PRAHLAD JOSHI: ವಕ್ಫ್ ಕಾನೂನು ಮಾಡಿದ್ದೇ ತಪ್ಪು; ಜಗತ್ತಿನಲ್ಲೇ ಇಲ್ಲದ ವಕ್ಫ್ ಕಾನೂನಿಗೆ ಬೇಕು ತಿದ್ದುಪಡಿ: ಪ್ರಲ್ಹಾದ ಜೋಶಿ

ಹುಬ್ಬಳ್ಳಿ: “ಭಾರತದಲ್ಲಿ ವಕ್ಫ್ ಕಾನೂನು ಮಾಡಿದ್ದೇ ತಪ್ಪು. ಮೊದಲಿದನ್ನು ತೆಗೆದು ಹಾಕುವುದೇ ಸೂಕ್ತ” ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಧಾರವಾಡದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ನೆಹರು ಕಾಲದಲ್ಲಿ ಕಾಂಗ್ರೆಸ್ ಅದೇಕೆ ವಕ್ಫ್ ಕಾನೂನು ಮಾಡಿತೋ? ಗೊತ್ತಿಲ್ಲ. ಆದರೆ, 2013ರಲ್ಲಿ ವಕ್ಫ್ ಗೆ ಮತ್ತೆ ಅಪರಿಮಿತ ಅಧಿಕಾರ ಕೊಟ್ಟಿದ್ದೇಕೆ? ಎಂದು ಆಕ್ಷೇಪಿಸಿದರು.

ದೇಶದಲ್ಲಿ ವಕ್ಫ್ ಕಾನೂನು ಮಾಡಿದ್ದೇ ಮೊದಲ ತಪ್ಪು. ಅಥದ್ದರಲ್ಲಿ ಸುಪ್ರೀಂ ಕೋರ್ಟ್ ಸಹ ಪ್ರಶ್ನಿಸದಂತಹ ಪ್ರಶ್ನಾತೀತ ಅಧಿಕಾರವೇ? ಎಂದು ಪ್ರಶ್ನಿಸಿದ ಪ್ರಲ್ಹಾದ ಜೋಶಿ, ಮೊದಲು ಇದನ್ನು ತೆಗೆದು ಹಾಕಿದರೆ ಎಲ್ಲಾ ಸರಿ ಹೋಗುತ್ತದೆ ಎಂದು ಹೇಳಿದರು.

ವಕ್ಫ್ ಕಾನೂನು ತಿದ್ದುಪಡಿ ಅಗತ್ಯ: ಪ್ರಸ್ತುತ ಬೆಳವಣಿಗೆ ನೋಡಿದರೆ ಕಡೇ ಪಕ್ಷ ವಕ್ಫ್ ಕಾನೂನು ತಿದ್ದುಪಡಿ ತರುವ ಅವಶ್ಯಕತೆಯಿದೆ. ಅಲ್ಲಾನ ನೆಪದಲ್ಲಿ ವಕ್ಫ್ ಮೂಲಕ ಭೂ ಕಬಳಿಸುವವರಿಗೆ ಕಡಿವಾಣ ಹಾಕಬೇಕಿದೆ ಎಂದು ಜೋಶಿ ಹೇಳಿದರು.

ಜಗತ್ತಿನಲ್ಲೇ ಇಲ್ಲ ಇಂಥ ವಕ್ಫ್ ಕಾನೂನು: ದೇಶದಲ್ಲಿ ವಕ್ಫ್ ಗೆ ಪರಿಮಿತಿಯೇ ಇಲ್ಲದಾಗಿದೆ. ಜಗತ್ತಿನ ಯಾವ ದೇಶದಲ್ಲೂ ಇಂಥ ವಕ್ಫ್ ಕಾನೂನು ಇಲ್ಲ. ಹಿಂದೂಗಳು, ರೈತರು ಎಚ್ಚೆತ್ತುಕೊಳ್ಳಬೇಕು ಎಂದು ಸಚಿವ ಪ್ರಲ್ಹಾದ ಜೋಶಿ ಕರೆ ನೀಡಿದರು.

ನಾವಿರುವ ಮನೆ, ನಿಂತ ನೆಲವೂ ತನ್ನದೇ ಎನ್ನಬಹುದು ವಕ್ಫ್: ಮುಂದೊಂದು ದಿನ ನಾವಿರುವ ಮನೆ, ನಿಂತ ನೆಲವನ್ನೇ ವಕ್ಫ್ ತನ್ನ ಆಸ್ತಿ ಎಂದರೂ ಅಚ್ಚರಿಯಿಲ್ಲ. ಅಷ್ಟೊಂದು ಅಪರಿಮಿತ ಅಧಿಕಾರ ಕೊಟ್ಟು ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಕಾಂಗ್ರೆಸ್. ಯಾವುದೇ ಕಾರಣಕ್ಕೂ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಅಲ್ಲಾ ಏನು ಭಾರತದವನೇ?:
ಭಾರತದ ನೆಲವನ್ನು ಅಲ್ಲಾನ ಆಸ್ತಿ ಎನ್ನಲು ಅಲ್ಲಾ ಏನು ಭಾರತದವನೆ? ಎಂದು ಪ್ರಶ್ನಿಸಿದ ಜೋಶಿ, ಅಲ್ಲಾನನ್ನು ಮುಂದಿಟ್ಟು ಆಸ್ತಿ ಕಬಳಿಸುತ್ತಿದೆ ವಕ್ಫ್ ಎಂದು ಆರೋಪಿಸಿದರು.

ಜಮೀರ್ ಅಹ್ಮದ್ ಮತ್ತು ಕಾಂಗ್ರೆಸ್ ಕುಮ್ಮಕ್ಕು: ರಾಜ್ಯದಲ್ಲಿ ರೈತರ ಜಾಮೀನು, ಮಠ, ದೇವಸ್ಥಾನ ಮತ್ತು ಬಡ ಮುಸ್ಲಿಮರ ಆಸ್ತಿಯನ್ನು ವಕ್ಫ್ ಮೂಲಕ ಕಬಳಿಸಲು ಸಚಿವ ಜಮೀರ್ ಅಹ್ಮದ್ ಮತ್ತು ಕಾಂಗ್ರೆಸ್ ಪಕ್ಷ ಸಹ ಕುಮ್ಮಕ್ಕು ನೀಡಿದೆ ಎಂದು ಪ್ರಲ್ಹಾದ ಜೋಶಿ ಹರಿ ಹಾಯ್ದರು.

ತಹಶೀಲ್ದಾರ್ ಅಮಾನತು ಮಾಡಿ: ರೈತರ ಜಮೀನು ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ತಿದ್ದುಪಡಿ ಮಾಡಿದ ತಹಶೀಲ್ದಾರ್ ಮತ್ತು ಅಧಿಕಾರಿಗಳನ್ನು ರಾಜ್ಯ ಸರ್ಕಾರ ಕೂಡಲೇ ಅಮಾನತ್ತು ಪಡಿಸಬೇಕು ಎಂದು ಸಚಿವ ಜೋಶಿ ಆಗ್ರಹಿಸಿದರು.

ಪಹಣಿ ಸರಿಪಡಿಲಿ ಡಿಸಿ: ವಕ್ಫ್ ಆಸ್ತಿ ಎಂದಿರುವ ಪಗಣಿಗಳನ್ನು ಜಿಲ್ಲಾಧಿಕಾರಿ ಕೂಡಲೇ ಸರಿಪಡಿಸಬೇಕು. ರೈತರು ದಾಖಲೆ ಸಲ್ಲಿಸಲಿ ಎನ್ನುತ್ತಿದ್ದಾರೆ. ವಕ್ಫ್ ಹೆಸರು ನಮೂದು ಮಾಡುವಾಗ ದಾಖಲೆ ಕೇಳಿದ್ದರಾ? ಎಂದು ತರಾಟೆಗೆ ತೆಗೆದುಕೊಂಡ ಸಚಿವ ಜೋಶಿ, ಜಿಲ್ಲಾಧಿಕಾರಿ ತಕ್ಷಣವೇ ಯಾವುದೇ ಸಬೂಬು ನೀಡದೆ, ಕೇಳದೆ ನೋಟಿಸ್ ಹಿಂಪಡೆದು ಪಹಣಿ ಸರಿಪಡಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಉಚಿತ ಸ್ಕೀಂ ಗಳಿಗೆ ಮರುಳಾಗಬೇಡಿ: ಕಾಂಗ್ರೆಸ್ ಅಧಿಕಾರದಲ್ಲಿ ಇರುವ ಎಲ್ಲೆಡೆ ಹಿಂದೂಗಳಿಗೆ ಕಿಮ್ಮತ್ತು ಇಲ್ಲದಾಗಿದೆ. ದಯಮಾಡಿ ಯಾರೂ ಕಾಂಗ್ರೆಸ್ ನ ಉಚಿತ ಸ್ಕೀಂ ಗಳಿಗೆ ಮಾರುಳಾಗಿ ಮತ ನೀಡಬಾರದು. ಮುಸ್ಲಿಂ ತುಷ್ಟೀಕರಣದ ಕಾಂಗ್ರೆಸ್ ಅನ್ನು ಬೆಂಬಲಿಸಿ ಕೊನೆಗೆ ಹೀಗೆ ಸ್ವಂತ ಮನೆ-ಮಠ, ಜಮೀನು ಕಳೆದುಕೊಳ್ಳಬೇಡಿ. ಇದು ನನ್ನ ಕಳಕಳಿಯ ಮನವಿ ಎಂದು ಹೇಳಿದರು ಸಚಿವ ಪ್ರಲ್ಹಾದ ಜೋಶಿ.

More News

You cannot copy content of this page