PRAHLAD JOSHI ON SIDDARAMAIAH: ಮೋದಿ ಅವರತ್ತ ಬೆರಳು ತೋರಿ ನಗೆಪಾಟಲಿಗೆ ಗುರಿಯಾಗ್ಬೇಡಿ; ಸುಮ್ಮನೆ ರಾಜೀನಾಮೆ ನೀಡಿ: ಪ್ರಲ್ಹಾದ ಜೋಶಿ

ನವದೆಹಲಿ: ಶುದ್ಧ ಹಸ್ತ, ಶ್ರಮಜೀವಿ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರತ್ತ ಬೆರಳು ತೋರುವ ಯಾವುದೇ ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಿಎಂಗೆ ತಿರುಗೇಟು ನೀಡಿದ್ದಾರೆ.

“ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು 2500 ಕೋಟಿ ರೂಪಾಯಿಗೆ ಬಿಜೆಪಿ ಮಾರಿಕೊಂಡಿದ್ದು, ಪ್ರಧಾನಿ ಮೋದಿ ಅವರಿಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಹಕ್ಕಿಲ್ಲ” ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ವೀಟ್ ಗೆ ಪ್ರಲ್ಹಾದ ಜೋಶಿ ಸಹ ಖಡಕ್ ಆಗಿಯೇ ಟ್ವೀಟ್ ವಾರ್ ನಡೆಸಿದ್ದಾರೆ.

ಮೂಡಾ ಚಕ್ರವ್ಯೂಹದಲ್ಲಿ ಸಿಲುಕಿ ಬಡಬಡಿಸುತ್ತಿದ್ದಾರೆ ಸಿಎಂ: ಮೂಡಾ ಹಗರಣದ ಚಕ್ರವ್ಯೂಹದಲ್ಲಿ ಸಿಲುಕಿ ಹತಾಶರಾಗಿರುವ ಸಿಎಂ ಸಿದ್ದರಾಮಯ್ಯ ಅವರು ವಿವೇಚನಾ ರಹಿತರಾಗಿ ಏನೇನೋ ಬಡಬಡಿಸುತ್ತಿದ್ದಾರೆ ಎಂದು ಜೋಶಿ ಟೀಕಿಸಿದ್ದಾರೆ.

ತಮ್ಮ ಅಧಿನಾಯಕರೇ ಬೇಲ್ ಮೇಲಿರೋದು: ತಮ್ಮ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯೇ ಭ್ರಷ್ಟಾಚಾರ ಪ್ರಕರಣದಲ್ಲೇ ಬೇಲ್ ಮೇಲೆ ಹೊರಗಿರೋದು ಎಂದು ಜೋಶಿ ತಿರುಗೇಟು ಕೊಟ್ಟಿದ್ದಾರೆ.

ಇನ್ನು, ಪ್ರಧಾನಿ ನರೇಂದ್ರ ಮೋದಿ ಅವರು ಹಗಲಿರುಳು ಭ್ರಷ್ಟಾಚಾರ ತಡೆ ಹಾಗೂ ದೇಶದ ಅಭಿವೃದ್ಧಿಗೆ ಪ್ರಥಮಾದ್ಯತೆ ನೀಡಿ ಶ್ರಮಿಸುತ್ತಿದ್ದಾರೆ. ಇಂಥವರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ತಮಗೇ ಇಲ್ಲ ಎಂದು ಸಿಎಂಗೆ ತಿವಿದಿದ್ದಾರೆ ಜೋಶಿ.

ಸಿಎಂ ಇಷ್ಟಕ್ಕೇ ಹತಾಶರಾದರೆ ಹೇಗೆ?:
ಕೇವಲ ತಮ್ಮ ಕುಟುಂಬದ ಹಗರಣವನ್ನು ತನಿಖೆಗೆ ಒಳಪಡಿಸಿದ್ದಕ್ಕೇ ಇಷ್ಟು ಹತಾಶರಾದರೆ ಹೇಗೆ? ನಿಮ್ಮ ಹುಬ್ಲೋಟ್ ವಾಚ್ ಕಥೆ ಮುಗಿದ ಅಧ್ಯಯವಲ್ಲ. ಇದರ ಸಾಕಷ್ಟು ವಿಚಾರಗಳು ಇನ್ನೂ ಹೊರ ಬರಬೇಕಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಸಿಎಂ ವಿರುದ್ಧ ಸಮರ ಸಾರಿದ್ದಾರೆ.

ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಸಾಬೀತಾಗಬಹುದು ಎಂಬ ಕಳವಳದಿಂದಲೇ ಲೋಕಾಯುಕ್ತ ಅಧಿಕಾರ ಕಸಿದು ಎಸಿಬಿ ಸ್ಥಾಪಿಸಿದ್ರಿ. ಇನ್ನು SIT ಯನ್ನು “Siddaramayya In Trouble” ಎಂದೇ ರಾಜ್ಯದ ಜನ ವ್ಯಾಖ್ಯಾನಿಸುತ್ತಿದ್ದಾರೆ ಎಂದು ಸಿಎಂಗೆ ಚಾಟಿ ಬೀಸಿದ್ದಾರೆ ಸಚಿವ ಜೋಶಿ.

ಅರ್ಕಾವತಿ ವರದಿಗೇನು ಕ್ರಮ:
ಅರ್ಕಾವತಿ ಲೇಔಟ್ ವಿಚಾರವಾಗಿ ನ್ಯಾಯಾಧೀಶ ಕೆಂಪಣ್ಣನವರು ನೀಡಿದ ವರದಿ ಆಧಾರವಾಗಿ ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದ್ದಾರೆ.

ವಾಲ್ಮೀಕಿ ಹಣ ನುಂಗಿದ್ದು ನಿಮ್ಮವರೇ ಅಲ್ಲವೇ?: ಇನ್ನು ವಾಲ್ಮೀಕಿ ಸಮುದಾಯದ ಅಭಿವೃದ್ದಿಗೆಂದು ಇಟ್ಟಿದ್ದ ನೂರಾರು ಕೋಟಿ ರೂಪಾಯಿ ಹಣವನ್ನು ಗುಳುಂ ಮಾಡಿ ಸಿಕ್ಕಿ ಬಿದ್ದಿರುವುದು ತಮ್ಮ ಆಪ್ತ ಮಂತ್ರಿಯೇ ಎಂಬುದು ಎಲ್ಲರಿಗೂ ತಿಳಿದ ವಿಚಾರ. SC-ST ಸಮುದಾಯದ ಅಭಿವೃದ್ಧಿಯ ಹಣವನ್ನು ದುರ್ಬಳಕೆ ಮಾಡಿರುವುದನ್ನು ರಾಜ್ಯದ ಜನ ಕ್ಷಮಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ನಗೆಪಾಟಲಿಗೆ ಗುರಿ ಆಗ್ಬೇಡಿ; ಸುಮ್ಮನೆ ರಾಜೀನಾಮೆ ನೀಡಿ:
ಇತ್ತ ಮೂಡಾ, ವಾಲ್ಮೀಕಿ ಹೀಗೆ ಸಾಲು ಸಾಲು ಹಗರಣಗಳ ಚಕ್ರವ್ಯೂಹದಲ್ಲಿ ಸಿಲುಕಿದ್ದೀರಿ. ಪರಿಸ್ಥಿತಿ ಹೀಗಿರುವಾಗ ಹತಾಶೆಯಲ್ಲಿ ವಿನಾಕಾರಣ ಏನೇನೊ ಮಾತನಾಡಲು ಹೋಗಿ ನಗೆಪಾಟಲಿಗೆ ಗುರಿಯಾಗಬೇಡಿ. ಬದಲಿಗೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾನೂನಿಗೆ ತಲೆ ಬಾಗಿ ತನಿಖೆಗೆ ಸಹಕರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದ್ದಾರೆ ಸಚಿವ ಪ್ರಲ್ಹಾದ ಜೋಶಿ.

More News

You cannot copy content of this page