ಸುಳ್ಳು ಸ್ಲೋಗನ್‌ʼಗಳ ಸೃಷ್ಟಿಕರ್ತನ ನಾಟಕದ ಪರದೆ ಜಾರಿಬಿದ್ದಿದೆ : ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ಜೆಡಿಎಸ್ ಮುಖಂಡ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಬೇರೆ ಯಾವುದೇ ಪಕ್ಷ ಅಥವಾ ನಾಯಕರ ಬಗ್ಗೆ ಇಲ್ಲದ ಕೋಪ, ಸಿಟ್ಟು ಮಾಜಿಮಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ತೋರಿಸುತ್ತಿದ್ದಾರೆ. ಹಾಗೆಯೇ ಸಿದ್ದರಾಮಯ್ಯ ಅವರೂ ಕೂಡ ಜೆಡಿಎಸ್ ವಿರುದ್ಧ ಟೀಕೆಗಳನ್ನುಮಾಡುತ್ತಿದ್ದಾರೆ. ಇದು ಇಬ್ಬರೂ ನಾಯಕರ ನಡುವಿನ ಗುದ್ದಾಟ ಎಂದೇ ಬಿಂಬಿಸಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಸರಣಿ ಟ್ವೀಟ್ ಮಾಡುವುದರ ಮೂಲಕ ಸಿದ್ದರಾಮಯ್ಯ ಅವರ ಹೆಸರನ್ನು ಉಲ್ಲೇಖಿಸಿದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಳ್ಳು ಸ್ಲೋಗನ್‌ಗಳ ಸೃಷ್ಟಿಕರ್ತ, ಟರ್ಮಿನೇಟರ್‌, ಸಿದ್ದಕಲೆಯ ನಿಪುಣಾಗ್ರೇಸರು ಈಗ ʼJDFʼ ಎಂಬ ಹೊಸ ಜಪ ಮಾಡಿಕೊಂಡು ತಮ್ಮ ಜಾತ್ಯತೀತ ತತ್ವಾದರ್ಶಗಳಿಗೆ ಮಂಡ್ಯದಲ್ಲಿ ಎಳ್ಳುನೀರು ಬಿಟ್ಟಿದ್ದಾರೆ. ಸಹಕಾರ ಸಚಿವರ ಸಹಾಯಕನನ್ನು ಗೆಲ್ಲಿಸಿಕೊಳ್ಳಲು ʼಜಾತಿ ಸಹಕಾರʼಕ್ಕೆ ಮೊರೆ ಹೋಗಿದ್ದಾರೆ!! ಅಯ್ಯೋ, ಎಂಥಾ ದುರ್ವೈಧಿ ಎಂದು ಟೀಕಿಸಿದ್ದಾರೆ.


ಮತ ಫಸಲಿಗಾಗಿ ಜಾತಿ ರಾಜಕೀಯ ಮಾಡುತ್ತಿರುವ ನಕಲಿ ಜಾತ್ಯತೀತ ಶೂರನ ಅಸಲಿ ರೂಪ ಕಳಚಿದೆ. ಸಮುದಾಯದ ಅಧ್ಯಕ್ಷರೊಬ್ಬರು, ನೀವು ಮತ ಹಾಕುವುದು ಕಾಂಗ್ರೆಸ್‌ ಪಕ್ಷಕ್ಕಲ್ಲ, ನಮ್ಮ ಸಮುದಾಯದ ಸಿದ್ದಕಲಾ ಕೋವಿದ ಎಂದು ಮನೆಮನೆಗೂ ಹೋಗಿ ಪ್ರಚಾರ ಮಾಡುತ್ತಿರುವುದು ಮಂಡ್ಯದಲ್ಲಿ ಮಜಭೂತಾಗಿ ನಡೆಯುತ್ತಿದೆ. ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬಂತಾಗಿದೆ ಎಂದು ಹೇಳಿದ್ದಾರೆ.
ಅವರಿಗೆ ಜೆಡಿಎಸ್‌ ಫೋಬಿಯಾ ಕಾಡುತ್ತಿದೆ. ಚುನಾವಣೆ ಬಂದರೆ ಜೆಡಿಎಸ್‌ ಚಳಿ-ಜ್ವರ ಹತ್ತುತ್ತದೆ. ಈ ಜ್ವರ ಬಿಡಿಸಿಕೊಳ್ಳಲು ಸಿದ್ದಸೂತ್ರದಾರ ಬಳಸುವ ಹೊಸ ಔಷಧವೇ ʼJDFʼ. ಅವರನ್ನು ಉಳಿಸುವ ಟಾನಿಕ್‌ʼನ ಹೆಸರೇ ಜೆಡಿಎಸ್‌ ಕುಟುಂಬ ರಾಜಕಾರಣ. ಹಾಗಾದರೆ, ಅವರದ್ದು #SCF (#ಸಿದ್ದಸೂತ್ರದಾರಕಾಂಗ್ರೆಸ್‌ಫ್ಯಾಮಿಲಿ ) ಅಲ್ಲವೆ? ಎಂದು ಪ್ರಶ್ನಿಸಿದ್ದಾರೆ.


ಜೆಡಿಎಸ್‌, ಬಿಜೆಪಿ ಬಿ ಟೀಂ ಎಂದು ಭಜನೆ ಮಾಡುವವರು, ಸಹಕಾರ ಸಚಿವರ ಸಹಾಯಕನನ್ನು ಅಭ್ಯರ್ಥಿ ಮಾಡಿದ್ದು ಯಾರಿಗೆ ಸಹಕಾರ ನೀಡಲಿಕ್ಕೆ? ಜಾತ್ಯತೀತತೆಯ ಮುಖವಾಡ ಹಾಕಿಕೊಂಡು ಬಿಜೆಪಿಯನ್ನು ಬೈಯ್ಯುವವರು ಅದೇ ಪಕ್ಷದ ಸಚಿವರ ಪಿಎಗೆ ಟಿಕೆಟ್‌ ಕೊಟ್ಟಿದ್ದರ ಒಳಲೆಕ್ಕ ಏನು? ಇದು ಯಾರ ಲೆಕ್ಕ ಚುಕ್ತಾ ಮಾಡಲಿಕ್ಕೆ? ಇದೆಂಥಾ ಒಳ ಒಪ್ಪಂದ? ಎಂದಿದ್ದಾರೆ.
ಜಾತ್ಯತೀತತೆಯ ಜಗಜಟ್ಟಿ ಮೈಸೂರಿನಲ್ಲಿ ಮಾಡಿದ ಜಾತಿ ರಾಜಕಾರಣ ಗೊತ್ತಿದೆ. ʼಸಂದೇಶ ಸನ್ನಿಧಿʼಯಲ್ಲಿ ಕೂತು ಕಾಂಗ್ರೆಸ್‌ ಮತದಾರರ 2ನೇ ಪ್ರಾಶಸ್ತ್ಯದ ಮತಗಳು ಬಿಜೆಪಿಗೇ ಹೋಗಬೇಕು, ಜೆಡಿಎಸ್‌ʼಗಲ್ಲ ಎಂದು ಫರ್ಮಾನು ಹೊರಡಿಸಿದ ʼಚಾಮುಂಡೇಶ್ವರಿ ಕ್ಷೇತ್ರ ತಿರಸ್ಕೃತʼ ಸುಳ್ಳು ಸ್ಲೋಗನ್‌ʼಗಳ ಸೃಷ್ಟಿಕರ್ತನ ನಾಟಕದ ಪರದೆ ಜಾರಿಬಿದ್ದಿದೆ ಎಂದು ಸ್ಪಷ್ಟಪಡಿಸಿದ್ದಾರೆ.


ರಾಜಕೀಯ ಆರಂಭಿಸಿದ ಮಾತೃ ಪಕ್ಷವನ್ನೇ ಕ್ರೂರವಾಗಿ ಮುಳುಗಿಸಲು ಹೊರಟ ಆ ನಾಯಕರು, ಕೈ ಹಿಡಿದ ಸ್ವಪಕ್ಷವನ್ನೂ ಸ್ವಾಹಾ ಮಾಡುತ್ತಿದ್ದಾರೆ. ʼವಿನಾಶಕಾಲೇ ವಿಪರೀತ ಸುಳ್ಳು!ʼ. ಆ ಸುಳ್ಳುಗಳೇ ಅವರನ್ನು ಸುಡುತ್ತವೆ. ಆಟ ಈಗ ಆರಂಭ ಎಂದು ಸವಾಲು ಹಾಕಿದ್ದಾರೆ.

More News