ಹುಬ್ಬಳ್ಳಿ: ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ಅಪ್ರಾಪ್ತ ವಯಸ್ಸಿನ ಬಾಲಕಿಯೊರ್ವಳನ್ನು ಚುಡಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ಐವರು ಆರೋಪಿಗಳನ್ನು ಘಟನೆ ನಡೆದ ಎರಡು ಗಂಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಹಳೇಹುಬ್ಬಳ್ಳಿಯ ಅಯೋಧ್ಯೆ ನಗರದ ನಿವಾಸಿಗಳಾದ ಶುಭಂ ತಡಸ, ಮೆಹಬೂಬ್ ಹಿತ್ತಲಮನಿ, ಈ ಆರೋಪಿಗಳಿಗೆ ಸಹಕರಿಸಿದ ಸಾಗರ ಸಾತಪುತೆ, ಶ್ರೀವತ್ಸವ ಬೆಂಡಿಗೇರಿ, ಸಚಿನ ನರೇಂದ್ರ ಎಂಬಾರನ್ನು ಬಂಧಿಸಲಾಗಿದೆ.
ಬಂಧಿತರಿಂದ ಆರು ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಶುಭಂ ತಡಸ ಎಂಬಾತನ ವಿರುದ್ಧ ಕಸಬಾಪೇಟೆ ಮತ್ತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಎರಡು ಪ್ರಕರಣಗಳು ದಾಖಲಾಗಿವೆ. ಸಾಗರ ಸಾತಪುತೆ ಎಂಬಾತನ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳಿವೆ. ಸಚಿನ ನರೇಂದ್ರ ಎಂಬಾತನ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.
ಸದ್ಯ ಈ ಕುರಿತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಬೀದಿಕಾಮಣ್ಣರಿಗೆ ಕಮಿಷನರ್ ಖಡಕ್ ಎಚ್ಚರಿಕೆ.
ಈ ಕುರಿತಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಪ್ರತಿಕ್ರಿಯಿಸಿ
ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಚುಡಾಯಿಸಿದ ಘಟನೆಗೆ ಸಂಬಂಧಿಸಿದಂತೆ ಪೋಕ್ಸೋ ಪ್ರಕರಣ ದಾಖಲಾಗಿದೆ. 14 ವರ್ಷದ ಬಾಲಕಿ ಶಾಲೆಯನ್ನು ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಕಿಡಿಗೇಡಿಗಳಿಬ್ಬರು ಬೈಕ್ ಮೇಲೆ ಬಂದಿದ್ದಲ್ಲೇ ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದರು. ಈ ಕುರಿತು ಸಿಸಿಕ್ಯಾಮಾರದಲ್ಲಿ ದೃಶ್ಯಾವಳಿಗಳು ಸೆರೆಯಾಗಿದ್ದವು. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು. ಬಳಿಕ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಬಿ.ಎನ್.ಎಸ್ ಮತ್ತು ಪೋಕ್ಸೋ ಕಾಯ್ದೆ ಪ್ರಕರಣವನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದರು.
ಇನ್ನೂ ನಗರದ ಶಾಲೆ-ಕಾಲೇಜು, ಮಾರುಕಟ್ಟೆ, ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತನೆ ತೋರುವ ದುಷ್ಟರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು. ಮಹಿಳೆ ಅಥವಾ ಮಕ್ಕಳು ದೂರು ದಾಖಲಿಸಲು ಹಿಂದೆಟ್ಟು ಹಾಕಿದರೇ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಿದ್ದವಾಗಿದೆ. ಸಾರ್ವಜನಿಕರು ಕೂಡ ಇಂತಹ ಪ್ರಕರಣ ಗಮನಕ್ಕೆ ಬಂದಾಗ ಪೊಲೀಸರಿಗೆ ಮಾಹಿತಿ ನೀಡಬೇಕು. ಅಂತವರ ಮಾಹಿತಿಯನ್ನು ಗೌಪ್ಯವಾಗಿಟ್ಟು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಮಿಷನರ್ ಖಡಕ್ ಎಚ್ಚರಿಕೆ ನೀಡಿದರು.




