ಬೆಂಗಳೂರು: ರಾಜ್ಯ ಸರ್ಕಾರ ರೈತರು ಸೇರಿದಂತೆ ಹಲವು ಫಲಾನುಭವಿಗಳಿಗೆ ಬಿಡುಗಡೆ ಮಾಡಿದ ಹಣವನ್ನು ಯಾವುದೇ ಕಾರಣಕ್ಕೂ ಇತರ ಸಾಲ ವಸೂಲಿ ಹೆಸರಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳದಂತೆ ಸಿಎಂ ಸಿದ್ದರಾಮಯ್ಯ ಬ್ಯಾಂಕ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ವಿವಿದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಈ ನಿಟ್ಟಿನಲ್ಲಿ ಬ್ಯಾಂಕ್ ಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ತೊಂದರೆಯಲ್ಲಿರುವ ಜನರಿಗೆ ಸರ್ಕಾರ ಕಲ್ಯಾಣ ಕಾರ್ಯಕ್ರಮಗಳ ಅಂಗವಾಗಿ ಹಣದ ರೂಪದಲ್ಲಿ ನೆರವು ನೀಡುತ್ತಿದೆ. ಇದು ಫಲಾನುಭವಿಗಳ ಖಾತೆಗೆ ನೇರವಾಗಿ ಹೋಗುತ್ತಿದೆ. ಆದರೆ ರಾಜ್ಯದ ಹಲವು ಕಡೆ ರೈತರು ಹಾಗೂ ಇನ್ನಿತರ ವ್ಯಕ್ತಿಗಳು ಪಡೆದಿರುವ ಸಾಲದ ಹೆಸರಿನಲ್ಲಿ ಬ್ಯಾಂಕ್‌ಗಳು ಹಣದ ಕಡಿತ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದನ್ನು ಸಹಿಸಲು ಸಾಧ್ಯ ಇಲ್ಲ. ಬ್ಯಾಂಕ್‌ಗಳು ತಮ್ಮ ಧೋರಣೆ ಬದಲಾಯಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಎಲ್ಲ ಬ್ಯಾಂಕ್ ಮುಖ್ಯಸ್ಥರಿಗೆ ಪತ್ರ ಬರೆಯುವಂತೆಯೂ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್‌ಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಖಡಕ್ ಸಂದೇಶ ರವಾನಿಸುವಂತೆ ಅವರು ಸಿಎಸ್‌ಗೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಉತ್ತಮ ಮುಂಗಾರು ಮಳೆಯಾಗುವ ಮುನ್ಸೂಚನೆ ದೊರೆಿತಿದ್ದು , ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿರುವಂತೆ ಸಿಎಂ ಸೂಚನೆ ನೀಡಿದ್ದಾರೆ. ಬಿತ್ತನೆ ಬೀಜ ಕೊರತೆಯಾಗದಂತೆ ಕ್ರಮ ವಹಿಸಲು ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜನಸ್ಪಂದನಾ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಅರ್ಜಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಕೂಡ ಸಿದ್ದರಾಮಯ್ಯ ಇಂದು ನಡೆಸಿದ್ದಾರೆ. ನೀತಿ ಸಂಹಿತೆಯ ಚೌಕಟ್ಟಿನಡಿಯಲ್ಲಿ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಕೊಂಚ ಸಡಿಲಮಾಡಲಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ನೀತಿ ಸಂಹಿತೆಯಲ್ಲಿ ಚುನಾವಣಾ ಆಯೋಗ ಸಡಿಲು ಮಾಡಿದೆ.
ಕಾಮಗಾರಿಗಳ ಬಾಕಿ ಬಿಲ್ ಬಿಡುಗಡೆ ಮಾಡಲು ಆಯೋಗದಿಂದ ಅವಕಾಶ ಕಲ್ಪಿಸಲಾಗಿದೆ.ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಕರೆಯಲು ಅವಕಾಶ ನೀಡಲಾಗಿದೆ. ಇಲಾಖಾವಾರು ಟೆಂಡರ್ ಕರೆಯಲು ಚುನಾವಣಾ ಆಯೋಗದಿಂದ ಅವಕಾಶ ಕಲ್ಪಿಸಲಾಗಿದೆ. ಸಿಎಂ ಹಾಗೂ ಸಚಿವರಿಗೆ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಲು ಅವಕಾಶ ನೀಡಲಾಗಿದೆ.
ರಾಜ್ಯದಲ್ಲಿ ಸಾರ್ವತ್ರಿಕ ಚುನಾವಮೆ ಮುಗಿದಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ರದ್ದುಪಡಿಸುವಂತೆ ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ಮನವಿಮ ಾಡಿತ್ತು. ಆದರೆ ಪೂರ್ಣವಾಗಿ ನೀತಿ ಸಂಹಿತೆ ರದ್ದುಪಡಿಸಬೇಕು ಎಂಬ ಮನವಿಯನ್ನು ಆಯೋಗ ತಳ್ಳಿಹಾಕಿತ್ತು.