ತುಮಕೂರು : ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಹುದ್ದೆ ಅಲಂಕರಿಸಿಕೊಂಡ ನಂತರ ತಮ್ಮ ಲೋಕಸಭಾ ಕ್ಷೇತ್ರ ತುಮಕೂರಿಗೆ ಆಗಮಿಸಿದ ಸಚಿವ ವಿ ಸೋಮಣ್ಣ, ಮೊದಲ ದಿವೇ ಡಿಸಿ,ಸಿಇಓ ವಿರುದ್ದ ಗರಂ ಆಗಿದ್ದರು.
ದೂರವಾಣಿ ಕರೆ ಮಾಡಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಕೇಂದ್ರ ಸಚಿವ ಸೋಮಣ್ಣ, ಸೂಕ್ತ ರೀತಿಯಲ್ಲಿ ತಮ್ಮ ಕೆಲಸ ಮಾಡಲು ಸೂಚಿಸಿದರು.
ತುಮಕೂರಿನ ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡವರು ಆಸ್ಪತ್ರೆ ದಾಖಲಾಗಿದ್ದರು. ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಸಚಿವರು ಭೇಟಿಯಾಗಿ ಪರಿಶೀಲನೆ ನಡೆಸಿದರಲ್ಲದೆ, ಅವರ ಯೋಗಕ್ಷೇಮ ವಿಚಾರಿಸಿದರು.
ಸಚಿವರ ಭೇಟಿ ವೇಳೆ ಆಸ್ಪತ್ರೆಗೆ ಡಿಸಿ ಶುಭಾ ಕಲ್ಯಾಣ್ ಮತ್ತು ಸಿಇಓ ಪ್ರಭು ಅವರು ಬಾರದೇ ಇರುವುದಕ್ಕೆ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.
ಕೊರಟಗೆರೆಯಲ್ಲಿ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಅವರ ಕಾರ್ಯಕ್ರಮದಲ್ಲಿ ಡಿಸಿ ಮತ್ತು ಸಿಇಓ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸಚಿವರ ಆಸ್ಪತ್ರೆ ಭೇಟಿ ಕಾರ್ಯಕ್ರಮಕ್ಕೆ ಅವರು ಗೈರಾಗಿದ್ದರು.
ಇದರಿಂದ ಕೋಪಗೊಂಡಿದ್ದ ಸೋಮಣ್ಣ ಅವರು, ಕೇಂದ್ರ ಸರ್ಕಾರಕ್ಕೂ ನಿಮಗೂ ಸಂಬಂಧವಿಲ್ಲವೇ..? ಫೋನ್ ಮಾಡಿ ಆಸ್ಪತ್ರೆಗೆ ಬರುತ್ತೇನೆ ಎಂದು ಹೇಳಿದ್ದೀರಿ ಆದರೆ, ನೀವು ಬಂದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಡಿಹೆಚ್ಓ, ಡಿಎಸ್ ಬಿಟ್ಟು ಯಾವೊಬ್ಬ ಅಧಿಕಾರಿಯೂ ಇಲ್ಲಿಗೆ ಬಂದಿಲ್ಲ ಎಂದು ಹರಿಹಾಯ್ದ ಸೋಮಣ್ಣ, ನಾನು ಸಚಿವನಲ್ಲವೇ..? ಕೊರಟಗೆರೆಯಲ್ಲಿ ಗಿಡ ನೆಡುವುದು ಮುಖ್ಯವೋ, ಇಲ್ಲಿ ಜನರ ಪ್ರಾಣ ಕಾಪಾಡುವುದು ಮುಖ್ಯವೋ ಎಂದು ಸೋಮಣ್ಣ ಪ್ರಶ್ನಿಸಿದರು.
ಜಿಲ್ಲಾ ಪಂಚಾಯತಿ ಸಿಇಓ ಜಿ.ಪ್ರಭು ಅವರಿಗೆ ಫೋನ್ ಮಾಡಿ ಸೋಮಣ್ಣ ಅವರು ಗರಂ ಆಗಿದ್ದರು. ಆಸ್ಪತ್ರೆಯಲ್ಲಿ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ, ನಿಮಗೆ ಗಿಡ ನಡೆವುದೇ ಮುಖ್ಯವಾಗಿದೆಯೇ ಎಂದರು. ಎಲ್ಲಿಂದ ಬಂದ್ದಿದ್ದೀಯಾ? ಹಿನ್ನೆಲೆ ಏನು ಎನ್ನುವುದು ಮರೆಯಬೇಡ ಎಂದು ಸೋಮಣ್ಣ ಅವಾಜ್ ಹಾಕಿದರು.