500 ರೂ. ನೋಟುಗಳನ್ನು ತಟ್ಟೆಗೆ ಹಾಕಿ, ಫೋಟೋ ತೆಗಿಬೇಡಿ ಚುನಾವಣೆ ಇದೇರಿ ಅಂತಾ ಹೇಳಿದ ಸಿಎಂ

ಬೀದರ್ : ಬಸವಣ್ಣನವರ ಕರ್ಮಭೂಮಿ ಬೀದರ್ ನಲ್ಲಿ ಮುಖ್ಯಮಂತ್ರಿ ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನಲ್ಲಿ ನಡೆದಿದೆ.
ಸಾಲು ಸಾಲಾಗಿ ನಿಂತಿದ್ದ ಮಹಿಳೆಯರ ಆರತಿ ತಟ್ಟೆಗೆ ಐನೂರು ರೂಪಾಯಿ ಮುಖಬೆಲೆಯ ನೋಟುಗಳನ್ನು ಹಾಕಿ ಚುನಾವಣಾ ನೀತಿ ಸಂಹಿತೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಲ್ಲಂಘನೆ ಮಾಡಿದ್ದಾರೆ. ಇದರೊಂದಿಗೆ ಸಚಿವ ಪ್ರಭು ಚೌಹಾಣ್ ತಮ್ಮ ಜೇಬಿನಿಂದಲೂ ಹಣ ತೆಗೆದು ತಟ್ಟೆಗೆ ಹಣ ಹಾಕುವಂತೆ ನೀಡುತ್ತಿದ್ದ ದೃಶ್ಯ ಈಗ ವೈರಲ್ ಆಗಿದೆ.
ಭಾಲ್ಕಿಗೆ ಆಗಮಿಸಿದ್ದ ನಾಡ ದೊರೆಯನ್ನು ಸ್ವಾಗತಿಸಲು ಆರತಿ ತಟ್ಟೆ ಹಿಡಿದು ಮಹಿಳೆಯರು ಸಾಲಾಗಿ ನಿಂತಿದ್ದರು, 6 ಆರತಿ ತಟ್ಟೆಗೆ ತಲಾ 500 ರೂಪಾಯಿಯಂತೆ. 3,000 ರೂಪಾಯಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಾಕಿದ್ದರು.
ತಟ್ಟೆಯಲ್ಲಿ ಹಣ ಹಾಕುವಾಗ ಇದೆಲ್ಲಾ ಫೋಟೋ ತೆಗಿಬೇಡಿ. ಚುನಾವಣೆ ಇದೆ ಎಂದಿದ್ದರು. ಚುನಾವಣಾ ನೀತಿ ಸಂಹಿತೆ ಸ್ಪಷ್ಟವಾಗಿ ಉಲ್ಲಂಘನೆಯಾಗುತ್ತದೆ ಎಂದು ತಿಳಿದಿದ್ದರೂ ಮುಖ್ಯಮಂತ್ರಿ ಅವರು ಆರತಿ ತಟ್ಟೆಗೆ ಹಣ ಹಾಕಿದ್ದಾರೆ.

ಇದು ಸ್ಪಷ್ಟ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ದೂರಿದ್ದಾರೆ. ಆದರೆ, ಜಿಲ್ಲಾ ಚುನಾವಣಾಧಿಕಾರಿ ಅವರಿಗೆ ಯಾರೂ ದೂರು ನೀಡಿಲ್ಲ.
ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿದ್ದರು. ಇವರೊಂದಿಗೆ ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್‌ ಉಪಸ್ಥಿತರಿದ್ದರು.

More News