Complex Surgery For Three Different Diseases: ಮೂರು ವಿಭಿನ್ನ ಕಾಯಿಲೆಗೆ ಏಕಕಾಲದಲ್ಲೇ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ ಫೋರ್ಟಿಸ್‌ ವೈದ್ಯ ತಂಡ

ಬೆಂಗಳೂರು: ವಿಶ್ವದಲ್ಲೇ ಮೊದಲ ಬಾರಿಗೆ ಏಕಕಾಲದಲ್ಲೇ ಒಬ್ಬ ವ್ಯಕ್ತಿಗೆ ಮೂರು ವಿಭಿನ್ನ ಕಾಯಿಲೆಗಳಿಗೆ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಫೋರ್ಟಿಸ್‌ ಆಸ್ಪತ್ರೆ ವೈದ್ಯಕೀಯ ತಂಡ ಯಶಸ್ವಿಯಾಗಿ ನಡೆಸಿದೆ.
ಕನ್ನಿಂಗ್‌ಹ್ಯಾಮ್‌ರಸ್ತೆಯ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಹೃದ್ರೋಗ ಸಮಸ್ಯೆ, ಕರುಳಿನ ಕ್ಯಾನ್ಸರ್‌ ಹಾಗೂ ಪಿತ್ತಕೋಶದಲ್ಲಿ ಕಲ್ಲು ಹೊಂದಿದ್ದ 44 ವರ್ಷದ ವ್ಯಕ್ತಿಗೆ ಏಕಕಾಲದಲ್ಲೇ ಮೂರು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದು, ಇದು ವಿಶ್ವದಲ್ಲೇ ಮೊದಲ ಪ್ರಕರಣವಾಗಿದೆ.

ಫೋರ್ಟಿಸ್ ಆಸ್ಪತ್ರೆಯ ಹೃದಯತಜ್ಞ ಡಾ. ವಿವೇಕ್ ಜವಳಿ ಮತ್ತು ಮಿನಿಮಲ್ ಆಕ್ಸೆಸ್ ಮತ್ತು ಬಾರಿಯಾಟ್ರಿಕ್ ಸರ್ಜರಿ ನಿರ್ದೇಶಕ ಡಾ. ಜಿ. ಐ. ಗಣೇಶ್ ಶೆಣೈ ಅವರ ವೈದ್ಯರ ತಂಡ ಈ ಚಿಕಿತ್ಸೆಯನ್ನು ನೆರವೇರಿಸಿದೆ.

ಈ ಕುರಿತು ಮಾತನಾಡಿದ ಡಾ. ವಿವೇಕ್‌ ಜವಳಿ, 44 ವರ್ಷದ ಕೊಪ್ಪರಂ ಎಂಬ ವ್ಯಕ್ತಿಯು ಹೃದ್ರೋಗ ಸಮಸ್ಯೆಯನ್ನು ಹೊಂದಿದ್ದರು. ಇದಕ್ಕೆ ಚಿಕಿತ್ಸೆ ಪಡೆಯಲು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಇವರಿಗೆ ಕೊರೊನರಿ ಆರ್ಟರಿ ಬೈಪಾಸ್ ಸರ್ಜರಿ ಮಾಡುವ ಅವಶ್ಯಕತೆ ಇತ್ತು.
ರೋಗಿಯು ತಾವು ಮೊದಲಿನಿಂದಲೂ ಹೊಟ್ಟೆ ನೋವು ಅನುಭವಿಸುತ್ತಿರುವ ಬಗ್ಗೆಯೂ ನಮಗೆ ತಿಳಿಸಿದರು, ಇದಕ್ಕೆ ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಿದೆವು. ಈ ವೇಳೆ ಅವರಿಗೆ ಪಿತ್ತಕೋಶದಲ್ಲಿ ಕಲ್ಲು ಇರುವುದು ಕಂಡು ಬಂತು. ಹೀಗಾಗಿ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕರುಳಿನ ಕ್ಯಾನ್ಸರ್‌ ಇರುವುದು ಸಹ ಪತ್ತೆಯಾಯಿತು. ಕರುಳಿನ ಕ್ಯಾನ್ಸರ್‌ ಬಹುಪಾಲು ದೊಡ್ಡಮಟ್ಟದಲ್ಲಿಯೇ ಅವರಿಗೆ ಹಾನಿ ಮಾಡುತ್ತಿತ್ತು. ಹೀಗಾಗಿ ಅವರಿಗೆ ಹೃದಯ ಬೈಪಾಸ್‌ ಸರ್ಜರಿಯ ಜೊತೆಗೆ ಕರುಳಿನ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಯೂ ಹೆಚ್ಚು ಅನಿವಾರ್ಯವಾಗಿತ್ತು. ಆದರೆ, ಹೃದಯದ ಬೈಪಾಸ್‌ ಸರ್ಜರಿ ಬಳಿಕ ೩ ತಿಂಗಳು ಯಾವುದೇ ಚಿಕಿತ್ಸೆಗೆ ಒಳಪಡುವುದು ಹೆಚ್ಚು ಅಪಾಯಕಾರಿ. ಆದರೆ, ಮೂರು ತಿಂಗಳವರೆಗೂ ಕರುಳಿನ ಕ್ಯಾನ್ಸರ್‌ನನ್ನು ಹಾಗೇ ಬಿಡಲು ಸಹ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಈ ವ್ಯಕ್ತಿಗೆ ಏಕಕಾಲದಲ್ಲೇ ಹೃದಯದ ಬೈಪಾಸ್‌ ಸರ್ಜರಿ, ಕರುಳಿನ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ ಹಾಗೂ ಪಿತ್ತಕೋಶದಲ್ಲಿ ಕಲ್ಲು ತೆಗೆಯುವ ಶಸ್ತ್ರಚಿಕಿತ್ಸೆಯನ್ನು ನಡೆಸಲು ಅವರ ಕುಟುಂಬದವರ ಒಪ್ಪಿಗೆ ಪಡೆದುಕೊಂಡೆವು.

ಮೊದಲಿಗೆ ಆಫ್-ಪಂಪ್ ಕರೋನರಿ ಆರ್ಟರಿ ಬೈಪಾಸ್ (OPCAB)ನ ವಿಶೇಷ ಶಸ್ತ್ರಚಿಕಿತ್ಸಾ ತಂತ್ರದ ಮೂಲಕ ಕೊರೊನರಿ ಆರ್ಟರಿ ಬೈಪಾಸ್ ಸರ್ಜರಿಗೆ ನಡೆಸಿದೆವು. ಈ ಅವಧಿಯಲ್ಲೇ ಬಾರಿಯಾಟ್ರಿಕ್ ಸರ್ಜನ್‌ ಡಾ. ಜಿ. ಐ. ಗಣೇಶ್ ಶೆಣೈ ಅವರು, ಲ್ಯಾಪರೊಸ್ಕೋಪಿಕ್ ತಂತ್ರಜ್ಞಾನ ಬಳಸಿಕೊಂಡು, ಲ್ಯಾಪರೊಸ್ಕೋಪಿಕ್ ಎಕ್ಸ್ಟೆಂಡೆಡ್ ರೈಟ್ ಹೆಮಿಕೊಲೆಕ್ಟಮಿ (LERHC) ಅನ್ನು ಕ್ಯಾನ್ಸರ್‌ನ ಕರುಳಿನ ಭಾಗವನ್ನು ತೆಗೆದುಹಾಕಿದರು, ಜೊತೆಗೆ, ಪಿತ್ತಕೋಶದ ಕಲ್ಲುಗಳನ್ನು ಸಹ ಲ್ಯಾಪರೊಸ್ಕೋಪಿಕ್ ಕೊಲೆಸಿಸ್ಟೆಕ್ಟಮಿ (LC) ಮೂಲಕ ತೆಗೆದುಹಾಕುವಲ್ಲಿ ಯಶಸ್ವಿಯಾದರು. ಈ ಎಲ್ಲಾ ಶಸ್ತ್ರಚಿಕಿತ್ಸೆಗೆ 7 ಗಂಟೆಗಳಲ್ಲಿ ನಡೆಸಲಾಗಿಯಿತು. ರೋಗಿಯು ಶಸ್ತ್ರಚಿಕಿತ್ಸೆಯಾದ 15 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ವಿವರಿಸಿದರು.

More News

You cannot copy content of this page