ರಾಜಧಾನಿ ಬೆಂಗಳೂರಿನಲ್ಲಿ ಒತ್ತುವರಿ ತೆರವು ಬಾಕಿ ಇರುವ ಪ್ರಕರಣಗಳ ಪೈಕಿ ಸುಮಾರು 100 ಪ್ರಕರಣಗಳಲ್ಲಿ ರಾಜಕಾಲುವೆ ಪಥ ಬದಲಾವಣೆ ಆಗಿರುವುದು ಕಂಡು ಬಂದಿದ್ದು, ಈ ಬಗ್ಗೆ ಹೈಕೋರ್ಟ್ಗೆ ವರದಿ ಸಲ್ಲಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ಬಿಬಿಎಂಪಿ ಕೆರೆ ಮತ್ತು ರಾಜಕಾಲುವೆ ವಿಭಾಗದ ಅಧಿಕಾರಿಗಳೊಂದಿಗೆ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಸಭೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಆದೇಶದಂತೆ 16 ವಾರದಲ್ಲಿ ಹೊಸದಾಗಿ ನಗರದ 1,300 ಕಡೆ ರಾಜಕಾಲುವೆ ಮತ್ತು ಕೆರೆ ಒತ್ತುವರಿ ಪತ್ತೆ ಮಾಡಲಾಗಿದೆ. ಒಟ್ಟಾರೆ ನಗರದಲ್ಲಿ ಒಟ್ಟು 1,800 ಕಡೆ ಒತ್ತುವರಿ ತೆರವುಗೊಳಿಸುವುದು ಬಾಕಿ ಇದೆ. ಈ ಪೈಕಿ ಸುಮಾರು 170 ಕಡೆ ಒತ್ತುವರಿ ತೆರವುಗೊಳಿಸುವುದಕ್ಕೆ ಈಗಾಗಲೇ ಆದೇಶಿಸಲಾಗಿದೆ. ಇದರಲ್ಲಿ ಸುಮಾರು 100 ಪ್ರಕರಣಗಳಲ್ಲಿ ಕಳೆದ 20 ರಿಂದ 30 ವರ್ಷದ ಹಿಂದೆಯೇ ರಾಜಕಾಲುವೆ ಪಥ ಬದಲಾವಣೆ ಆಗಿರುವುದು ಕಂಡು ಬಂದಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು. ಉಳಿದ 70 ಪ್ರಕರಣಗಳು ಮಹದೇವಪುರದಲ್ಲಿ ಇದ್ದು, ತೆರವುಗೊಳಿಸುವುದಕ್ಕೆ ಆದೇಶಿಸಲಾಗಿದೆ ಎಂದು ವಿವರಿಸಿದರು.
ಒತ್ತುವರಿಗೆ ಸಂಬಂಧಿಸಿದ 200 ಪ್ರಕರಣ ಕೋರ್ಟ್ನಲ್ಲಿ ಇವೆ. ಉಳಿದ 1,500 ಪ್ರಕರಣಗಳ ಪೈಕಿ 889 ಒತ್ತವರಿ ಸರ್ವೆ ಬಾಕಿ ಇದೆ. ಉಳಿದಂತೆ 500 ರಿಂದ 600 ಪ್ರಕರಣಗಳ ತೆರವು ಆದೇಶ ಹೊರಡಿಸುವುದು ಬಾಕಿ ಇದೆ. ಆಗಸ್ಟ್ 5ರ ಒಳಗೆ ಸರ್ವೆ ಕಾರ್ಯ ಮುಕ್ತಾಯಗೊಳಿಸಿ ತಹಸೀಲ್ದಾರ್ ಅವರಿಗೆ ಸಲ್ಲಿಕೆ ಮಾಡಲಾಗುವುದು ಎಂದು ಸರ್ವೆ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ತಹಸೀಲ್ದಾರ್ ಕಡೆಯಿಂದ ಒಂದು ವಾರದಲ್ಲಿ ಇಬ್ಬರು ವಿಶೇಷ ಜಿಲ್ಲಾಧಿಕಾರಿಗೆ ಸಲ್ಲಿಕೆ ಆಗಲಿದೆ. ಆ ನಂತರ ಜಿಲ್ಲಾಧಿಕಾರಿಗಳು ತೆರವು ಆದೇಶ ಮಾಡಬೇಕಾಗಲಿದೆ. ಈವರೆಗೆ ಜಿಲ್ಲಾಧಿಕಾರಿಗಳು ಒಂದೇ ಒಂದು ತೆರವು ಆದೇಶ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಭೂಮಾಪನ, ಕಂದಾಯ ವ್ಯವಸ್ಥೆ ಹಾಗೂ ಭೂದಾಖಲೆಗಳ ಇಲಾಖೆಯ ಆಯುಕ್ತ ಜೆ.ಮಂಜುನಾಥ್, ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ವಿನೋತ್ ಪ್ರಿಯಾ, ಸ್ನೇಹಲ್, ರಮ್ಯಾ, ಕರೀಗೌಡ, ರಮೇಶ್, ಶಿವಾನಂದ್ ಕಪಾಶಿ, ಪ್ರಧಾನ ಅಭಿಯಂತರ ಪ್ರಹ್ಲಾದ್ ಉಪಸ್ಥಿತರಿದ್ದರು.
ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆ ಪೈಕಿ 159 ಕೆರೆ ಒತ್ತುವರಿಯಿದೆ ಎಂಬುದನ್ನು ಗುರುತಿಸಿದ್ದು, ಹೈಕೋರ್ಟ್ಗೆ ಸಲ್ಲಿಸಿರುವ ಕ್ರಿಯಾ ಯೋಜನೆಯ ಪ್ರಕಾರ ಕ್ರಮವಹಿಸಲು ತಹಸೀಲ್ದಾರರಿಗೆ ಪತ್ರಗಳನ್ನು ಬರೆಯಲಾಗಿದೆ. ಈ ಪೈಕಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರು 124 ಕೆರೆಗಳ ಸಮೀಕ್ಷೆ ಮಾಡಿ ಗಡಿ ಗುರುತಿಸಿರುವ ಕೆರೆಗಳಿಗೆ ಸಂಬಂಧಿಸಿದಂತೆ 82 ಕೆರೆಗಳ ನಕ್ಷೆ ನೀಡಲಾಗಿದೆ. ಒತ್ತುವರಿ ತೆರವು ಕುರಿತು ಹೈಕೋರ್ಟ್ ನಿರ್ದೇಶನದಂತೆ ಕ್ರಮವಹಿಸುವುದು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದೆಂದು ತುಷಾರ್ ಗಿರಿನಾಥ್ ಸೂಚನೆ ನೀಡಿದರು.