PHOTOSHOOT NEXT TO SPEAKER CHAIR: ಸ್ಪೀಕರ್‌ ಪೀಠದ ಬಳಿ ಫೋಟೋ ಶೂಟ್ : ಖಾದರ್‌ ಸಮರ್ಥನೆ,ಸಭಾಪತಿ ಹೊರಟ್ಟಿ ವಿರೋಧ…!

ಬೆಂಗಳೂರು: ವಿಧಾನಸಭೆ ಸ್ಪೀಕರ್‌ ಪೀಠದದಲ್ಲಿ ಮಂಗಳೂರು ಕಾಂಗ್ರೆಸ್‌ ನಾಯಕರ ಫೋಟೋ ಶೂಟ್‌ಗೆ ಸ್ಪೀಕರ್ ಯು.ಟಿ ಖಾದರ್ ಸಮರ್ಥನೆ ನೀಡಿದ್ದು, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪೀಠದ ಘನತೆ ಗೌರವಕ್ಕೆ ಇದು ತಕ್ಕುದಲ್ಲ ಎಂದಿದ್ದಾರೆ.

ವಿಧಾನಸಭೆಯಲ್ಲಿ ಮಂಗಳೂರಿನ ಇಬ್ಬರು ಕಾಂಗ್ರೆಸ್ ನಾಯಕರು ಸ್ಪೀಕರ್ ಯು.ಟಿ ಖಾದರ್ ಜೊತೆಗೆ ಪೀಠದಲ್ಲಿ ನಿಂತು ಫೋಟೋ ಶೂಟ್ ನಡೆಸಿದ್ದರು. ಇದನ್ನು ವಾಟ್ಸಪ್‌ ಗ್ರೂಪ್‌ಗಳಲ್ಲಿ ಹಂಚಿಕೊಂಡಿದ್ದರು. ಸ್ಪೀಕರ್‌ ಪೀಠದಲ್ಲಿ ನಡೆದ ಈ ಫೋಟೋ ಶೂಟ್‌ಗೆ ವ್ಯಾಪಕ ಆಕ್ಷೇಪಗಳು ವ್ಯಕ್ತವಾಗಿದ್ದವು.

ಈ ಹಿನ್ನೆಲೆಯಲ್ಲಿ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದ ವಿಧಾನಸಭೆ ಅಧ್ಯಕ್ಷರಾದ ಯು.ಟಿ ಖಾದರ್, ಅಧಿವೇಶನದ ಸಂದರ್ಭದಲ್ಲಿ ತೆಗೆದ ಫೋಟೋ ಅಲ್ಲ. ವಿಧಾನಸಭೆ ಸಭಾಂಗಣದಲ್ಲಿ ಅಧಿವೇಶನದ ಹಿನ್ನೆಲೆಯಲ್ಲಿ ಎರಡು ದಿನ ಮೊದಲು ಮೈಕ್ ಸಿಸ್ಟಮ್ ಪರಿಶೀಲನೆ ಮಾಡುವಾಗ ಮಂಗಳೂರಿನ ಮಾಜಿ ಮೇಯರ್ ಹಾಗೂ ಮತ್ತೊಬ್ಬರು ಪಕ್ಕದಲ್ಲಿ ನಿಂತು ಫೋಟೋ ತೆಗೆದಿದ್ದಾರೆ. ನನಗೆ ಇದರ ಮಾಹಿತಿ ಇಲ್ಲ ಎಂದರು.

ಹೀಗಿರುವಾಗ ಅದನ್ನು ಮುಂದಿಟ್ಟುಕೊಂಡು ದೊಡ್ಡ ವಿಚಾರ ಮಾಡುವುದು ಸರಿಯಲ್ಲ. ಈ ಘಟನೆಗೂ ಮೊದಲು ಬೇರೆಯವರು ಬಂದು ಫೋಟೋ ತೆಗೆದಿದ್ದಾರೆ. ವಿದೇಶಿ ಪ್ರತಿನಿಧಿಗಳು ಬಂದೂ ಫೋಟೋ ತೆಗೆದಿದ್ದಾರೆ ಎಂದರು. ಅವರು ರಾಜ್ಯದ ಅತಿಥಿಗಳಲ್ಲವೇ ಎಂಬ ಪ್ರಶ್ನೆಗೆ, ಅವರು ಸ್ಟೇಟ್ ಗೆಸ್ಟ್ ಆದರೆ ನಮ್ಮೂರಿನವರೂ ಬಂದರೂ ಸ್ವೇಟ್ ಗೆಸ್ಟ್ ಮಾಡಿ ಕರೆದುಕೊಂಡು ಬರ್ತೇನೆ ಎಂದು ಸಮರ್ಥಸಿಕೊಂಡರು.

ಹೊರಟ್ಟಿ ವಿರೋಧ

ಇನ್ನು ಇದೇ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸ್ಪೀಕರ್ ಪೀಠಕ್ಕೆ ಅದರದ್ದೇ ಆದ ಘನತೆ ಗೌರವ ಇರುತ್ತದೆ. ಪೀಠದ ಮುಂದೆ ನಿಂತು ಫೋಟೋ ತೆಗೆಯಬಹುದು. ಆದರೆ ಪೀಠದಲ್ಲಿ ಇರುವಾಗ ಫೋಟೋ ಶೂಟ್ ಸರಿಯಲ್ಲ. ಅಧಿವೇಶನ ನಡೆಯುತ್ತಿರುವ ಮುನ್ನವಾದರೂ ಪೀಠದಲ್ಲಿ ಇದ್ದು ಫೋಟೋ ಶೂಟ್ ಮಾಡುವುದು ಸರಿಯಲ್ಲ ಎಂದರು.

ವರದಿ ಪ್ರಕಟ ಮಾಡಿದ್ದ ವಿಕ ವೆಬ್

ಇನ್ನು ಸ್ಪೀಕರ್‌ ಪೀಠದಲ್ಲಿ ನಡೆದ ಫೋಟೋ ಶೂಟ್ ಬಗ್ಗೆ ವಿಜಯ ಕರ್ನಾಟಕ ವೆಬ್ ವರದಿ ಪ್ರಕಟ ಮಾಡಿತ್ತು. ಬಳಿಕ ಸದನದಲ್ಲೂ ಈ ಫೋಟೋವನ್ನು ಬಿಜೆಪಿ ಸದಸ್ಯರು ಪ್ರದರ್ಶನ ಮಾಡಿದ್ದರು. ಸ್ಪೀಕರ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

More News

You cannot copy content of this page