ಚಿಕ್ಕಮಗಳೂರು: ಇಲ್ಲಿನ ಬಾಳೆಹೊನ್ನೂರು ಸಮೀಪದ ಸಿಗೋಡುನಲ್ಲಿರೋ ನವೋದಯಾ ವಿದ್ಯಾಲಯದಲ್ಲಿ ಕೊರೊನಾ ಸ್ಫೋಟಗೊಂಡಿದೆ. ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ 70 ಜನರಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.
ಎರಡು ದಿನಗಳ ಹಿಂದೆ ಮೂವರು ವಿದ್ಯಾರ್ಥಿಗಳು, ನಾಲ್ವರು ಸಿಬ್ಬಂದಿಗಳಲ್ಲಿ ಕೊರೊನಾ ಇರುವುದು ದೃಢಪಟ್ಟಿತ್ತು, ನಂತರ ಶಾಲೆಯಲ್ಲಿದ್ದ 418 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳನ್ನು ಸ್ವ್ಯಾಬ್ ಪರೀಕ್ಷೆಯನ್ನು ಆರೋಗ್ಯ ಇಲಾಖೆ ನಡೆಸಿತ್ತು. ಇದರಿಂದ ಈ ಸೋಂಕು 40 ಜನರಿಗೆ ತಗುಲಿರುವುದು ಪತ್ತೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಜವಾಹರ್ ನವೋದಯ ವಿದ್ಯಾಲಯವನ್ನು ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ. ಕೊರೊನಾ ಸೋಂಕು ಪತ್ತೆಯಾದವರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ, ಎಲ್ಲರನ್ನೂ ವಸತಿ ಶಾಲೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆಯಲ್ಲಿ ಕೊರೊನಾ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಎಲ್ಲಾ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ, ಶಾಲೆಯನ್ನು ಸೈನಿಟೈಜ್ ಮಾಡಲಾಗಿದೆ.




