ಹಣಬಲದಿಂದ ಚುನಾವಣೆ ಗೆಲ್ಲಲು ಕಾಂಗ್ರೆಸ್ ಹುನ್ನಾರ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪ

ಬೆಂಗಳೂರು : ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಣ್ಣ ಬಯಲಾಗಿದೆ. ಜನ ಬಲ ಇಲ್ಲದಿರುವ ಕಾರಣ ಹಣದ ಮುಖಾಂತರವೇ ಚುನಾವಣೆ ಗೆಲ್ಲಬೇಕೆಂಬ ಹುನ್ನಾರ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಬೆಂಗಳೂರು ನಗರದ ಹೊರವಲಯದ ಅತ್ತಿಬೆಲೆ ಅತ್ತಿಬೆಲೆಯಲ್ಲಿ ಆಯೋಜಿಸಿದ್ದ ವಿಜಯ ಸಂಕಲ್ಪ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಣವಿರುವ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿ, ಹಣ ಖರ್ಚು ಮಾಡಿ, ಜೊತೆಗೆ ಪಕ್ಷಕ್ಕೂ ಪಡೆದು ಚುನಾವಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಯಾವುದೇ ಮಾರ್ಗ ಅನುಸರಿಸಿ ಚುನಾವಣೆ ಗೆಲ್ಲಲೇಬೇಕೆನ್ನುವ ಅವರ ಚಿಂತನೆ ಅತ್ಯಂತ ಕೀಳು ಮಟ್ಟದ್ದಾಗಿದ್ದು, ಕಾಂಗ್ರೆಸ್ ನ ನೈತಿಕತೆ ಕೆಳಮಟ್ಟಕ್ಕೆ ಇಳಿದಿರುವುದು ಬಹಳ ಸ್ಪಷ್ಟವಾಗಿದೆ, ಅನೈತಿಕವಾಗಿ ಹಣ ಖರ್ಚು ಮಾಡಿ ಗೆಲ್ಲಲು ಬಯಸಿರುವ ಕಾಂಗ್ರೆಸ್ ಪಕ್ಷಕ್ಕೆ ಜನರು ಸರಿಯಾದ ಜಾಗವನ್ನು ತೋರಿಸಬೇಕು ಎಂದು ಕರೆ ನೀಡಿದರು.


ಸಿದ್ದರಾಮಯ್ಯ ಅವರು ಬಿಜೆಪಿ ಯಾವಾಗಲೂ ಹಣಬಲ ಹಾಗೂ ತೋಳ್ಬಲದಿಂದ ಗೆಲ್ಲುತ್ತಾರೆಂದು ದೂರುತ್ತಾರೆ. ಆದರೆ ಈ ಕೆಲಸವನ್ನು ಮಾಡುತ್ತಿರುವುದು ಕಾಂಗ್ರೆಸ್ ಪಕ್ಷ . ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಚುನಾವಣೆವರೆಗೂ ಹಣ ಚೆಲ್ಲುತ್ತಿರುವ ನಿಮಗೆ ಯಾವ ನೈತಿಕತೆ ಇದೆ ? ತಾವು ಅಧಿಕಾರದಲ್ಲಿದ್ದಾಗ ಗ್ರಾಮ ಪಂಚಾಯತಿಗಳ ಕಡೆ ತಿರುಗಿ ನೋಡಲಿಲ್ಲ. 2017 ರ ಚುನಾವಣೆಗೆ 3 ತಿಂಗಳಲ್ಲಿ ಲಕ್ಷ ಮನೆಗಳನ್ನು ನೀಡುವುದಾಗಿ ಹೇಳಿದಿರಿ, ಆದರೆ ಅದು ಘೋಷಣೆಯಾಗಿಯೇ ಉಳಿಯಿತು ಎಂದು ಆರೋಪಿಸಿದರು.
ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸಂಕಲ್ಪ
ಬೆಂಗಳೂರಿನ ಸಮಗ್ರ ಅಭಿವೃದ್ಧಿ ಮಾಡುವ ಸಂಕಲ್ಪ ಸರ್ಕಾರ ಹೊಂದಿದೆ. ಬೆಂಗಳೂರಿಗೆ ಹೊಂದಿಕೊಂಡಿರುವ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಯಾದರೆ ಮಾತ್ರ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಕಲ್ಪನೆ ಮಾಡಿಕೊಳ್ಳಲು ಸಾಧ್ಯ. ಈ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಅಭಿವೃದ್ಧಿ ಸರ್ಕಾರದ ಗುರಿಯಾಗಿದೆ. ಬೆಂಗಳೂರಿಗೆ ಹೊಂದಿಕೊಂಡಿದ್ದರೂ ನಗರದ ವಾರ್ಡ್ ಗಳಲ್ಲಿ ಆಗುವ ಅಭಿವೃದ್ಧಿ ನಮ್ಮ ಗ್ರಾಮಗಳಲ್ಲಿ ಆಗುತ್ತದೆಯೇ ಎಂಬ ಚಿಂತೆ ಬೇಡ, ಆ ಚಿಂತೆ ದೂರ ಮಾಡಲು ನಾನಿಲ್ಲಿಗೆ ಬಂದಿದ್ದೇನೆ ಎಂದರು.


ಬೆಂಗಳೂರಿನಲ್ಲಿ ಆಗಿರುವ ಔದ್ಯೋಗೀಕರಣ, ಅದರ ಮುಖಾಂತರ ಬರುವ ತೆರಿಗೆ ಹಣ ಸಂಪೂರ್ಣವಾಗಿ ಗ್ರಾಮ ಪಂಚಾಯಿತಿಗಳಿಗೆ ವಿನಿಯೋಗ ಆಗಬೇಕು. ಗ್ರಾಮೀಣ ಜನರ ಪರವಾದ ನಿರ್ಧಾರಗಳು ಸರ್ಕಾರದ್ದಾಗಿರುತ್ತದೆ ಎಂದು ತಿಳಿಸಿದರು.

More News