ಬೆಂಗಳೂರು: ಭಾರತ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಆತ್ಮನಿರ್ಭರ್ ಆಗಬೇಕೆಂಬ ಹಂಬಲವಿದ್ದ ಬಿಪಿನ್ ರಾವತ್ ಅವರು ಸ್ಥಳೀಯವಾಗಿ ರಕ್ಷಣಾ ಉಪಕರಣಗಳ ತಯಾರಿಕೆಯನ್ನು ಪ್ರಾರಂಭಿಸಲು ಕಾರಣಿಭೂತರಾಗಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿಆರ್ ಡಿ ಓ ಹಾಗೂ ಹಲವಾರು ಸಂಸ್ಥೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವಲ್ಲಿ ಅವರ ಪ್ರೇರಣೆಯೂ ಇದೆ. ಹೊಸ ಆವಿಷ್ಕಾರ, ಉಪಕರಣಗಳನ್ನು ತಯಾರು ಮಾಡಿ ಸೇನೆಗಳಿಗೆ ಸರಬರಾಜು ಮಾಡುವುದಷ್ಟೇ ಅಲ್ಲ, ಖಾಸಗಿ ವಲಯದಲ್ಲಿಯೂ ಉತ್ಪಾದನೆ ಮಾಡಲು ಜ್ಞಾನವನ್ನು ವರ್ಗಾಯಿಸಲು ಬಹಳ ಪ್ರೋತ್ಸಾಹ ನೀಡಿದ್ದರು ಎಂದರು.
ಯುದ್ಧಭೂಮಿಯಲ್ಲಿ ಹೊಸ ವಿಧಾನಗಳ ಅನುಷ್ಠಾನ
ಮೂರು ಪಡೆಯ ಮುಖ್ಯಸ್ಥರಾದ ಬಿಪಿನ್ ರಾವತ್ ಅವರ ದುರ್ಮರಣದಿಂದ ಇಡೀ ದೇಶವೇ ದಿಗ್ಭ್ರಮೆಗೆ ಒಳಗಾಗಿದೆ. ಘಟನೆ ಹೇಗಾಯ್ತು ಎನ್ನುವುದು ಮುಖ್ಯವಾಗಿರುವುದರಿಂದ ವಾಯುಪಡೆ ತನಿಖೆಯನ್ನು ಕೈಗೊಂಡಿದೆ. ರಾವತ್ ಅವರು ಸೈನ್ಯವನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದರು.

ಯುದ್ಧ ಭೂಮಿಯಲ್ಲಿ ಹೊಸ ವಿಧಾನಗಳನ್ನು ಕಂಡುಕೊಂಡು ಅನುಷ್ಠಾನವನ್ನೂ ಮಾಡಿದರು ಎಂದು ಹೇಳಿದರು.
ದಿಟ್ಟ ನಿಲುವು ಕೈಗೊಂಡ ರಾವತ್
ಭಾರತದ ಸುರಕ್ಷತೆಯ ಬಗ್ಗೆ ಹಿಂದೆಂದೂ ತೆಗೆದುಕೊಂಡಿರದ ಹಲವಾರು ದಿಟ್ಟ ನಿಲುವನ್ನು ಪ್ರದರ್ಶಿಸಿದ್ದ ಅವರು ಚೀನಾ, ಭಾರತದ ಗಡಿಯಲ್ಲಿ ನಡೆದ ಚಕಮಕಿಯಲ್ಲಿ ದೇಶವನ್ನು ಬಹಳ ಗಟ್ಟಿಯಾಗಿ ನಿಲ್ಲಿಸಿ, ಚೀನಾವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಹಾಗೆಯೇ ಅವರ ನಾಯಕತ್ವ ಮುಂದಿನ ದಿನಗಳಲ್ಲಿ ನಮಗೆ ಬಹಳ ಅವಶ್ಯಕವಾಗಿತ್ತು ಎಂದು ಅಭಿಪ್ರಾಯಪಟ್ಟರು.
ಜೀವನ ಚರಿತ್ರೆ ಪ್ರೇರಣಾದಾಯಕ
ಇಡೀ ದೇಶ ಒಬ್ಬ ನಾಯಕನನ್ನು ಕಳೆದುಕೊಂಡಿದೆ. ನಮ್ಮೆಲ್ಲರಿಗೂ ಅವರ ಜೀವನ ಚರಿತ್ರೆ ಪ್ರೇರಣಾದಾಯಕವಾಗಿದೆ. ಅವರ ತ್ಯಾಗ ಬಲಿದಾನಗಳ ಬಗ್ಗೆ ಮಕ್ಕಳಿಗೆ ತಿಳಿಸುವಂತಾಗಬೇಕು. ಮುಂದಿನ ಪೀಳಿಗೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅವರ ಕಾರ್ಯಕ್ರಮಗಳನ್ನು ಮುಂದುವರೆಸಿ ನಿಜವಾದ ಶ್ರದ್ದಾಂಜಲಿಯನ್ನು ಸಲ್ಲಿಸಬೇಕು ಎಂದರು.
ಕರ್ನಾಟಕದೊಂದಿಗೆ ರಾವತ್ ಅವರಿಗೆ ಉತ್ತಮ ಸಂಬಂಧ
ಕರ್ನಾಟಕದೊಂದಿಗೆ ಅವರು ಅವಿನಾಭಾವ ಸಂಬಂಧ ಹೊಂದಿದ್ದರು. ಕೊಡಗಿನೊಂದಿಗೆ ವಿಶೇಷ ಸಂಬಂಧ ಅವರಿಗಿತ್ತು. ಜನರಲ್ ಕಾರಿಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಬಗ್ಗೆ ಅಪಾರ ಗೌರವವಿತ್ತು.

ಅವರ ಶೌರ್ಯವನ್ನು ಪದೇ ಪದೇ ಹೇಳುತ್ತಿದ್ದರು. ಇಲ್ಲಿನ ಜನರು ಹಾಗೂ ಸೈನಿಕರ ಬಗ್ಗೆ ಪ್ರೀತಿಯನ್ನು ಹೊಂದಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.




