ASSEMBLY SESSION: ನೀಟ್ ರದ್ದು,ಒಂದು ರಾಷ್ಟ್ರ ಒಂದು ಚುನಾವಣೆ,ಕ್ಷೇತ್ರ ಪುನರ್‌ ವಿಂಗಡಣೆ ವಿರುದ್ಧ ಸದನದಲ್ಲಿ ನಿರ್ಣಯ ಅಂಗೀಕಾರ..!!

ಬೆಂಗಳೂರು : ಕ್ಷೇತ್ರ ಪುನರ್ವಿಂಗಡನೆ, ನೀಟ್ ಪರೀಕ್ಷೆ ರದ್ದು ಹಾಗೂ ಒಂದು ರಾಷ್ಟ್ರ ಒಂದು ಚುನಾವಣೆ ವಿರುದ್ಧ ವಿಧಾನಸಭೆಯಲ್ಲಿ ಮಹತ್ವದ ನಿರ್ಣಯವನ್ನು ಅಂಗೀಕಾರ ಮಾಡಲಾಯಿತು. ಕ್ಷೇತ್ರ ಪುನರ್ ವಿಂಗಡನೆ ಹಾಗೂ ಒಂದು ರಾಷ್ಟ್ರ ಒಂದು ಚುನಾವಣೆ ನಿರ್ಣಯವನ್ನು ಎಚ್ ಕೆ ಪಾಟೀಲ್ ಮಂಡಿಸಿದರು. ಇನ್ನು ನೀಟ್ ರದ್ದು ನಿರ್ಣಯವನ್ನು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಮಂಡಿಸಿದರು.

ಏನಿದು ಕ್ಷೇತ್ರ ವಿಂಗಡಣೆ ವಿಧೇಯಕ?

2026 ಹಾಗೂ ಅದರ ನಂತರ ನಡೆಸುವ ಹೊಸ ಜನಗಣತಿಯ ಅಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣಾ ಪ್ರಕ್ರಿಯೆಯನ್ನು ನಡೆಸಬಾರದು. ಬದಲಾಗಿ ಜನಸಂಖ್ಯೆಯನ್ನು ಆಧರಿಸಿ ಲೋಕಸಭಾ ಸ್ಥಾನಗಳನ್ನು ಹೆಚ್ಚಿಸುವ ಸಂದರ್ಭದಲ್ಲಿ ಪ್ರತೀ ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ಲೋಕಸಭಾ ಹಾಗೂ ವಿಧಾನಸಭೆ ಸ್ಥಾನಗಳ ಸಂಖ್ಯೆಯನ್ನು 1971 ರ ಜನಗಣತಿಯನ್ನು ಆಧರಿಸಿ ನಿರ್ಧಾರ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ನಿರ್ಣಯವನ್ನು ಮಂಡಿಸಿ ಅಂಗೀಕಾರ ಪಡೆಯಲಾಯಿತು.

ಒಂದು ರಾಷ್ಟ್ರ,ಒಂದು ಚುನಾವಣೆ ವಿರುದ್ಧ ನಿರ್ಣಯ

ಇನ್ನು ಇದೇ ಸಂದರ್ಭದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಪ್ರಸ್ತಾವದ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ ಮಾಡಲಾಯಿತು. ಒಂದು ರಾಷ್ಟ್ರ ಒಂದು ಚುನಾವಣೆ ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿಯಾಗಿದೆ.

ಇದು ರಾಜ್ಯಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ. ಭದ್ರತೆ ಖಚಿತ ಪಡಿಸುವುದು, ಚುನಾವಣಾ ಸಿಬ್ಬಂದಿ ನಿರ್ವಹಣೆ ಸೇರಿದಂತೆ ಹಲವು ಆಯಾಮದಲ್ಲಿ ಇದು ಗಂಡಾಂತರವಾಗಿದೆ. ಹಾಗಾಗಿ ಈ ನೀತಿಯನ್ನು ಜಾರಿಗೆ ತರಬಾರದು ಎಂದು ನಿರ್ಣಯ ಅಂಗೀಕಾರ ಮಾಡಲಾಯ್ತು.

ನೀಟ್ ರದ್ದು ಪರವಾಗಿ ನಿರ್ಣಯ ಅಂಗೀಕಾರ

ಇನ್ನು ದೇಶಾದ್ಯಂತ ಸದ್ದು ಮಾಡುತ್ತಿರುವ ನೀಟ್ ಹಗರಣದ ಹಿನ್ನೆಲೆಯಲ್ಲಿ ನೀಟ್ ಪರೀಕ್ಷೆ ರಾಜ್ಯದಲ್ಲಿ ರದ್ದು ಮಾಡಬೇಕು ಎಂದು ಕೋರಿ ನಿರ್ಣಯ ಮಂಡಿಸಲಾಯ್ತು. ನೀಟ್ ಪರೀಕ್ಷೆ ವ್ಯವಸ್ಥೆ ಗ್ರಾಮೀಣ ಭಾಗದ ಬಡ ಮಕ್ಕಳ ವೈದ್ಯಕೀಯ ಶಿಕ್ಷಣ ಅವಕಾಶಗಳ ಮೇಲೆ ತೀವ್ರ ಹಿನ್ನಡೆ ಆಗುತ್ತಿದೆ.

ನೀಟ್ ವ್ಯವಸ್ಥೆ ರಾಜ್ಯ ಸರ್ಕಾರದ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ರಾಜ್ಯ ಸರ್ಕಾರದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಹೀಗಾಗಿ ನೀಟ್ ಪರೀಕ್ಷಾ ವ್ಯವಸ್ಥೆಯನ್ನು ರದ್ದು ಮಾಡಬೇಕು ಎಂದು ನಿರ್ಣಯದಲ್ಲಿ ಆಗ್ರಹಿಸಲಾಗಿದೆ.

ನೀಟ್ ಪರೀಕ್ಷೆಯಿಂದ ಕರ್ನಾಟಕಕ್ಕೆ ವಿನಾಯಿತಿ ನೀಡಬೇಕು.ವಿದ್ಯಾರ್ಥಿಗಳಿಗೆ ಸಿಇಟಿ ಅಂಕ ಆಧರಿಸಿ ವೈದ್ಯಕೀಯ ಕಾಲೇಜು ಪ್ರವೇಶ ನೀಡಬೇಕು ಎಂದು ನಿರ್ಣಯದಲ್ಲಿ ಆಗ್ರಹಿಸಲಾಗಿದೆ.

More News

You cannot copy content of this page