ಕೇಂದ್ರ ಸಚಿವ ಭಗವಂತ ಖೂಬಾ ಗುಪ್ತ ಸಭೆ: ಸಭೆಯಲ್ಲಿ ಕೇಂದ್ರ ಬಿಂದುವಾದ ಜೆಡಿಎಸ್ ನಾಯಕ

ಬೀದರ್ : ಪರಿಷತ್ ಚುನಾವಣೆಯಲ್ಲಿ ಸತಾಯ ಗತಾಯ ಜಯಗಳಿಸಬೇಕು ಎನ್ನುವ ಉದ್ದೇಶದಿಂದ ಆಡಳಿತರೂಢ ಬಿಜೆಪಿ ನಾನಾ ಕಸರತ್ತು ಮಾಡುತ್ತಿದೆ. ಒಂದೆಡೆ ಸ್ವಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಡಳಿತದ ಕೇಂದ್ರ ಸ್ಥಾನ ಬಿಟ್ಟು ಜಿಲ್ಲೆಗಳಲ್ಲಿಯೇ ತಂಗಿದ್ದು, ಕೇವಲ ಚುನಾವಣಾ ಪ್ರಚಾರಕ್ಕೆ ಸೀಮಿತರಾಗಿದ್ದಾರೆ.
ಇನ್ನೊಂದೆಡೆ ಎಲ್ಲೆಲ್ಲಿ ಚುನಾವಣೆ ಇದೆಯೋ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ಬ್ಯುಸಿಯಾಗಿದ್ದಾರೆ. ಯಾವುದೇ ಸಚಿವರು ವಿಧಾನಸೌಧದ ಸುತ್ತ ಸುಳಿಯದೇ ಅನೇಕರು ಕಾಣೆಯಾಗಿದ್ದಾರೆ. ಇದರ ನಡುವೆಯೇ ಮುಖ್ಯಮಂತ್ರಿ ಬೀದರ್ ನಿಂದ ವಾಪಾಸ್ಸಾದ ಕೂಡಲೇ ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಚುನಾವಣಾ ರಣತಂತ್ರಕ್ಕಾಗಿ ಸಭೆ ನಡೆಸಿದರು.
ಎದುರಾಳಿ ಪಕ್ಷದ ಅಭ್ಯರ್ಥಿಯನ್ನು ಹೇಗಾದರೂ ಮಾಡಿ ಸೋಲಿಸಲೇಬೇಕೆಂಬ ಪಣತೊಟ್ಟಿರುವ ಕೇಂದ್ರ ಸಚಿವ, ಗುಪ್ತ ರಣತಂತ್ರ ಹಣೆದರು. ಅದಕ್ಕಾಗಿ ಜೆಡಿಎಸ್ ನಾಯಕರ ಮನೆಯಲ್ಲಿ ಸಭೆ ನಡೆಸಿದರು. ಹಾಗೂ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಿದರು.


ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಪ್ತ ಬಂಡೆಪ್ಪ ಖಾಶೆಂಪೂರ್ ಅವರ ಮನೆಯಲ್ಲಿ ರಣತಂತ್ರದ ಕುರಿತು ಚರ್ಚೆ ನಡೆಯಿತು. ಬಂಡೆಪ್ಪ ಖಾಶೆಂಪೂರ್ ಅವರ ಸಹಾಯದಿಂದ ಚುನಾವಣೆಯನ್ನು ಗೆಲ್ಲಬಹುದು ಎಂಬ ರಣತಂತ್ರಕ್ಕೆ ಮೊರೆಹೋಗಿದ್ದಾರೆ.
ಸಭೆಯ ವಿವರವನ್ನು ಬಹಿರಂಗಪಡಿಸಲು ಇಚ್ಚಿಸದ ಉಭಯ ನಾಯಕರು, ಬಂಡೆಪ್ಪ ಖಾಶೆಂಪೂರ್ ಅವರು ಬಿಜೆಪಿ ಬೆಂಬಲ ನೀಡುತ್ತಾರಾ ಅಥವಾ ಕಾಂಗ್ರೆಸ್ಸಿಗೆ ನೀಡುತ್ತಾರಾ ಎನ್ನುವುದು ಮಾತ್ರ ನಿಗೂಢವಾಗಿದೆ. ಬೀದರ್ ನಲ್ಲಿ ಜೆಡಿಎಸ್ ಅಭ್ಯರ್ಥಿ ಇಲ್ಲದ ಕಾರಣ ಅಲ್ಲಿನ ನಾಯಕರು ಯಾವ ಅಭ್ಯರ್ಥಿ ಪರ ಒಲವು ತೋರುತ್ತಾರೋ ಅವರು ಚುನಾವಣೆಯಲ್ಲಿ ಜಯಭೇರಿ ಸಾಧಿಸಲಿದ್ದಾರೆ.

More News