ಬೆಂಗಳೂರು : ರಾಜ್ಯದ ಬಿಜೆಪಿ ಯಾವ ಶಾಸಕನೂ ಕೂಡ ತಿರುಕನ ಕನಸು ಕಾಣೋದು ಬೇಡ ಎಂದು ಕಂದಾಯ ಸಚಿವ ಆರ್ ಅಶೋಕ್ ತಮ್ಮ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಬಿಜೆಪಿ ನಾಯಕರು ಬೊಮ್ಮಾಯಿ ಅವರ ಮೇಲೆ ಮುನಿಸಿಕೊಂಡಿದ್ದು, ಬದಲಿ ಸಿಎಂಗಾಗಿ ತೆರೆಮರೆಯ ಕಸರತ್ತು ನಡೆಸುತ್ತಿರುವ ಮಧ್ಯೆಯೇ, ನಿನ್ನೆ ಮುರುಗೇಶ್ ನಿರಾಣಿ ಮುಂದಿನ ಸಿಎಂ ಆಗಲಿದ್ದಾರೆ ಅಂತ ಈಶ್ವರಪ್ಪ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರದ ನಾಯಕರಾದ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ತೀರ್ಮಾನದಂತೆ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಜನರು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಅವರ ಧ್ವನಿಯಾಗಿ ನಾವು ಸ್ಪಂದಿಸಬೇಕೆಂ ವಿನಹ ಇಂತಹ ರಾಜಕಾರಣ ಮಾಡಬಾರದು ಎಂದು ತಮ್ಮ ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಮನ್ ಸಿಎಂ ಅಂತ ಹೆಸರು ಪಡೆದಿದ್ದಾರೆ, ಈಗ ಬಂದಿರೋ ಎಲ್ಲಾ ಸಂಕಷ್ಟಗಳಲ್ಲಿ ಒಳ್ಳೆಯ ರೀತಿ ಕೆಲಸ ಮಾಡಿದ್ದಾರೆ, ಅವರ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಅಶೋಕ್ ಸಿಎಂ ಆಗಲ್ವಾ ?
ಕಂದಾಯ ಸಚಿವ ಆರ್ ಅಶೋಕ್ ಮುಖ್ಯಮಂತ್ರಿ ಆಗಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಚುಕ್ಕಾಣಿ ಯಾರು ಹಿಡಿಯಬೇಕು ಎಂದು ರಾಜ್ಯದ ಜನ ತೀರ್ಮಾನ ಮಾಡಲಿದ್ದಾರೆ ಎಂದು ತಿಳಿಸಿದರು. ಕೇಂದ್ರದ ನಾಯಕರು ನಮ್ಮ ಹಣೆ ಬರಹ ಬರೆಯಲಿದ್ದಾರೆ, ಈಗ ಬೊಮ್ಮಾಯಿ ಅವರಿಗೆ ಒಲಿದು ಬಂದಿದೆ ಎಂದು ವ್ಯಂಗ್ಯವಾಗಿ ಹೇಳಿದ ಅವರು, ತಾವು ಒಬ್ಬ ಆಕಾಂಕ್ಷಿ, ಆದರೆ, ಬಿಸಿಲಿನ ಕುದುರೆ ಮೇಲೆ ಹೋಗಬಾರದು ಎಂದು ಹೇಳುವುದರ ಮೂಲಕ ಮುಂಬರುವ ದಿನಗಳಲ್ಲಿ ತಾವೂ ಈ ಹುದ್ದೆಗೆ ಪೈಪೋಟಿ ನೀಡಲಿದ್ದೇನೆ ಎಂದು ಪರೋಕ್ಷವಾಗಿ ಹೇಳಿದರು.
ರೈತರಿಗೆ ಪರಿಹಾರ ನೀಡುವ ಕೆಲಸವಾಗುತ್ತಿದೆ
ರಾಜ್ಯದಲ್ಲಿ ಬಿದ್ದ ಮಳೆಯಿಂದ ಸಾಕಷ್ಟು ಬೆಳೆ ಹಾನಿಯಾಗಿದೆ, ಈಗಾಗಲೇ ರಾಜ್ಯ ಸರ್ಕಾರ ಬೆಳೆ ಪರಿಹಾರ ಕೊಡುವ ಕೆಲಸ ಮಾಡಲಾಗಿದ್ದು, ಈ ಸಂಬಂಧ ಎಲ್ಲಾ ಡಿಸಿಗಳಿಗೆ ಗಡುವು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ಪರಿಹಾರ ಮೂರು ತಿಂಗಳುಗಳ ನಂತರ ನೀಡಲಾಗುತ್ತಿತ್ತು. ಆದರೆ, ಈಗ ಬೆಳೆ ಹಾನಿ ವರದಿ ಬಂದ ಕೂಡಲೇ ಪರಿಹಾರ ನೀಡಲು ಸೂಚಿಸಲಾಗಿದೆ ಎಂದ ಅಶೋಕ್, ಈವರೆಗೂ 3ಲಕ್ಷ ರೈತರಿಗೆ 276.57 ಕೋಟಿ ಪರಿಹಾರ ನೇರವಾಗಿ ಪಾವತಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
1.61 ಲಕ್ಷ ರೈತರಿಗೆ ಸಬ್ಸಿಡಿ ಸೇರಿಸಿ ಇಂದು ರೈತರ ಅಕೌಂಟಿಗೆ ಬಿಡುಗಡೆ ಮಾಡಲಾಗಿದ್ದು ಒಟ್ಟು 4.61 ಲಕ್ಷ ರೈತರಿಗೆ 318.87 ಕೋಟಿ ಹಣವನ್ನ ರೈತರ ಖಾತೆಗೆ ಬಿಡುಗಡೆ ಮಾಡಿದಂತಾಗಿದೆ ಎಂದರು. ಈಗಾಗಲೇ ಕೇಂದ್ರಕ್ಕೂ ವರದಿ ನೀಡಲು ಸಿದ್ದತೆಗಳನ್ನು ನಡೆಸಲಾಗಿದೆ ಎಂದು ಹೇಳಿದರು.
ಕೊವೀಡ್ -ಗಡಿಯಲ್ಲಿ ಕಟ್ಟೆಚ್ಚರ
ಕೋವಿಡ್ ವಿಚಾರವಾಗಿ ಪ್ರತಿಕ್ರಿಯೆನೀಡಿದ ಸಚಿವ ಅಶೋಕ್, ಮೈಸೂರು, ಚಾಮರಾಜನಗರ ಗಡಿಯಲ್ಲಿ ಕಾನೂನನ್ನು ಬಿಗಿಗೊಳಿಸಲಾಗಿದೆ. ವಿದೇಶದಿಂದ ಬರುವವರ ಮೇಲೆ ಕಣ್ಣಿಡಲಾಗಿದೆ, ಸ್ವತಃ ಜಿಲ್ಲಾಧಿಕಾರಿಗಳು ಗಡಿಯಲ್ಲಿ ಕಾಯುವಂತೆ ಸೂಚನೆ ನೀಡಲಾಗಿದ್ದು, ಕೇರಳದಿಂದ ಬರುವ ನರ್ಸ್ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ ಎಂದು ವಿವರಿಸಿದರು.
ಕರೋನಾ ಉಲ್ಬಣಿಸಿದ್ರೆ, ಹಿಂದೆ ಇದ್ದಂತಹ ಎಲ್ಲಾ ಕ್ರಮ ಕೈಗೊಳ್ಳಲಾಗುವುದು, ಮಾಸ್ಕ್ ಬಳಸೋದು ಕಡ್ಡಾಯವಾಗಿ ಮುಂದುವರೆಯಲಿದೆ, ರಾಜಕೀಯ ಸಮಾರಂಭ, ಮದುವೆ ಎಲ್ಲದಕ್ಕೂ ನಿಯಮಗಳು ಅನ್ವಯವಾಗಲಿವೆ ಎಂದು ಸ್ಪಷ್ಟಪಡಿಸಿದರು.




