ಬೆಂಗಳೂರು: ಪ್ರತಿಪಕ್ಷಗಳ ಒಂದೊಂದೇ ಹಗರಣವನ್ನು ಬಿಚ್ಚಿಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದರು. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಕರೆದ ಅವರ ಪತ್ರಿಕಾಗೋಷ್ಠಿಯ ಕೊನೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಈ ಸವಾಲು ಹಾಕಿದರು.
ದೇಶ, ರಾಜ್ಯ, ಸಂವಿಧಾನಕ್ಕೆ ಸಮಸ್ಯೆ ಆದರೆ ನಾವು ಹೋರಾಟ, ಪಾದಯಾತ್ರೆ ಮಾಡುತ್ತೇವೆ. ಬಿಜೆಪಿ ರಾಜಕಾರಣಕ್ಕಾಗಿ ಪಾದಯಾತ್ರೆ ಮಾಡುತ್ತಾರೆ. ಪ್ರತಿದಿನ ಅವರ ಒದೊಂದು ಹಗರಣವನ್ನು ಬಿಚ್ಚಿಡುತ್ತೇವೆ ಎಂದರು.
ಸಿಎಂ ಸದನದಲ್ಲಿ ಏನು ಪ್ರಸ್ತಾವನೆ ಮಾಡಿದ್ದಾರೆ ಆ ಹಿನ್ನೆಲೆ ಒಂದೊಂದು ದಿನ ಒಂದೊಂದು ಹಗರಣ ಬಿಚ್ಚಿಡುತ್ತೇವೆ.ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಮಾಡಿ ಕೊಟ್ಟಿದ್ದೇವೆ. ಆದರೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದ ಬಗ್ಗೆ ಪ್ರತಿಪಕ್ಷಗಳು ಅಡ್ಡಿ ಪಡಿಸಿದ ಕಾರಣ ಲಿಖಿತ ಉತ್ತರವನ್ನು ಸಿಎಂ ಸದನದಲ್ಲಿ ಮಂಡಿಸಲಾಗಿದೆ ಎಂದು ಹೇಳಿದರು.

ಬಿಜೆಪಿಯ ಹಗರಣವನ್ನೂ ಮುಂದಿಟ್ಟುಕೊಂಡು ಅವರಿಗೆ ಉತ್ತರ ನೀಡಿದ್ದೇವೆ. ಈ ಹಗರಣಗಳಿಗೆ ಅವರು ಉತ್ತರ ಕೊಡಲಿ ಬಳಿಕ ಪಾದಯಾತ್ರೆ ಮಾಡಲಿ. ಯಡಿಯೂರಪ್ಪ ಭಾಗಿಯಾಗಿದ್ದಾರೋ, ಬೊಮ್ಮಾಯಿ ಭಾಗಿಯಾಗಿದ್ದಾರೋ ಎಂಬ ಬಗ್ಗೆ ಉತ್ತರ ನೀಡಲಿ ಎಂದು ಸವಾಲು ಹಾಕಿದರು.

ನಾವು ಇಂದಿಗೂ ಯಾವುದೇ ಸಮಯವಾಗಲಿ ಎಲ್ಲಿ ಕರೆದರೂ ಯಾವ ಮಾಧ್ಯಮಕ್ಕೂ, ಯಾವ ಸಾರ್ವಜನಿಕ ವೇದಿಕೆಯಲ್ಲೂ ಚರ್ಚೆಗೆ ಸಿದ್ಧ. ಎಚ್ ಡಿ ಕುಮಾರಸ್ವಾಮಿಯಾದರೂ ಬರಲಿ, ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ, ಆರ್.ಅಶೋಕ್ ಆದರೂ ಚರ್ಚೆಗೆ ಬರಲಿ. ನಾನು ಚರ್ಚೆಗೆ ಅವರ ಜೊತೆ ಕುಳಿತುಕೊಳ್ಳಲು ನಾನು ಸಿದ್ಧ ಎಂದು ಸವಾಲು ಹಾಕಿದರು.
ಇನ್ನು ಬೈರತಿ ಸುರೇಶ್ ಮಾತನಾಡಿ,
ಮುಡಾ ವಿಚಾರವಾಗಿ ಹೌಸ್ ನಲ್ಲಿ ಚರ್ಚೆಗೆ ಅವಕಾಶ ಕೋರಿದ್ದೆ. ಆದರೆ ಸ್ಪೀಕರ್ ಅವಕಾಶ ಕೊಟ್ಟಿಲ್ಲ. ಇಲ್ಲಾಂದ್ರೆ ವಿಪಕ್ಷಗಳ ಬಂಡವಾಳ ಬಿಚ್ಚಿಡುತ್ತಿದ್ದೆ ಎಂದರು.

ಜಿಟಿ ದೇವೇಗೌಡ, ಸಿ ಎನ್ ಮಂಜೇಗೌಡ, ಎಚ್ ವಿಶ್ವನಾಥ್, ಸಾರಾ ಮಹೇಶ್, ಎಚ್ ಡಿ ಕುಮಾರಸ್ವಾಮಿಗೂ ಕೂಡಾ ಬದಲಿ ನಿವೇಶನ ಕೊಡಲಾಗಿದೆ. ಇದನ್ನು ಏಕ ಸದಸ್ಯ ವಿಚಾರಣಾ ಆಯೋಗದ ತನಿಖೆಗೆ ನೀಡಿದ್ದೇವೆ. ತನಿಖೆಯಿಂದ ಎಲ್ಲವೂ ಹೊರ ಬರಲಿದೆ ಎಂದರು.