CHANNAGIRI POLICE STATION INCIDENT: ಯಾರೇ ತಪ್ಪು ಮಾಡಿದ್ದರೂ ಕಾನೂನು ಪ್ರಕಾರ ಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: “ಚನ್ನಗಿರಿ ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

ಚನ್ನಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದಾಗ, “ಕಾಂಗ್ರೆಸ್ ಪಕ್ಷ ಸಂವಿಧಾನದ ಆಶಯದಂತೆ ಎಲ್ಲ ಸಮುದಾಯಗಳನ್ನು ಸಮಾನವಾಗಿ ಕಾಣುತ್ತದೆ. ಚನ್ನಗಿರಿ ಪ್ರಕರಣದ ಬಗ್ಗೆ ಮುಖ್ಯಮಂತ್ರಿಗಳು ಪ್ರತ್ಯೇಕ ತನಿಖೆಗೆ ಆದೇಶ ನೀಡಿದ್ದಾರೆ. ತನಿಖೆ ನಡೆಯುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ. ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳುವಂತಿಲ್ಲ. ಈ ವಿಚಾರದಲ್ಲಿ ಸರ್ಕಾರ ನಿಲುವು ಅಚಲವಾಗಿದೆ. ಗೃಹಸಚಿವರು ಈಗಾಗಲೇ ನಿರ್ದೇಶನ ನೀಡಿದ್ದಾರೆ” ಎಂದರು.

ಪ್ರಜ್ವಲ್ ರೇವಣ್ಣ ದೇಶಬಿಟ್ಟು ಒಂದು ತಿಂಗಳು ಪೂರೈಸಿದ್ದು, ಎಸ್ಐಟಿ ತನಿಖೆ ಎಲ್ಲಿಯವರೆಗೆ ಬಂದಿದೆ ಎಂಬ ವಿಚಾರವಾಗಿ ಕೇಳಿದಾಗ, “ತನಿಖೆ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ದೇಶದ ಒಳಗಾಗದರೆ ರಾಜ್ಯ ಸರ್ಕಾರ ಏನುಬೇಕಾದರೂ ಕ್ರಮಕೈಗೊಳ್ಳಬಹುದು. ವಿದೇಶದ ವಿಚಾರಕ್ಕೆ ಬಂದಾಗ ಕೇಂದ್ರ ಸರ್ಕಾರ ಹೆಚ್ಚು ಕಾರ್ಯಪ್ರವೃತ್ತವಾಗಬೇಕು. ನಮ್ಮ ಗೃಹಸಚಿವರು ಈ ಪ್ರಕರಣ ತನಿಖೆಯನ್ನು ನಿಭಾಯಿಸುತ್ತಿದ್ದಾರೆ” ಎಂದರು.

ಪರಿಷತ್ ಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ದೆಹಲಿಗೆ ತೆರಳುತ್ತೀರಾ ಎಂದು ಕೇಳಿದಾಗ, “ಪಕ್ಷದ ಅಧ್ಯಕ್ಷನಾಗಿ ಹೋಗುವುದು ನನ್ನ ಕರ್ತವ್ಯ. ಹೀಗಾಗಿ ಹೋಗುತ್ತೇನೆ” ಎಂದರು.

ಇನ್ನು ಪ್ರಧಾನಮಂತ್ರಿಗಳು ವಾಸ್ತವ್ಯ ಹೂಡಿದ್ದ ಮೈಸೂರಿನ ಹೊಟೇಲ್ ಬಿಲ್ 85 ಲಕ್ಷ ಮೊತ್ತದ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಯಾಗಿರುವ ಬಗ್ಗೆ ಕೇಳಿದಾಗ, “ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಮಾಹಿತಿ ಪಡೆದ ನಂತರ ಪ್ರತಿಕ್ರಿಯೆ ನೀಡುತ್ತೇನೆ” ಎಂದರು.

ಕಾಂಗ್ರೆಸ್ ನಲ್ಲಿರುವವರು ತಲೆಹಿಡಿಯುವ ಕೆಲಸ ಮಾಡುತ್ತಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಅವರು ಏನು ಹೇಳಿದ್ದಾರೆ ಎಂಬ ವಿಚಾರವನ್ನು ನಾನು ತಿಳಿದುಕೊಂಡು ನಂತರ ಪ್ರತಿಕ್ರಿಯೆ ನೀಡುತ್ತೇನೆ” ಎಂದರು.

More News

You cannot copy content of this page