ಬೆಂಗಳೂರು: ಕಾಂಗ್ರೆಸ್ ಪಕ್ಷದ ಬಕಾಸುರ ಮತ್ತು ಭಸ್ಮಾಸುರನ ವರ್ತನೆಗೆ ರಾಜ್ಯದ ಜನತೆ ಪಾಠ ಕಲಿಸಬೇಕು.ಭಸ್ಮಾಸುರ ಹಾಗೂ ಬಕಾಸುರನಂತೆ ವರ್ತನೆ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ನಾಳೆ ನಡೆಯುವ 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮನವಿ ಮಾಡಿದರು.
ವಿಧಾನಸೌಧ ಕೆಂಗಲ್ ದ್ವಾರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ವಕ್ಫ್ ಬೋರ್ಡ್ ಹೆಸರಿನಲ್ಲಿ ನಮ್ಮ ಭೂಮಿ ಕಿತ್ತುಕೊಳ್ಳುವ ಕೆಲಸ, ರೈತರ,ದಲಿತರ ಭೂಮಿ ಕಿತ್ತುಕೊಳ್ಳುವ ಕೆಲಸ ನಡೆಯವುದನ್ನು ನಾವು ನೋಡುತ್ತಿದ್ದೇವೆ.ಕಾಂಗ್ರೆಸ್ ಪಕ್ಷ ಆಧುನಿಕ ಭಸ್ಮಾಸುರನಂತೆ ವರ್ತಿಸುತ್ತಿದೆ.ಬಕಾಸುರ ಮತ್ತು ಭಸ್ಮಾಸುರ ಎರಡೂ ಸೇರಿದರೆ ಏನಾಗುತ್ತದೋ ಅದು ಕಾಂಗ್ರೆಸ್ ಆಗಿದೆ ಎಂದು ಆರೋಪಿಸಿದರು.
ಕರ್ನಾಟಕ ಸರಕಾರದ ಸಚಿವ ಜಮೀರ್ ಅಹಮದ್ ಅವರು ದೇವೇಗೌಡರ ಕುಟುಂಬವನ್ನು ಒಂದೊಂದು ರೂಪಾಯಿಯೂ ಹಾಕಿ ಕೊಂಡುಕೊಳ್ಳುವುದಾಗಿ ತಿಳಿಸಿದ್ದಾರೆ. ಅವರು ಹೇಳಿದ ಮಾತು ಅಧಿಕಾರದ ಮದ, ಹಣದ ಮದ ತಲೆಗೇರಿದರೆ ಮನುಷ್ಯ ಹುಚ್ಚುಚ್ಚಾಗಿ ಆಡುತ್ತಾನಂತೆ ಎಂಬಂತಿದೆ. ಇವರಿಗೆ ಅಧಿಕಾರ- ಹಣದ ಮದ ಆ ರೀತಿ ಹುಚ್ಚುಚ್ಚು ಮಾತುಗಳನ್ನು ಆಡಿಸಿದೆ ಎಂದು ಅನಿಸುತ್ತದೆ ಎಂದು ವಿಶ್ಲೇಷಿಸಿದರು.
ಈ ಹುಚ್ಚುಗಳನ್ನು ಜನರು ಮಾತ್ರ ಇಳಿಸಲು ಸಾಧ್ಯ ಎಂದ ಅವರು,ಜಮೀರ್ ಅಹಮದ್ ಅವರ ಬಳಿ ಲೂಟಿ ಹೊಡೆದ ಹಣವಿದ್ದು, ಒಕ್ಕಲಿಗರು, ಹಿಂದೂಗಳನ್ನು ಕೊಂಡು ಕೊಳ್ಳಬಹುದೆಂಬ ಸೊಕ್ಕು ಮೂಡಿಸಿದೆ. ಲೂಟಿ ಹೊಡೆದ ದುಡ್ಡಿರುವವರು ಮಾತ್ರ ಇಂಥ ದುರಹಂಕಾರದ ಮಾತನಾಡುತ್ತಾರೆ.ಲೂಟಿ ಹೊಡೆದ ಹಣ ಬಹಳ ಇದ್ದಂತಿದೆ.ಈ ಸೊಕ್ಕನ್ನು ಇಳಿಸಬೇಕು.
ಪ್ರಜಾಪ್ರಭುತ್ವದಲ್ಲಿ ಜಮೀರ್ ಅಹಮದ್ ಥರದವರು ಅಪಸವ್ಯ ಇದ್ದಂತೆ. ಅವರ ಅವಸವ್ಯವನ್ನು ದೂರ ಹಾಕಲು ಒಂದೊಂದು ಮಾತಿಗೂ ಜನರು ಉತ್ತರ ನೀಡುವ ಮಾದರಿಯಲ್ಲಿ ಮತ ಹಾಕಬೇಕೆಂದು ವಿನಂತಿಸಿದರು.
ಜಮೀರ್ ಸೊಕ್ಕಿಗೆ ಉತ್ತರ ಕೊಡಲು ಮನವಿ
ಜಮೀರ್ ಅವರು ವರ್ಣಭೇದದ ಮಾತನಾಡಿದ್ದಾರೆ. ನಮ್ಮ ಕೃಷ್ಣ, ರಾಮ, ಪರಶಿವನಂತ ದೇವಾನುದೇವತೆಗಳು ಕೃಷ್ಣವರ್ಣದಲ್ಲೇ ಭೂಮಿಗೆ ಬಂದವರು. ಈ 3 ಜನರೂ ಕೃಷ್ಣವರ್ಣದಲ್ಲೇ ದರ್ಶನ ಕೊಟ್ಟು ನಾನೇ ಕಪ್ಪು, ಉಳಿದವರನ್ನು ಕಪ್ಪೆಂದು ಯಾಕೆ ಆಡಿಕೊಳ್ಳುತ್ತೀಯ ಎಂದು ಅವರು ತಿಳಿಸಿದ್ದಾರೆ. ನಮ್ಮ ಭಗವಂತನೇ ಕೃಷ್ಣವರ್ಣ.ಜಮೀರ್ ಮಾಡಿದ ಅಪಮಾನ ಅವರ ಸೊಕ್ಕಿನ ಪ್ರದರ್ಶನ. ಆ ಸೊಕ್ಕಿಗೆ ಉತ್ತರ ಕೊಡಿ ಎಂದು ಮನವಿಯನ್ನು ಜನತೆಯ ಮುಂದಿಟ್ಟರು. ಮುಖ್ಯಮಂತ್ರಿಗಳೇ, ನಿಮಗೆ ಕಿಂಚಿತ್ತಾದರೂ ಅವರ ಮಾತು ತಪ್ಪೆಂದು ಅನಿಸಿದರೆ ಜಮೀರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಜ್ಜಂಪುರ ಪೀರ್ ಖಾದ್ರಿ ಅವರು, ಡಾ. ಅಂಬೇಡ್ಕರ್ ಅವರು ಇಸ್ಲಾಂಗೆ ಮತಾಂತರಗೊಳ್ಳಲು ಸಿದ್ಧವಾಗಿದ್ದರು ಎಂದು ಹೇಳಿ ತಮ್ಮ ಅಜ್ಞಾನದ ಪ್ರದರ್ಶನ ಮಾಡಿದ್ದಾರೆ. ಡಾ. ಅಂಬೇಡ್ಕರ್ ಅವರ ವ್ಯಕ್ತಿತ್ವಕ್ಕೆ ಅವಮಾನ ಮಾಡಿದ್ದಾರೆ. ಅಂಬೇಡ್ಕರ್ ಅವರು ನಾನು ಹಿಂದೂವಾಗಿ ಹುಟ್ಟಿದ್ದೇನೆ; ಹಿಂದೂವಾಗಿ ಸಾಯುವುದಿಲ್ಲ ಎಂದು ಹೇಳಿದಾಗ, ಬಹಳ ಜನ ಅವರನ್ನು ಮತಾಂತರ ಮಾಡಿಸುವ ಪ್ರಯತ್ನ ಮಾಡಿದ್ದು ನಿಜ. ತಮ್ಮ ಮತಕ್ಕೆ ಅವರನ್ನು ಕರೆದುಕೊಳ್ಳುವ ಪ್ರಯತ್ನ ಮಾಡಿದ್ದು ನಿಜ. ಅದರಲ್ಲಿ ಹೈದರಾಬಾದ್ ನಿಜಾಮ ಅಧಿಕಾರ, ಜೊತೆಗೆ ಹಣದ ಆಸೆ ಆಮಿಷವನ್ನೂ ತೋರಿಸಿದ್ದರು ಎಂದು ವಿವರಿಸಿದರು.
ಆದರೆ, ಬಾಬಾ ಸಾಹೇಬ ಅಂಬೇಡ್ಕರ್ ಅವರು ಬಹಳ ಸ್ಪಷ್ಟವಾದಿಯಾಗಿದ್ದರು. ನಾನು ನನ್ನ ಪ್ರತಿಭಟನೆ ದಾಖಲಿಸಲು ಮತಾಂತರವಾಗುತ್ತೇನೆ; ದೇಶಾಂತರ ಅಲ್ಲ ಮತ್ತು ಸಂಸ್ಕøತಿಯಿಂದ ದೂರ ಹೋಗುವುದಿಲ್ಲ. ಇಸ್ಲಾಂ ಅಥವಾ ಕ್ರಿಶ್ಚಿಯಾನಿಟಿಗೆ ಹೋದರೆ ಮೂಲ ಸಂಸ್ಕøತಿಯಿಂದ ದೂರ ಹೋಗಬೇಕಾಗುತ್ತದೆ. ಹಾಗಾಗಿ ನಾನು ಅವುಗಳನ್ನು ಸ್ವೀಕರಿಸುವುದಿಲ್ಲ ಎಂದಿದ್ದರು. ತಮ್ಮ ‘ಥಾಟ್ಸ್ ಆಫ್ ಪಾಕಿಸ್ತಾನ್’ ನಲ್ಲಿ ಇಸ್ಲಾಂ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಇವತ್ತಿಗೂ ಕೂಡ ಪಬ್ಲಿಕ್ ಡೊಮೈನ್‍ನಲ್ಲಿ ‘ಥಾಟ್ಸ್ ಆಫ್ ಪಾಕಿಸ್ತಾನ್’ ಅಥವಾ ‘ಭಾರತ ವಿಭಜನೆ’ ಎಂಬ ಪುಸ್ತಕ ಲಭ್ಯವಿದೆ ಎಂದರು.
ಡಾ. ಅಂಬೇಡ್ಕರ್ ಅವರು ಇಸ್ಲಾಂ ಬಗ್ಗೆ ವಿಶ್ಲೇಷಣೆ ಮಾಡಿದ್ದು, ಇಸ್ಲಾಂ ಎಂದರೆ ಅಸಹಿಷ್ಣುತೆ (ಇನ್ ಟಾಲರೆನ್ಸ್); ಎಂದಿದ್ದರು. ಇವು ನನ್ನ ಮಾತುಗಳಲ್ಲ; ಅಂಬೇಡ್ಕರರ ಮಾತುಗಳು ಎಂದು ವಿವರ ನೀಡಿದರು. ಅಲ್ಲಿ ಮಹಿಳೆಯರಿಗೆ ಸಮಾನ ಹಕ್ಕಿಲ್ಲ; ಮಹಿಳೆಯರನ್ನು ಗುಲಾಮರ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ. ಬುರ್ಖಾ ಪದ್ಧತಿಯೂ ಗುಲಾಮಗಿರಿಯ ಪ್ರತೀಕ ಎಂದು ಡಾ. ಅಂಬೇಡ್ಕರ್ ಅವರು ‘ಥಾಟ್ಸ್ ಆಫ್ ಪಾಕಿಸ್ತಾನ್’ದಲ್ಲಿ ವಿಶ್ಲೇಷಿಸಿದ್ದಾರೆ ಎಂದು ತಿಳಿಸಿದರು.
‘ಥಾಟ್ಸ್ ಆಫ್ ಪಾಕಿಸ್ತಾನ್’ ಓದಲು ಪೀರ್ ಖಾದ್ರಿಗೆ ಸಲಹೆ
ಇಸ್ಲಾಂ ಪ್ರತಿಪಾದಿಸಿದ್ದು ಬ್ರದರ್ ಹುಡ್ ಎಂಬ ಸಹೋದರತ್ವ (ಭಾಯಿಚಾರ) ಏನಿದೆಯೋ ಅದು ಕೇವಲ ಮುಸಲ್ಮಾನರಿಗೆ ಮಾತ್ರ. ಎಲ್ಲ ಮಾನವರಲ್ಲಿ ಅದು ಸಹೋದರತ್ವವನ್ನು ಬೆಳೆಸುವುದಿಲ್ಲ; ಕೇವಲ ಮುಸ್ಲಿಮರಿಗೆ ಮಾತ್ರ ಅದು ಸಹೋದರತ್ವವನ್ನು ಮಾಡುತ್ತದೆ ಎಂದು ಅಂಬೇಡ್ಕರರು ಹೇಳಿದ್ದರು ಎಂದರು. ಇದನ್ನು ಅಜ್ಜಂಪುರ ಪೀರ್ ಖಾದ್ರಿ ಅವರು ಓದಬೇಕಾದ ಅವಶ್ಯಕತೆ ಇದೆ. ‘ಥಾಟ್ಸ್ ಆಫ್ ಪಾಕಿಸ್ತಾನ್’ ಓದಿದರೆ ಅಜ್ಜಂಪುರ ಪೀರ್ ಖಾದ್ರಿ ಅವರ ಅಜ್ಞಾನದ ಹೇಳಿಕೆಗೆ ಜ್ಞಾನದ ಬೆಳಕು ಸಿಗುತ್ತದೆ ಎಂದು ವಿಶ್ಲೇಷಿಸಿದರು.
ಟರ್ಕಿ- ಗ್ರೀಕಿನ ಉದಾಹರಣೆ ಕೊಟ್ಟು ಜನರ ವಿನಿಮಯ ಕುರಿತು ಡಾ. ಅಂಬೇಡ್ಕರ್ ಅವರು ತಿಳಿಸಿದ್ದರು. ಪಾಕಿಸ್ತಾನ ಅನಿವಾರ್ಯವಾದರೆ ಮತ್ತು ಮತಾಂಧತೆಗೆ ಪೂರ್ಣವಿರಾಮ ಹಾಕಲು ಮುಂದಾಗಲು ತಿಳಿಸಿದ್ದರು. ಟರ್ಕಿ- ಗ್ರೀಕಿನ ಮಾದರಿಯಲ್ಲಿ ಟರ್ಕಿಯಿಂದ ಕ್ರಿಶ್ಚಿಯನ್ನರನ್ನು ಗ್ರೀಕಿಗೆ ಕಳುಹಿಸಿ, ಗ್ರೀಕ್‍ನಿಂದ ಮುಸಲ್ಮಾನರನ್ನು ಟರ್ಕಿಗೆ ಸ್ಥಳಾಂತರಿಸಿದ ಉದಾಹರಣೆ ಕೊಟ್ಟಿದ್ದರು; ಪಾಕಿಸ್ತಾನಕ್ಕೆ ಸೇರಬಹುದಾದ ಜಾಗದಲ್ಲಿರುವ ಹಿಂದೂಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆದುಕೊಂಡು ಬನ್ನಿ; ಭಾರತದಲ್ಲಿರುವ ಮುಸಲ್ಮಾನರನ್ನು ಅಲ್ಲಿಗೆ ಸುರಕ್ಷಿತವಾಗಿ ಕಳಿಸಿ; ಆಗ ಮಾತ್ರ ಮತಾಂಧತೆ ಎನ್ನುವುದು ಕೊನೆ ಆಗಲಿದೆ ಎಂದಿದ್ದರು. ಅದು ಬೇರೆ ರೂಪದಲ್ಲಿ ಭಾರತದಲ್ಲಿ ತಲೆ ಎತ್ತಲಿದೆ ಎಂದು ಬರೆದಿದ್ದರೆಂದು ಹೇಳಿದರು.
ಬ್ರಿಟಿಷ್ ಸರಕಾರ-ಕಾಂಗ್ರೆಸ್ ಪಕ್ಷ ಮತ್ತು ಮುಸ್ಲಿಂ ಲೀಗ್ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ್ದವು.ಭಾರತ ವಿಭಜನೆ ಆಗಿತ್ತು. ಅಲ್ಲಿರುವ ಹಿಂದೂಗಳನ್ನು ಬಲಾತ್ಕಾರ ಮಾಡಿದರು; ಮತಾಂತರ ಮಾಡಿದ್ದಲ್ಲದೆ ನಿರ್ವಸಿತರನ್ನಾಗಿ ಮಾಡಿ ಓಡಿಸಿದ್ದರು. ಇಲ್ಲಿ ಮತಾಂಧತೆಯ ಭೂತ ಬಲವಾಗಲು ಕಾರಣವಾದೆವು ಎಂದರು.