ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರಪ್ರದೇಶದ ರಾಯಬರೇಲಿ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ತಾಯಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಹೋದರಿ ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಕೇರಳದ ವಯನಾಡ್ ಬಳಿಕ ಇದೀಗ ಎರಡನೆ ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ.
ರಾಯಬರೇಲಿ ಕ್ಷೇತ್ರದಿಂದ ರಾಹುಲ್ ಸ್ಪರ್ಧೆ, ಆಡಳಿತಾರೂಢ ಬಿಜೆಪಿಗೆ ಕಾಂಗ್ರೆಸ್ ನೀಡಿರುವ ಸ್ಪಷ್ಟ ಸಂದೇಶ ಎಂದೇ ಹೇಳಲಾಗುತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಉತ್ತರಪ್ರದೇಶದ ಫಲಿತಾಂಶ ನಿರ್ಣಾಯಕವಾಗಿದ್ದು, ರಾಜ್ಯದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ.

ಇದೀಗ ಖುದ್ದು ರಾಹುಲ್ ಗಾಂಧಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಕಾರಣ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಲಿದೆ. ಇದು ಮತಗಳಾಗಿ ಪರಿವರ್ತನೆಯಾಗಲಿದೆ ಎಂಬುದು ಕಾಂಗ್ರೆಸ್ ವಿಶ್ವಾಸ
ಕಾಂಗ್ರೆಸ್ ಹಿರಿಯ ನಾಯಕ ಜೈ ರಾಂ ರಮೇಶ್ ಈ ಸಂಬಂಧ ಸುದೀರ್ಘವಾದ ಎಕ್ಸ್ ಪೋಸ್ಟ್ ಮಾಡಿದ್ದು, ಗಂಭೀರ ಚಿಂತನೆ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಇಂದು ರಾಜ್ಯದ ಚಿಕ್ಕೋಡಿಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಯಬರೇಲಿ ಕ್ಷೇತ್ರದಲ್ಲಿ ರಾಹುಲ್ ಸೋಲು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ.
ಮುಂದಿನ ಕೆಲವು ವಾರಗಳ ಬಳಿಕ ದೇಶದ ರಾಜಕಾರಣ ರಾಹುಲ್ ಸ್ಪರ್ಧೆಯ ಸುತ್ತ ತಿರುಗುವ ಎಲ್ಲ ಸಾಧ್ಯತೆ ನಿಚ್ಚಳವಾಗಿದೆ