ ಮಾಡುವ ಮೂಲಕ ತಾವು ಶ್ರೇಷ್ಠ ಕನ್ನಡಿಗ ಎನ್ನುವುದನ್ನು ನಿರೂಪಿಸಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ‘ಅವ್ವ’ ಕಥಾ ಸಂಕಲನ
ಮುಖ್ಯಮಂತ್ರಿಗಳು ‘ಅವ್ವ’ ಎಂಬ ಹೆಸರಿನ ಕಥಾ ಸಂಕಲನವನ್ನು ಹೊರತರುತ್ತಿದ್ದು, ಸಾಹಿತ್ಯ ಕ್ಷೇತ್ರಕ್ಕೆ ತಾವೂ ಸಣ್ಣ ಕೊಡುಗೆ ನೀಡುತ್ತಿರುವುದಾಗಿ ತಿಳಿಸಿದರು. ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಮೂಲಕ ಸಾಹಿತ್ಯ ಕ್ಷೇತ್ರವನ್ನು ಪ್ರೋತ್ಸಾಹಿಸಬೇಕೆಂದು ನಾಡಿನ ಜನತೆಗೆ ಈ ಸಂದರ್ಭದಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಾಹಿತಿ ಕಮಲಾ ಹಂಪನಾ, ಹಿರಿಯ ಕವಿಗಳಾದ ಎಚ್ ಎಸ್ ವೆಂಕಟೇಶಮೂರ್ತಿ, ದೊಡ್ಡರಂಗೇಗೌಡ ಮುಂತಾದವರು ಉಪಸ್ಥಿತರಿದ್ದರು.

More News