BJP PROTEST AGAINST WAQF: ಕಾಂಗ್ರೆಸ್ ಓಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ರೈತರಿಗೆ ವಕ್ಪ್ ನೊಟೀಸ್ ನೀಡುತ್ತಿದೆ: ಬಸವರಾಜ ಬೊಮ್ಮಾಯಿ

ಸವಣೂರು: ಕಾಂಗ್ರೆಸ್ ಉಪ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ತಮ್ಮ ಓಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ನಮ್ಮ ರೈತರಿಗೆ ವಕ್ಪ್ ನೋಟಿಸ್ ನೀಡಿ ರೈತರಿಗೆ ತೊಂದರೆ ಕೊಡುತ್ತಿದ್ದಾರೆ‌‌. ರೈತರ ಒಂದಿಂಚೂ ಜಮೀನು ವಕ್ಪ್ ಗೆ ಹೋಗಲು ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯ ಸರ್ಕಾರ ರೈತರಿಗೆ ವಕ್ಪ್ ಬೋರ್ಡ್ ಮೂಲಕ ನೊಟಿಸ್ ಕೊಟ್ಟಿರುವುದನ್ನು ವಿರೋಧಿಸಿ ಬಿಜೆಪಿ ವತಿಯಿಂದ ಸವಣೂರಿನಲ್ಲಿ ಏರ್ಪಡಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕಾಂಗ್ರೆಸ್ ನವರು ಎಲ್ಲವನ್ನೂ ಚುನಾವಣ ದೃಷ್ಟಿಯಿಂದ ನೋಡುತ್ತಾರೆ. ಇಷ್ಟು ದಿನ ಬಿಟ್ಟು ಈಗ ರೈತರಿಗೆ ವಕ್ಪ್ ಆಸ್ತಿ ಎಂದು ನೊಟಿಸ್ ನೀಡಿದ್ದಾರೆ.
ಅವರಿಗೆ ಚುನಾವಣೆಯಲ್ಲಿ ಸೋಲುವ ಭೀತಿ ಉಂಟಾಗಿದೆ ಹೀಗಾಗಿ ತಮ್ಮ ಓಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ನಮ್ಮ ರೈತರಿಗೆ ನೊಟಿಸ್ ಕೊಟ್ಟು ತೊಂದರೆ ಕೊಡುತ್ತಿದ್ದಾರೆ ಎಂದರು.
ಸವಣೂರಿನಲ್ಲಿ ಏನೇ ಅಭಿವೃದ್ಧಿ ಮಾಡಲು ಹೊರಟರೆ ಅದನ್ನು ವಕ್ಪ್ ಆಸ್ತಿ ಅಂತ ಹೇಳುತ್ತಾರೆ. ವಕ್ಪ್ ಆಸ್ತಿಯನ್ನು ನುಂಗಿ ನೀರು ಕುಡಿದವರು ಕಾಂಗ್ರೆಸ್ ನಾಯಕರು. ಸುಮಾರು ಐದರಿಂದ ಆರು ಸಾವಿರ ಎಕರೆ ವಕ್ಪ್ ಆಸ್ತಿ ನುಂಗಿದ್ದಾರೆ ಅನ್ವರ್ ಮಾನಿಪ್ಪಾಡಿ ಅವರ ನೇತೃತ್ವದ ಕಮಿಷನ್ ಮಾಡಲಾಗಿತ್ತು. ಅವರು ಸುಮಾರು 8 ಸಾವಿರ ಪುಟದ ವರದಿ ನೀಡಿದ್ದಾರೆ. ಅದರ ಆಧಾರದ ಮೇಲೆ ಉಪ ಲೋಕಾಯುಕ್ತರು ವರದಿ ಸಿದ್ದಪಡಿಸಿದ್ದಾರೆ. ಅದನ್ನು ಕಾಂಗ್ರೆಸ್ ಸರ್ಕಾರ ಮುಚ್ಚಿ ಹಾಕಿತು.
ಅನ್ವರ್ ಮಾಣಿಪ್ಪಾಡಿ ವರದಿ ಪ್ರಕಾರ ಕಾಂಗ್ರೆಸ್ ನ ಯಾವ ನಾಯಕರು ವಕ್ಪ್ ಆಸ್ತಿ ನುಂಗಿದ್ದಾರೆ, ಅದನ್ನು ಸರ್ಕಾರ ವಾಪಸ್ ಪಡೆದು ಸಿಬಿಐ ತನಿಖೆ ನಡೆಸಿ, ಅವರನ್ನು ಒಳಗೆ ಹಾಕಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳು ಯಾವಾಗಲೂ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ವಕ್ಪ್ ಗೆಜೆಟ್ ನೊಟಿಫಿಕೇಶನ್ ಆಗಿದೆ ಅದನ್ನು ರದ್ದು ಮಾಡಬೇಕು. ವಕ್ಪ್ ಕಾಯ್ದೆ ತಿದ್ದುಪಡಿಗೆ ರಾಜ್ಯ ಸರ್ಕಾರ ಬೆಂಬಲ ನೀಡಬೇಕು. ಸಂವಿಧಾಬದ ಆರ್ಟಿಕಲ್ 14 ಮತ್ತು 15 ರ ಪ್ರಕಾರ ಎಲ್ಲರಿಗೂ ಸಮಾನತೆ ಇದೆ. ಆದರೆ, ರೈತರ ಹೆಸರಿನಲ್ಲಿರುವ ಜಮೀನಿನ ಖಾತೆಗಳಲ್ಲಿ ವಕ್ಪ್ ಹೆಸರು ಹಾಕಿದರೆ ಎಲ್ಲಿದೆ ಸಂವಿಧಾನ, ಎಲ್ಲಿದೆ ಸಮಾನತೆ. ಈ ಸರ್ಕಾರ ಸಂವಿಧಾನ ವಿರೋಧಿ ಆಡಳಿತ ನಡೆಸುತ್ತಿದ್ದಾರೆ ಎಂದರು.
ಸವಣೂರಿನಲ್ಲಿ ಶಿಗ್ಗಾವಿಯಲ್ಲಿ ಬಡವರ ಭೂಮಿ ನುಂಗುತ್ತಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ರೈತರಿಗೆ ನೊಟಿಸ್ ಕೊಡುತ್ತಿದ್ದಾರೆ. ರೈತರ ಒಂದು ಇಂಚೂ ಜಮೀನು ಹೋಗಲು ಬಿಡುವುದಿಲ್ಲ. ರಾಜ್ಯದಲ್ಲಿ ಸರ್ಕಾರದ ವಿರುದ್ದ ಗೋಕಾಕ್ ಮಾದರಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಶಿಗ್ಗಾವಿಯಲ್ಲಿ ಹಪ್ತಾ ದಂಧೆ ನಡೆಯುತ್ತಿದೆ. ಈ ಕ್ಷೇತ್ರದಲ್ಲಿ ಸೋತಿರುವ ವ್ಯಕ್ತಿ ಹಪ್ತಾ ವಸೂಲಿ ಮಾಡುತ್ತಿದ್ದಾನೆ. ಅಧಿಕಾರಿಗಳಿಗೆ ಕಾನೂನೇ ನಿಮ್ಮ ತಂದೆ ತಾಯಿ, ಯಾರದೋ ಮಾತು ಕೇಳಿ ಕೆಲಸ ಮಾಡಿದರೆ ನಿಮ್ಮ ಹುದ್ದೆಗೆ ಸಂಚಕಾರ ತಂದುಕೊಳ್ಳುತ್ತೀರಿ. ಇನ್ನು ಮುಂದೆ ಬಸವರಾಜ ಬೊಮ್ಮಾಯಿಯೇ ಫೀಲ್ಡಿಗಿಳಿಯುತ್ತಾನೆ. ಏನು ಆಗುತ್ತದೆ ನೋಡೊಣ, ನೀವೆಲ್ಲ ಒಗ್ಗಟ್ಟಾಗಿ ಇರಬೇಕು. ನಿಮ್ಮ ಜೊತೆ ನಾನು ನಮ್ಮ ನಾಯಕರು ಇರುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸಿ.ಟಿ. ರವಿ, ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಮಾಜಿ ಶಾಸಕ ಪಿ. ರಾಜೀವ ಮತ್ತಿತರರು ಹಾಜರಿದ್ದರು.

More News

You cannot copy content of this page