HD REVANNA HOUSE: ಮಹಿಳೆಯ ಅಪಹರಣ ಪ್ರಕರಣ, ಬೆಂಗಳೂರಿನ ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು

ಬೆಂಗಳೂರು: ಮಾಜಿ ಸಚಿವ ಹೆಚ್. ಡಿ. ರೇವಣ್ಣ ವಿರುದ್ಧ ದಾಖಲಾಗಿರುವ ಕಿಡ್ನಾಪ್ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಹೊಳೆ ನರಸೀಪುರದಲ್ಲಿರುವ ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ಬಳಿಕ ಬೆಂಗಳೂರಿನ ಬಸವನಗುಡಿಯಲ್ಲಿರುವ ರೇವಣ್ಣ ನಿವಾಸದಲ್ಲಿ ಇದೀಗ ಸ್ಥಳ ಮಹಜರು ನಡೆಸಲಾಗಿದೆ. ಹೊಳೆನರಸೀಪುರದಲ್ಲಿ ಸಂತ್ರಸ್ತೆಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಬೆಂಗಳೂರಿನಲ್ಲಿರುವ ರೇವಣ್ಣ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ. ರೇವಣ್ಣ ಪರ ವಕೀಲರ ಉಪಸ್ಥಿತಿಯಲ್ಲಿ ಈ ಪ್ರಕ್ರಿಯೆ ನಡೆಸಲಾಗಿದೆ ಎಂದು ವರದಿಯಾಗಿದೆ. ಸ್ಥಳ ಮಹಜರು ಪ್ರಕ್ರಿಯೆಯ ಎಲ್ಲ ಹಂತಗಳನ್ನು ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಸಂತ್ರಸ್ಥೆ ನೀಡಿರುವ ದೂರಿನ ಆಧಾರದಲ್ಲಿ ಎಸ್‌ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸುತ್ತಿದ್ದಾರೆ. ನಾಲ್ವರು ಮಹಿಳಾ ಅಧಿಕಾರಿಗಳು ಸೇರಿದಂತೆ ಒಟ್ಟು ಆರು ಮಂದಿ ಅಧಿಕಾರಿಗಳು ರೇವಣ್ಣ ನಿವಾಸಕ್ಕೆ ಆಗಮಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ರೇವಣ್ಣ ನಿವಾಸದ ಮುಂದೆ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಬಸವನಗುಡಿ ಪೊಲೀಸರು ಭದ್ರತೆಯ ಹೊಣೆ ಹೊತ್ತಿದ್ದಾರೆ.
ಈ ಮಧ್ಯೆ ತಮ್ಮ ವಕೀಲರ ಜೊತೆ ರೇವಣ್ಣ ಕಾನೂನು ಹೋರಾಟದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಎಸ್ಐಟಿ ಕೇಳಿರುವ ಪ್ರಶ್ನೆಗಳು, ಆರೋಪ ಹಾಗೂ ಮುಂದಿನ ಕಾನೂನು ಹೋರಾಟದ ಸಾಧ್ಯತೆ ಬಗ್ಗೆ ರೇವಣ್ಣ, ವಕೀಲರ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ.
ನ್ಯಾಯಾಲಯ ವಕೀಲರ ಜೊತೆ ಸಮಾಲೋಚನೆಗೆ ರೇವಣ್ಣಗೆ ಅನುಮತಿ ನೀಡಿದೆ.
ಈ ಎಲ್ಲ ಬೆಳವಣಿಗೆ ಮಧ್ಯೆ ಪ್ರಜ್ವಲ್ ರೇವಣ್ಣ ಎಲ್ಲಿದ್ದಾನೆ ಎಂಬ ಬಗ್ಗೆ ಇದುವರೆಗೆ ಯಾವುದೇ ಸ್ಪಷ್ಟ ಉತ್ತರ ದೊರೆತಿಲ್ಲ. ಜರ್ಮನಿಯಿಂದ ಹೊರಟಿರುವ ಪ್ರಜ್ವಲ್. ದುಬೈನಲ್ಲಿ ವಾಸ್ತವ್ಯ ಹೂಡಿದ್ದಾನೆ ಎಂದು ಹೇಳಲಾಗುತ್ತಿದೆ. ಎಸ್ಐಟಿ ಈ ಸಂಬಂಧ ಯಾವುದೇ ಹೇಳಿಕೆ ನೀಡಿಲ್ಲ.
ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಮೂಲಕ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಎಸ್ಐಟಿ ಪ್ರಯತ್ನ ಮುಂದುವರಿಸಿದೆ. ಇಂದು ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸಿದರೆ ಬಂಧನ ಖಚಿತವಾಗಿದೆ.

More News