Murugha Sri Case: ಶಿವಮೂರ್ತಿ ಶರಣರ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್‌

ಬೆಂಗಳೂರು: ‘ನನ್ನ ಇಬ್ಬರು ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಮಠಾಧಿಪತಿ ಶಿವಮೂರ್ತಿ ಶರಣರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ಬಾಲಕಿಯರಿಬ್ಬರ ತಾಯಿ ನೀಡಿರುವ ದೂರಿಗೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾ ಪೊಲೀಸರು ಶರಣರ ವಿರುದ್ಧ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು’ ಎಂದು ಹೈಕೋರ್ಟ್‌ ಆದೇಶಿಸಿದೆ.

‘ನನ್ನ ವಿರುದ್ಧ ಚಿತ್ರದುರ್ಗ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸಬೇಕು ಮತ್ತು ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್‌ನ ಎರಡನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಬೇಕು’ ಎಂದು ಶಿವಮೂರ್ತಿ ಶರಣರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿ, ‘ಈ ಮೊದಲಿನ ಪೋಕ್ಸೊ ಕಾಯ್ದೆ ಆರೋಪಗಳ ದೂರಿನಲ್ಲೂ ಇದೇ ರೀತಿಯ ಅಪರಾಧಿಕ ಕಲಂಗಳಡಿ ಪ್ರಕರಣ ದಾಖಲಿಸಲಾಗಿತ್ತು. ತದನಂತರ ಮಠದ ಅಡುಗೆ ಕೆಲಸದ ಮಹಿಳೆ ನೀಡಿದ ಹೇಳಿಕೆ ಆಧರಿಸಿ ಇಂತಹುದೇ ಮತ್ತೊಂದು ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ. ಈಗ ಪುನಃ ಅವೇ ಸಾಕ್ಷಿ ಮತ್ತು ದೂರಿನ ಅಂಶಗಳ ಮೇಲೆ ಅರ್ಜಿದಾರರನ್ನು ಬಂಧಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಫಿರ್ಯಾದುದಾರರು ಮನವಿ ಮಾಡಿದ್ದಾರೆ. ಈ ಮೊದಲಿನ ಪ್ರಕರಣದಲ್ಲಿ ಈಗಾಗಲೇ 13 ಸಾಕ್ಷಿಗಳ ವಿಚಾರಣೆ ಮುಗಿದಿರುವ ಕಾರಣ ಅರ್ಜಿದಾರರು ನ್ಯಾಯಾಂಗ ಬಂಧನದಿಂದ ಬಿಡುಗಡೆಯಾಗಿದ್ದಾರೆ. ವಾಸ್ತವದಲ್ಲಿ ಈ ಪ್ರಕರಣದಲ್ಲಿ ಗಲೀಜು ರಾಜಕೀಯ ಅಡಕವಾಗಿದ್ದು ಎಫ್‌ಐಆರ್‌ಗೆ ತಡೆ ನೀಡಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಯಾಗಿ ಹೆಚ್ಚುವರಿ ರಾಜ್ಯ ಪ್ರಾಸಿಕ್ಯೂಟರ್‌, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಕೆಗೆ ಸಮಯಾವಕಾಶ ಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಬೇಡ’ ಎಂದು ಪ್ರಾಸಿಕ್ಯೂಷನ್‌ಗೆ ಆದೇಶಿಸಿ ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಿತು.

‘ನನ್ನ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳಲ್ಲದೆ ಇತರೆ ಮಕ್ಕಳ ಮೇಲೂ ಶಿವಮೂರ್ತಿ ಶರಣರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ’ ಎಂದು ಮಠದಲ್ಲಿನ ಅಡುಗೆ ಕೆಲಸದ ಮಹಿಳೆ ದೂರಿನಲ್ಲಿ ವಿವರಿಸಿದ್ದರು. ಇದರ ಆಧಾರದಡಿ ಮೈಸೂರಿನ ನಜರ್‌ಬಾದ್‌ ಪೊಲೀಸ್‌ ಠಾಣೆಯಲ್ಲಿ 2022ರ ಅಕ್ಟೋಬರ್ 13ರಂದು ಎಫ್‌ಐಆರ್ ದಾಖಲಿಸಲಾಗಿತ್ತು. ತದನಂತರ ಈ ದೂರನ್ನು ಚಿತ್ರದುರ್ಗ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿತ್ತು.

ಎಫ್‌ಐಆರ್‌ನಲ್ಲಿ ಆರೋಪಿ ಶರಣರ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಕಲಂ 376 (ಸಿ), 376 (2) (ಎನ್‌), 376 (ಎಬಿ), 376 (3), 366, 366 (ಎ), 323, 114 ಮತ್ತು 34, ಪೋಕ್ಸೊ ಕಾಯ್ದೆ–2013ರ ಕಲಂ 5 (ಎಲ್‌), 6,7 ಮತ್ತು 17, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ–1988ರ ಕಲಂ 3 (ಎಫ್‌) ಮತ್ತು 7 ಹಾಗೂ ಬಾಲನ್ಯಾಯ (ಮಕ್ಕಳ ಕಾಳಜಿ ಮತ್ತು ಸಂರಕ್ಷಣೆ) ಕಾಯ್ದೆ–2015ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

More News