ಬೆಂಗಳೂರು: ಪೆನ್ ಡ್ರೈವ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಹಾಗೂ ವಕೀಲ ದೇವರಾಜೇಗೌಡ ಮಾಡಿರುವ ಎಲ್ಲ ಆರೋಪಗಳು ನೂರಕ್ಕೆ ನೂರು ಸತ್ಯ ಎಂಬಂತೆ ಕಂಡು ಬರುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಭೇಟಿ ಮಾಡಿ ಹುಟ್ಟು ಹಬ್ಬದ ಶುಭಾಶಯ ಕೋರಿದ ಬಳಿಕ ಅಶೋಕ್ ಸುದ್ದಿಗಾರರ ಜೊತೆ ಮಾತನಾಡಿದರು. ಉಪ ಮುಖ್ಯಮಂತ್ರಿ 100 ಕೋಟಿ ರೂ. ಆಫರ್ ನೀಡಿದ್ದರು ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ದೇವರಾಜೇಗೌಡ ಮಾಡಿದ್ದಾರೆ. ಈಗಾಗಲೇ ಡಿಸಿಎಂ ಶಿವಕುಮಾರ್ ಅವರಿಗೆ ಸೇರಿದ್ದೆನ್ನಲಾದ ಆಡಿಯೋವನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಇದೀಗ ಅವರ ಬಳಿ ಇರುವ ಸಾಕ್ಷ್ಯಗಳು ಬಿಡುಗಡೆಯಾಗುವುದನ್ನು ತಡೆಗಟ್ಟಲು ದೇವರಾಜೇಗೌಡರನ್ನು ಬಂಧಿಸಲಾಗಿದೆ ಎಂದು ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಬೆಂಕಿ ಇಲ್ಲದೆ ಹೊಗೆ ಬರಲು ಸಾಧ್ಯವೇ ಇಲ್ಲ. ಈ ವಿಷಯದಲ್ಲಿ ಕೂಡ ಇದೇ ರೀತಿ ಆಗಿದೆ. ಒಕ್ಕಲಿಗ ನಾಯಕರನ್ನು ಮುಗಿಸುವ ಷಡ್ಯಂತ್ರ ನಡೆದಿದೆ. ಶಿವಕುಮಾರ್ ಮತ್ತು ರಣದೀಪ್ ಸುರ್ಜೇವಾಲಾ ಸೇರಿ ಪ್ಲಾನ್ ಮಾಡಿದ್ದಾರೆ. ಎಲ್ಲವೂ ಅವರ ನಿರ್ದೇಶನದಂತೆ ನಡೆಯುತ್ತಿದೆ ಎಂದು ಅಶೋಕ್ ಆರೋಪಿಸಿದ್ದಾರೆ.
ಎಸ್‌ಐಟಿ ತನಿಖೆ ಮೇಲೆ ಭರವಸೆ ಇಲ್ಲ
ಹಾಸನದ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ಸಂಬಂಧ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದ ಬಗ್ಗೆ ಅಶೋಕ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಎಸ್ಐಟಿ ತನಿಖೆಯಿಂದ ನ್ಯಾಯ ದೊರೆಯುವ ವಿಶ್ವಾಸ ಇಲ್ಲ. ಪ್ರಕರಣದ ನ್ಯಾಯೋಚಿತ ತನಿಖೆಗೆ ಸಿಬಿಐಯೇ ಸೂಕ್ತ ಎಂದು ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಜ್ವಲ್ ಬೆಂಬಲಿಸಲ್ಲ- ಅಶೋಕ್
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣರನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿದ್ದು ಸಾಬೀತಾದರೆ ಅವರಿಗೆ ಶಿಕ್ಷೆಯಾಗಬೇಕು. ಇದರಲ್ಲಿ ಎರಡು ಮಾತಿಲ್ಲ ಎಂದು ಅಶೋಕ್ ಸ್ಪಷ್ಟಪಡಿಸಿದ್ದಾರೆ. ಇದರ ಜೊತೆ ಜೊತೆಗೆ ಅಶ್ಲೀಲ ವಿಡಿಯೋ ಹಂಚಿದವರ ವಿರುದ್ದ ಕೂಡ ಕಾನೂನು ಕ್ರಮದ ಅಗತ್ಯ ಇದೆ ಎಂದು ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.ಸಂತ್ರಸ್ತೆಯರಿಗೆ ನ್ಯಾಯ ದೊರಕಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.

ಕಾರ್ತಿಕ್ ಬಂಧನ ಯಾಕೆ ಇಲ್ಲ
ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಆರೋಪಿಗಳ ಪಟ್ಟಿಯಲ್ಲಿ ಇರುವ ಕಾರ್ತಿಕ್‌ನನ್ನು ಸರ್ಕಾರ ಇದುವರೆಗೆ ಯಾಕೆ ಬಂಧಿಸಿಲ್ಲ ಎಂದು ಅಶೋಕ್ ಪ್ರಶ್ನಿಸಿದ್ದಾರೆ. ಕಾರ್ತಿಕ್ ಸಲ್ಲಿಸಿರುವ ಜಾಮೀನು ಅರ್ಜಿ ಈಗಾಗಲೇ ತಿರಸ್ಕೃತಗೊಂಡಿದೆ. ಆದರೂ ಸರ್ಕಾರದಿಂದ ಯಾವುದೇ ಕಾನೂನು ಕ್ರಮ ಜರುಗಿಲ್ಲ ಎಂದು ಅಶೋಕ್ ಆರೋಪಿಸಿದ್ದಾರೆ. ರೇವಣ್ಣ ಅವರನ್ನು ಬಂಧಿಸಿ ಸರ್ಕಾರ ಜೈಲಿಗೆ ಕಳುಹಿಸಿತ್ತು ಎಂದು ಅಶೋಕ್ ಹೇಳಿದ್ದಾರೆ. ತನಿಖೆ ಪಾರದರ್ಶಕವಾಗಿರಬೇಕು ಯಾರದೋ ತಾಳಕ್ಕೆ ತಕ್ಕಂತೆ ಕುಣಿದು ತನಿಖೆ ನಡೆಸಬಾರದು ಎಂದು ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕುಸಿದಿದೆ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ರಾಜ್ಯ ಸರ್ಕಾರ ಕಾನೂನು ಬಾಹಿರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದೆ. ಕ್ರಿಮಿನಲ್ ಚಟುವಟಿಕೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಎಂದು ಅಶೋಕ್ ಟೀಕಿಸಿದ್ದಾರೆ.