ಬೆಂಗಳೂರು: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ನನ್ನ ಮೇಲೆ ಅಸೂಯೆ. ಹಿಟ್ ಅಂಡ್ ರನ್ ಮಾಡೋದಷ್ಟೇ ಅವರ ಕೆಲಸ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು, ಸರ್ವಪಕ್ಷ ಸಭೆಗೆ ದ್ರಾಕ್ಷಿ ಗೋಡಂಬಿ ತಿನ್ನೋಕೆ ಬರಬೇಕಿತ್ತಾ ಎಂಬ ಎಚ್ ಡಿ ಕೆ ಆರೋಪ ವಿಚಾರವಾಗಿ ಮಾತನಾಡಿ, ಅವರೊಂತರ ಫಿಲ್ಮ್ ಸ್ಟೈಲ್ ನಲ್ಲಿ ಮಾತಾಡ್ತಾರೆ. ಗೋಡಂಬಿ ದ್ರಾಕ್ಷಿಗೆ ಕರಿತೀವಾ ಅವರನ್ನು? ಮತ್ಯಾಕೆ ಕಳಿಸಿದ್ರು ಅವರ ಪಾರ್ಟಿ ಅವರನ್ನು ಸರ್ವಪಕ್ಷಗಳ ಸಭೆಗೆ? ಅವರಿಗೆ ರಾಜಕಾರಣ ಬಿಟ್ರೆ ರಾಜ್ಯದ ಹಿತದ ಬಗ್ಗೆ,ಕಾವೇರಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ತಿರುಗೇಟು ನೀಡಿದರು.
ಬರೀ ಟೀಕೆ ಮಾಡೋದು ಆರೋಪ ಮಾಡುವುದು ಹಾಗೂ ಹಿಟ್ ಅಂಡ್ ರನ್ ಮಾಡೋದು ಅಷ್ಟೇ ಅವರ ಕೆಲಸವಾಗಿದೆ. ನನ್ನ ಮೇಲೆ ಅಸೂಯೆ ಅಷ್ಟೇ, ಮೊದಲಿನಿಂದಲೂ ನಡೆದುಕೊಂಡು ಬಂದಿದೆ ಅದು. ಅದಕ್ಕೆ ನಾನು ಅಸೆಂಬ್ಲಿಯಲ್ಲೋ ಎಲ್ಲೋ ಡಿಬೇಟ್ ಮಾಡೋಣ ಎಂದು ಕರೆದಿದ್ದೆ.
ಕಾಯ್ಕೊಂಡಿದ್ದೆ ನಾನು ಬಾರಿ ಸಿಗ್ತಾರೆ ಅಂತ ಸಿಗಲಿಲ್ಲ, ಹೋದ ಸಲ ಬರಲಿಲ್ಲ ಈ ಬಾರಿಯೂ ಸಿಗಲಿಲ್ಲ ಎಂದರು.
ಕಾವೇರಿ ನೀರಿನ ವಿಚಾರಕ್ಕೆ ಸಂಭಂದಪಟ್ಟಂತೆತಮಿಳುನಾಡಿನವರು ಸರ್ವಪಕ್ಷ ಸಭೆ ಕರೆದಿದ್ದಾರೆ. ಆದರೆ ಅದಕ್ಕೆ ನಮ್ಮದೇನು ಅಭ್ಯಂತರ ಇಲ್ಲ. ಕೋರ್ಟ್ ಆದೇಶಕ್ಕೆ ನಾವು ಮೇಲ್ಮನವಿ ಸಲ್ಲಿಸ್ತಿದ್ದೀವಿ. ನಿನ್ನೆಯಿಂದ ಒಳ್ಳೆಯ ಮಳೆ ಬರ್ತಿದೆ, ಒಳ ಹರಿವು ಹೆಚ್ಚಾಗಿದೆ. ಬಂದ ನೀರನ್ನೆಲ್ಲಾ ಬಿಳಿಗುಂಡ್ಲುಗೆ ಬಿಡೋಕೆ ವ್ಯವಸ್ಥೆ ಮಾಡಿದ್ದೀವಿ ಎಂದು ವಿವರಿಸಿದರು.
ಮಳೆಯೇ ನಮಗೆಲ್ಲಾ ಆಧಾರವಾಗಿದೆ. ಮಳೆಯಿಂದ ಎಲ್ಲಾ ಸಮಸ್ಯೆ ಬಗೆಹರಿಯುತ್ತೆ ಅಂದ್ಕೊಂಡಿದ್ದೀನಿ.ಮೇಕೆದಾಟುಗೆ ಅವಕಾಶ ಮಾಡಿಕೊಡಿ, ದಯವಿಟ್ಟು ತೊಂದ್ರೆ ಮಾಡಬೇಡಿ ಅಂತ ನಮ್ರತೆಯಿಂದ ಪ್ರಾರ್ಥನೆ ಮಾಡ್ತೀನಿ ಎಂದರು.
ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ವಿಚಾರವಾಗಿ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶದ ಹಿನ್ನೆಲೆಯಲ್ಲಿ ಭಾನುವಾರ ಸರ್ವಪಕ್ಷಗಳ ಸಭೆ ನಡೆದಿತ್ತು. ಸಭೆಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಗೈರಾಗಿದ್ದರು. ಇದು ಚರ್ಚೆಗೆ ಗ್ರಾಸವಾಗಿದೆ.