ಬಿಜೆಪಿ ಅನ್ಯ ಪಕ್ಷದ ಬೆಂಬಲ ಕೋರಿ ದುರ್ಬಲ ಪಕ್ಷವಾಗಿದೆ ಎನ್ನುವುದಕ್ಕೆ ಸಾಕ್ಷಿ: ಡಿ ಕೆ ಶಿವಕುಮಾರ್

ಬೆಂಗಳೂರು : ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅನ್ಯಪಕ್ಷಗಳ ಬೆಂಬಲ ಕೋರಿರುವುದು ಆ ಪಕ್ಷ ದುರ್ಬಲವಾಗಿದೆ ಎನ್ನುವುದು ಸಾಭೀತಾದಂತಾಗಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಕಾಂಗ್ರೆಸ್ ಅನ್ನ ವಿಪಕ್ಷದಲ್ಲೇ ಇಡುತ್ತೇವೆ ಎಂದು ಹೇಳಿದರು, ಅರುಣ್ ಸಿಂಗ್ ಕೂಡ ಜೆಡಿಎಸ್ ಬಗ್ಗೆ ಮಾತನಾಡಿದ್ರು, ಆದ್ರೆ ಬಿಜೆಪಿಗೆ ಜೆಡಿಎಸ್ ಬೆಂಬಲಬೇಕು ಎನ್ನುತ್ತಿದ್ದಾರೆ. ಇದರಿಂದ ಆ ಪಕ್ಷ ದುರ್ಬಲವಾಗಿದೆ ಅನ್ನೋದನ್ನ ಅವರೇ ಒಪ್ಪಿಕೊಂಡಂತಾಗಿದೆ ಎಂದು ತಿಳಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು, ಎರಡು ಸೀಟ್ ಇರುವಲ್ಲಿ ಒಬ್ಬರಿಗೆ ಒಂದು ಮತ ನೀಡಿ, ಮಿಕ್ಕಿದ್ದು ಅವರವರ ವಿವೇಚನೆಗೆ ಬಿಟ್ಟಿದ್ದು ಎಂದುಹೇಳಿದ್ದಾರೆ. ಈ ಹೇಳಿಕೆಗಳನ್ನು ಗಮನಿಸಿದರೆ ಎಲ್ಲಾ ಮುಖಂಡರು ಬಿಜೆಪಿ ಗೊಂದಲದಲ್ಲಿದ್ದಾರೆ ಎಂದು ಆರೋಪಿಸಿದರು.
ಗುಪ್ತ ಮತದಾನದ ಲಾಭ ಪಡೆಯಬೇಕು
ಸ್ಥಳೀಯ ಸಂಸ್ಥೆಗಳಿಗೆ ಸಾಕಷ್ಟು ಅನುಕೂಲ ಕಲ್ಪಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ, ಹಾಗೆಯೇ ಎಲ್ಲಾ ಅನ್ಯ ಪಕ್ಷಗಳ ಸದಸ್ಯರು ಗುಪ್ತ ಮತದಾನದ ಲಾಭ ಪಡೆದು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದು ಇದೇ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್ ಮನವಿ ಮಾಡಿದರು.
ಜೆಡಿಎಸ್ ಆರು ಕಡೆ ಅಭ್ಯರ್ಥಿಗಳನ್ನು ಹಾಕಿದೆ, ಅವರಿಗೆ ಅವರದೇ ಆದ ಮತದಾರರು ಇದ್ದಾರೆ, ಈ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಜೆಡಿಎಸ್ ಹೋರಾಟ ನಡೆಸುತ್ತಿದೆ ಎಂದು ವ್ಯಂಗ್ಯವಾಡಿದರು.
ದೇಶದಲ್ಲಿ ಇಲ್ಲದ ಕಾನೂನು ನಮ್ಮರಾಜ್ಯದಲ್ಲಿವೆ
ರಾಜ್ಯದಲ್ಲಿ ಮೊತ್ತ ಮೊದಲ ಒಮಿಕ್ರಾನ್ ಪ್ರಕರಣ ರಾಜ್ಯದಲ್ಲಿ ಪತ್ತೆಯಾಗಿತ್ತು ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ಅಂತಹ ವಿಷಮ ಸ್ಥಿತಿ ರಾಜ್ಯದಲ್ಲಿ ಇಲ್ಲ ಎಂದು ಹೇಳಿಕೆ ನೀಡಿದ ಡಿ ಕೆ ಶಿವಕುಮಾರ್, ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ, ಇಡೀ ದೇಶದಲ್ಲಿ ಇಲ್ಲದ ಕಾನೂನು ನಮ್ಮರಾಜ್ಯದಲ್ಲಿ ಮಾತ್ರ ಯಾಕೆ? ಎಂದುಪ್ರಶ್ನಿಸಿದ ಅವರು, ಇಡೀ ದೇಶಕ್ಕೆ ಒಂದೇ ರೂಲ್ಸ್ ಇರಬೇಕು ಎಂದು ಆಗ್ರಹಿಸಿದರು,


ಮೊದಲ ಮತ್ತು ಎರಡನೇ ಅಲೆ ಪರಿಹಾರ ಇನ್ನೂ ನೀಡಿಲ್ಲ, ೪ ಲಕ್ಷ ಜನ ಕೋವಿಡ್ ನಿಂದ ಸತ್ತಿದ್ದಾರೆ, ಮೃತರ ಕುಟುಂಬಗಳಿಗೆ ಇನ್ನು ಒಂದೂ ರೂಪಾಯಿ ಪರಿಹಾರ ನೀಡದ ಈ ಸರ್ಕಾರ, ರೈತರಿಗೆ ಬೆಂಬಲ ಬೆಲೆ ನೀಡಿಲ್ಲ ಎಂದು ಆರೋಪಿಸಿದರು. ಪ್ರತಿಯೊಬ್ಬರು ಈಗ ತಾನೆ ಸ್ವಲ್ಪ ವ್ಯಾಪಾರ ವಹಿವಾಟು ಮಾಡಲು ಆರಂಭಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತೆ ಕಠಿಣ ಕಾನೂನು ಜಾರಿ ಆದ್ರೆ, ಆರ್ಥಿಕ ಚಟುವಟಿಕೆ ನಿಂತು ಹೋಗುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ದೇಶದಲ್ಲಿರುವ ಕಾನೂನನ್ನು ಇಲ್ಲಿಯೂ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

More News