ಬೆಂಗಳೂರು: ಅಬಕಾರಿ ಸುಂಕ ರಾಜ್ಯದ ಬೊಕ್ಕಸ ತುಂಬಿಸುವ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ಮದ್ಯದ ಬೆಲೆ ಏರಿಕೆಯಿಂದ ಇತ್ತೀಚೆಗೆ ಅಬಕಾರಿ ಆದಾಯದಲ್ಲಿ ಕೊತ ಸಂಭವಿಸುತ್ತಿದೆ. ಈ ಮಧ್ಯೆ ಹಬ್ಬ ಹರಿದಿನ ಸೇರಿ ವಿವಿಧ ಕಾರಣಗಳಿಗಾಗಿ ಆಯಾ ಜಿಲ್ಲೆಗಳಲ್ಲಿನ ಮದ್ಯ ಮಾರಾಟ ನಿಷೇಧದಿಂದ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 517 ಕೋಟಿ ರೂ. ಆದಾಯ ನಷ್ಟವಾಗಿದೆ.
ರಾಜ್ಯದ ಬೊಕ್ಕಸ ತುಂಬಿಸುವ ಪ್ರಮುಖ ಮೂಲಗಳ ಪೈಕಿ ಅಬಕಾರಿ ಸುಂಕವೂ ಒಂದು. ಪ್ರಸಕ್ತ 2024-25ರ ಬಜೆಟ್ ನಲ್ಲಿ 38,525 ಕೋಟಿ ರೂ. ಅಬಕಾರಿ ಆದಾಯ ಸಂಗ್ರಹದ ಗುರಿ ಇಡಲಾಗಿದೆ. ಆದರೆ ಆರಂಭದಲ್ಲೇ ನಿರೀಕ್ಷಿತ ಅಬಕಾರಿ ಆದಾಯ ಸಂಗ್ರಹ ಸಾಧ್ಯವಾಗುತ್ತಿಲ್ಲ. ಬಜೆಟ್ ಗುರಿಯಂತೆ ಎರಡು ತಿಂಗಳಲ್ಲಿ 6,420 ಕೋಟಿ ರೂ. ಅಬಕಾರಿ ಸುಂಕ ಸಂಗ್ರಹಿಸಬೇಕಾಗಿದೆ. ಆದರೆ, ಎರಡು ತಿಂಗಳಲ್ಲಿ 5,450 ಕೋಟಿ ರೂ. ಮಾತ್ರ ಸಂಗ್ರಹಿಸಲಾಗಿದೆ. ಬಜೆಟ್ ಗುರಿಗಿಂತ 970 ಕೋಟಿ ರೂ. ಕುಂಟಿತವಾಗಿದೆ.

2023-24 ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅಬಕಾರಿ ಮೂಲಕ 36,000 ಕೋಟಿ ಆದಾಯ ಸಂಗ್ರಹದ ಗುರಿ ನಿಗದಿ ಪಡಿಸಿದ್ದರು. ಆದರೆ, ಆರ್ಥಿಕ ವರ್ಷದಲ್ಲಿ ಕೇವಲ 34,629 ಕೋಟಿ ರೂ. ಅಬಕಾರಿ ಆದಾಯ ಸಂಗ್ರಹ ಮಾಡಲು ಸಾಧ್ಯವಾಯಿತು. ಬಜೆಟ್ ಗುರಿಗಿಂತ 1,371 ಕೋಟಿ ರೂ. ಸಂಗ್ರಹ ಕುಂಟಿತವಾಗಿತ್ತು. ಮದ್ಯ ದರ ಏರಿಕೆ ಹಿನ್ನೆಲೆ ಮದ್ಯ ಮಾರಾಟ ಪ್ರಮಾಣ ಕಡಿಮೆಯಾಗಿದ್ದು, ನಿರೀಕ್ಷಿತ ಆದಾಯ ಗುರಿ ಮುಟ್ಟಲು ಸಾಧ್ಯವಾಗಿಲ್ಲ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲ ಮದ್ಯದ ಆದಾಯ ಖೋತಾಗೆ ಹಬ್ಬ ಹರಿದಿನ, ವಿಶೇಷ ದಿನಗಳಂದು ಮದ್ಯ ಮಾರಾಟ ನಿಷೇಧಗಳಿಂದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗಿರುವುದಾಗಿ ಅಬಕಾರಿ ಇಲಾಖೆ ಮಾಹಿತಿ ನೀಡಿದೆ.
ಮದ್ಯ ಮಾರಾಟ ನಿಷೇಧದಿಂದ 517 ಕೋಟಿ ನಷ್ಟ:

ಹಬ್ಬ ಹರಿದಿನಗಳು, ವಿಶೇಷ ದಿನಗಳು ಸೇರಿ ನಾನಾ ಕಾರಣಗಳಿಗಾಗಿ ಆಯಾ ಜಿಲ್ಲೆಗಳಲ್ಲಿ ಮದ್ಯ ಮಾರಾಟ ನಿಷೇಧ ಆದೇಶಗಳಿಂದ ಸರ್ಕಾರದ ಬೊಕ್ಕಸಕ್ಕೆ 2023-24 ಸಾಲಿನಲ್ಲಿ 517.30 ಕೋಟಿ ರೂ. ನಷ್ಟ ಅನುಭವಿಸಿದೆ. ಮೊನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಅಬಕಾರಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಬಕಾರಿ ಆಯುಕ್ತರು ಈ ನಷ್ಟದ ಅಂಕಿಅಂಶವನ್ನು ಸಭೆಯ ಮುಂದಿಟ್ಟಿದ್ದಾರೆ.
2023-24 ಸಾಲಿನಲ್ಲಿ ಹಬ್ಬ ಹರಿದಿನ,ಜಾತ್ರೆ, ಚುನಾವಣೆ, ಮತ ಎಣಿಕೆ, ವಿಶೇಷ ದಿನಗಳು ಹೀಗೆ ವಿವಿಧ ಕಾರಣಗಳಿಂದ ಜಿಲ್ಲಾವಾರು ಮದ್ಯ ಮಾರಾಟ ನಿಷೇಧದಿಂದ 517.30 ಕೋಟಿ ರೂ. ಆದಾಯ ಖೋತವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮದ್ಯ ಮಾರಾಟ ನಿಷೇಧ ಆದೇಗಳಿಂದ ದೇಶೀಯ ಮದ್ಯ (IML)ದಲ್ಲಿ 444.52 ಕೋಟಿ ರೂ. ನಷ್ಟವಾಗಿದ್ದರೆ, ಬಿಯರ್ ನಲ್ಲಿ ಅಂದಾಜು 72.78 ಕೋಟಿ ರೂ. ಆದಾಯ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ವಿವಿಧ ಕಾರಣಗಳಿಗೆ ಮದ್ಯ ಮಾರಾಟ ನಿಷೇಧಿಸಿರುವುದರಿಂದ ದೇಶೀಸ ಮದ್ಯ (IML) ಮಾರಾಟದಲ್ಲಿ 11.25 ಲಕ್ಷ ಪೆಟ್ಟಿಗೆ ಕುಂಟಿತವಾಗಿದೆ. ಅದೇ ರೀತಿ 5.82 ಲಕ್ಷ ಪೆಟ್ಟಿಗೆ ಮಾರಾಟ ಕುಂಟಿತವಾಗಿದೆ. ಆ ಮೂಲಕ 2023-24 ಸಾಲಿನಲ್ಲಿ ಅಂದಾಜು 517.30 ಕೋಟಿ ರೂ. ಅಬಕಾರಿ ಆದಾಯ ನಷ್ಟವಾಗಿದೆ ಎಂದು ಅಂಕಿಅಂಶ ನೀಡಿದ್ದಾರೆ.
ವಿವಿಧೆಡೆ 603 ದಿನಗಳ ಕಾಲ ಮದ್ಯ ಮಾರಾಟ ನಿಷೇಧ:

2023-24 ಸಾಲಿನಲ್ಲಿ ಹಬ್ಬ ಹರಿದಿನ, ವಿಶೇಷ ದಿನ, ಚುನಾವಣೆ, ಮತ ಎಣಿಕೆ ಸೇರಿ ವಿವಿಧ ಕಾರಣಗಳಿಗೆ ರಾಜ್ಯದ ವಿವಿಧೆಡೆ ಒಟ್ಟು 603 ದಿನ ಮದ್ಯ ಮಾರಾಟವನ್ನು ನಿಷೇಧ ಮಾಡಲಾಗಿತ್ತು. ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ವಿವಿಧ ಕಾರಣಗಳಿಗೆ ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು.
ಇದರಲ್ಲಿ ಪ್ರಮುಖವಾಗಿ ಹಬ್ಬ ಹರಿದಿನಗಳಾದ ಗಣೇಶ ಚತುರ್ಥಿ, ಗಣೇಶ ವಿಸರ್ಜನೆ, ಹೋಳಿ ಹಬ್ಬ, ಮೊಹರಂ, ಈದ್ ಮಿಲಾದ್, ಬಕ್ರೀದ್, ದಸರಾ ಹಬ್ಬ, ಸೇಂಟ್ ಮೇರಿ ಚರ್ಚ್ ವಾರ್ಷಿಕ ಮಹೋತ್ಸವ, ಊರ ಜಾತ್ರೆಗಳು, ಧಾರ್ಮಿಕ ದಿನಗಳಂದು ಆಯಾ ಜಿಲ್ಲೆಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಅದರತೆ ವಿವಿಧ ಜಯಂತಿಗಳಾದ ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ, ಮಹರ್ಷಿ ವಾಲ್ಮೀಕಿ ಜಯಂತಿ, ಹನುಮ ಜಯಂತಿ, ದತ್ತ ಜಯಂತಿ ಪ್ರಯುಕ್ತ ಮದ್ಯ ಮಾರಾಟ ನಿಷೇಧಿಸಲಾಗಿತ್ತು.
ಇನ್ನು ಅದೇ ರೀತಿ ಪ್ರಧಾನಿ ಭೇಟಿ, ಕೇಂದ್ರ ಗೃಹ ಸಚಿವರ ಪ್ರವಾಸದ ಹಿನ್ನಲೆಯಲ್ಲೂ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಇನ್ನು ವಿಧಾನಸಭೆ ಚುನಾವಣೆ, ಶಿಕ್ಷಕರು, ಪದವೀಧರ ಕ್ಷೇತ್ರಗಳ ಚುನಾವಣೆ, ಮತ ಎಣಿಕೆ ದಿನಗಳಂದು ಮದ್ಯ ಮಾರಾಟವನ್ನು ರಾಜ್ಯಾದ್ಯಂತ ನಿಷೇಧ ಮಾಡಲಾಗಿದೆ. ಇದರಿಂದ ಅತಿ ಹೆಚ್ಚು ಆದಾಯ ಖೋತಾವಾಗಿದೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.
ಎಲ್ಲೆಲ್ಲಿ ಎಷ್ಟು ದಿನ ನಿಷೇಧ, ಎಷ್ಟು ಮದ್ಯ ಮಾರಾಟ ಖೋತಾ?:

ಬೆಂಗಳೂರು ನಗರ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗೆ ಅತಿ ಹೆಚ್ಚು 82 ದಿನ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ವಿಜಯನಗರ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗೆ 44 ದಿನಗಳ ಮದ್ಯ ಮಾರಾಟವನ್ನು ನಿಷೇಧ ಮಾಡಲಾಗಿತ್ತು. ಇನ್ನು ಗರಿಷ್ಠ ಪ್ರಮಾಣದಲ್ಲಿ ಚಾಮರಾಜ ನಗರ ಜಿಲ್ಲೆಯಲ್ಲಿ 29 ದಿನಗಳು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 26 ದಿನಗಳು, ಉತ್ತರ ಕನ್ನಡ ಜಿಲ್ಲೆಯಲ್ಲಿ 25, ಬೆಳಗಾವಿ ಜಿಲ್ಲೆ 25, ಕೊಪ್ಪಳ, ಯಾದಗಿರಿಯಲ್ಲಿ ತಲಾ 22 ದಿನಗಳು ಮದ್ಯ ಮಾರಾಟ ನಿಷೇಧಿಸಲಾಗಿತ್ತು.
ಬೆಂಗಳೂರು ನಗರ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧದಿಂದ ಅತಿ ಹೆಚ್ಚು 1.83 ಲಕ್ಷ IML ಪೆಟ್ಟಿಗೆ, ಬಿಯರ್ 1.44 ಲಕ್ಷ ಪೆಟ್ಟಿಗೆ ಮಾರಾಟ ಕುಸಿತವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧದಿಂದ ಒಟ್ಟು 1.02 ಲಕ್ಷ IML ಪೆಟ್ಟಿಗೆ, 48,462 ಬಿಯರ್ ಪೆಟ್ಟಿಗೆ ಮಾರಾಟ ಕುಂಠಿತವಾಗಿದೆ. ಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಮದ್ಯ ಮಾರಾಟ ನಿಷೇಧದಿಂದ 99,491 ಪೆಟ್ಟಿಗೆ IML ಹಾಗೂ 36,903 ಬಿಯರ್ ಮಾರಾಟ ಕುಂಠಿತವಾಗಿದೆ. ರಾಯಚೂರು 82,458 IML, ಬಿಯರ್ 35,368 ಅತಿ ಹೆಚ್ಚು ಮಾರಾಟವಾಗದೆ ನಷ್ಟವಾಗಿದೆ ಎಂದು ಅಬಕಾರಿ ಆಯುಕ್ತರು ಮಾಹಿತಿ ನೀಡಿದ್ದಾರೆ.
ಉಳಿದಂತೆ ಕ್ರಮವಾಗಿ ಧಾರವಾಡ, ಕೊಪ್ಪಳ, ಕಲಬುರ್ಗಿ, ಬಳ್ಳಾರಿ, ವಿಜಯನಗರ, ವಿಜಯಪುರ,ದಾವಣಗೆರೆ, ಹಾವೇರಿ ಜಿಲ್ಲೆಗಳಲ್ಲಿ ಮದ್ಯ ಮಾರಾಟ ಕುಸಿತ ಕಂಡಿದೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ