BPL Card Cancellation: ಬಿಪಿಎಲ್ ಕಾರ್ಡ ರದ್ದು, ರಾದ್ದಾಂತ – ಮರುಪರಿಶೀಲನೆಗೆ ಸರ್ಕಾರದ ನಿರ್ಧಾರ

ಬೆಂಗಳೂರು : ರಾಜ್ಯದಲ್ಲಿ ಇದೀಗ ಬಿಪಿಎಲ್ ಕಾರ್ಡ್ ರದ್ಧತಿ ಸುದ್ದಿ ಚರ್ಚೆಗೆ ಗ್ರಾಸವಾಗಿದೆ.ಆಹಾರ ಇಲಾಖೆ ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್ ನ್ನು ಪತ್ತೆ ಹಚ್ಚಿ, ರದ್ದುಗೊಳಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ಅನರ್ಹರ ಬಿಪಿಎಲ್ ರದ್ದು ಮಾಡಿ ಅದನ್ನು ಎಪಿಎಲ್ ಗೆ ಪರಿವರ್ತಿಸುತ್ತಿದೆ. ಅಷ್ಟಕ್ಕೂ ರಾಜ್ಯದಲ್ಲಿನ ಬಿಪಿಎಲ್ ಕಾರ್ಡ್ ರದ್ದತಿ ಸ್ಥಿತಿಗತಿ, ರದ್ದುಗೆ ಕಾರಣಗಳೇನು ಎಂಬ ವರದಿ ಇಲ್ಲಿದೆ.

ಬಿಪಿಎಲ್ ಕಾರ್ಡ್ ರದ್ದತಿ ಇದೀಗ ರಾಜ್ಯದಲ್ಲಿ ಸಾಕಷ್ಟು ಗದ್ದಲ ಸೃಷ್ಟಿಸಿದೆ. ವಿಪಕ್ಷ ಹಾಗೂ ಸರ್ಕಾರದ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಬಿಪಿಎಲ್ ರದ್ದು ಮಾಡಿ ಗ್ಯಾರಂಟಿ ಯೋಜನೆಗೆ ಕತ್ತರಿ ಹಾಕುವ ಉದ್ದೇಶ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ಈಗಾಗಲೇ ಬಿಪಿಎಲ್ ರದ್ದು ಮಾಡುವ ಪ್ರಕ್ರಿಯೆಯನ್ನು ಆಹಾರ ಇಲಾಖೆ ಚುರುಕು ಗೊಳಿಸಿದೆ. ರಾಜ್ಯಾದ್ಯಂತ ಅನರ್ಹ ಬಿಪಿಎಲ್ ಕಾರ್ಡ್ ದಾರರನ್ನು ಪತ್ತೆ ಹಚ್ಚಿ ಅವುಗಳನ್ನು ರದ್ದುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಸಂಬಂಧ ಸಾಕಷ್ಟು ಆರೋಪ ಪ್ರತ್ಯಾರೋಪಗಳು ನಡೆಯುತ್ತಿದೆ. ಅರ್ಹರ ಬಿಪಿಎಲ್ ಕಾರ್ಡ್ ನ್ನೂ ರದ್ದು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ರಾಜ್ಯ ಸರ್ಕಾರ ಆರೋಪವನ್ನು ತಳ್ಳಿ ಹಾಕಿದೆ. ಅಷ್ಟಕ್ಕೂ ರಾಜ್ಯದಲ್ಲಿ ಆಹಾರ ಇಲಾಖೆ ಪತ್ತೆ ಮಾಡಿದ ಅನರ್ಹ ಬಿಪಿಎಲ್ ಕಾರ್ಡ್, ರದ್ದಾದ ಕಾರ್ಡ್ ನ ಸಮಗ್ರ ವರದಿ ಇಲ್ಲಿದೆ.

ರಾಜ್ಯದಲ್ಲಿನ ಪಡಿತರ ಕಾರ್ಡ್ ಗಳೆಷ್ಟು?:

ಆಹಾರ ಇಲಾಖೆ ನೀಡಿದ ಅಂಕಿಅಂಶದಂತೆ ರಾಜ್ಯದಲ್ಲಿ ಅಂತ್ಯೋದಯ, ಆದ್ಯತಾ ಬಿಪಿಎಲ್ ಕಾರ್ಡುಗಳು ಸೇರಿ ಒಟ್ಟು 1,25,74,521 ಇದೆ. ಸುಮಾರು 4,35,33,099 ಪಡಿತರ ಕುಟುಂಬ ಸದಸ್ಯರು ಇದ್ದಾರೆ. ಇದರಲ್ಲಿ ಕಡು ಬಡರವರಿಗೆ ನೀಡುವ ಅಂತ್ಯೋದಯ ಅನ್ನ ಯೋಜನೆಯಡಿಯ ಪಡಿತರ ಕಾರ್ಡ್ 10,68,662 ಗಳಿವೆ. ಒಟ್ಟು 1,15,05,859 ಆದ್ಯಾತಾ ಹಾಗೂ ಬಿಪಿಎಲ್ ಕಾರ್ಡ್ ಗಳಿವೆ. ಇನ್ನು ಸುಮಾರು 25,47,946 ಎಪಿಎಲ್ ಕಾರ್ಡ್ ಗಳಿವೆ.

ನಗರ ಪ್ರದೇಶದಲ್ಲಿ 50% ಹಾಗೂ ಗ್ರಾಮೀಣ ಪ್ರದೇಶದಲ್ಲಿ 75% ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಕಾರ್ಡ್ ಗಳನ್ನು ವಿತರಣೆ ಮಾಡುವ ಅವಕಾಶ ಇದೆ. ರಾಜ್ಯದಲ್ಲಿ 2011 ಜನಗಣತಿ ಪ್ರಕಾರ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 65.96% ಪಡಿತರ ಚೀಟಿ ವಿತರಣೆ ಮಾಡಲಾಗಿದೆ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಬಿಪಿಎಲ್ ಪಡಿತರ ಚೀಟಿ ಇದುವುದು ಕರ್ನಾಟಕದಲ್ಲೇ. ಆಹಾರ ಇಲಾಖೆ ನೀಡಿರುವ ಅಂಕಿಅಂಶದಂತೆ ಕೇರಳದಲ್ಲಿ 45.59%, ತಮಿಳುನಾಡಿನಲ್ಲಿ 48.81%, ತೆಲಂಗಾಣದಲ್ಲಿ 53.93%, ಆಂಧ್ರಪ್ರದೇಶದಲ್ಲಿ 63.73% ಹಾಗೂ ಮಹಾರಾಷ್ಟ್ರದಲ್ಲಿ 58.47% ಬಿಪಿಎಲ್ ಪಡಿತರ ಚೀಟಿ ಇದೆ. ಪ್ರಗತಿಶೀಲ ರಾಜ್ಯ ಕರ್ನಾಟಲದಲ್ಲಿ ಅತಿ ಹೆಚ್ಚು 65.96% ಬಿಪಿಎಲ್ ಪಡಿತರ ಚೀಡಿದಾರರು ಇದ್ದಾರೆ.

ಬಿಪಿಎಲ್ ಕಾರ್ಡಿಗೆ ಯಾರು ಅನರ್ಹರು?:

2017ಕ್ಕೆ ಹೊರಡಿಸಿದ ಪರಿಷ್ಕೃತ ಮಾನದಂಡದ ಪ್ರಕಾರ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸಂಸ್ಥೆಗಳು/ಮಂಡಳಿಗಳು ನಿಗಮಗಳು, ಆದಾಯ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹವಲ್ಲ. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹವಲ್ಲ.

ಇನ್ನು ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು ಪಡಿತರ ಚೀಟಿಗೆ ಅರ್ಹವಲ್ಲ. ಪ್ರತಿ ತಿಂಗಳು 150 ಯುನಿಟ್‌ಗಳಿಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡುವ ಕುಟುಂಬಗಳು, ಕುಟುಂಬದ ವಾರ್ಷಿಕ ಆದಾಯವು ರೂ. 1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು ಆದ್ಯತಾ ಪಡಿತರ ಚೀಟಿಯನ್ನು ಪಡೆಯಲು ಅರ್ಹರಲ್ಲ ಎಂದು 2017ರ ಪರಿಷ್ಕೃತ ಮಾನದಂಡದಲ್ಲಿ ತಿಳಿಸಲಾಗಿದೆ.

13,87,639 ಅನರ್ಹ ಪಡಿತರ ಕಾರ್ಡ್ ಗಳು ಪತ್ತೆ:

ರಾಜ್ಯದಲ್ಲಿ ಆಹಾರ ಇಲಾಖೆ ಸುಮಾರು 13,87,639 ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಯಾಗಿವೆ. ಕಳೆದ ತಿಂಗಳು ನಡೆದ ಆಹಾರ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ. ಅದರಂತೆ 6 ತಿಂಗಳಿಂದ ಪಡಿತರ ಪಡೆಯದೇ ಇರುವುದರಿಂದ ಅನರ್ಹಗೊಳಿಸಿದ ಬಿಪಿಎಲ್ ಕಾರ್ಡ್ 2,75,667. ಕುಟುಂಬ ತಂತ್ರಾಂಶದ ಪ್ರಕಾರ ಆದಾಯ ತೆರಿಗೆ ಪಾವತಿ ಮಾಡಿದ ಹಿನ್ನೆಲೆ 98,458 ಬಿಪಿಎಲ್ ಕಾರ್ಡುಗಳು ಅನರ್ಹ ಮಾಡಲಾಗಿದೆ.

ಸುಮಾರು 4,036 ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಪಡೆದಿರುವುದು ಪತ್ತೆಯಾಗಿದೆ. ಇನ್ನು ಆದಾಯ ಮಿತಿ ಹೆಚ್ಚಿಗೆ ಇರುವ ಹಿನ್ನೆಲೆ 10,09,478 ಬಿಪಿಎಲ್ ಕಾರ್ಡ್ ಅನರ್ಹಗೊಳಿಸಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದಿಂದ ಸುಮಾರು 1,59,319 ಮರಣ ಹೊಂದಿದ ಸದಸ್ಯರನ್ನು ಅನರ್ಹ ಮಾಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಒಟ್ಟು 15,03,391 ಅನರ್ಹ ಸದಸ್ಯರನ್ನು ಪತ್ತೆ ಮಾಡಲಾಗಿದೆ.

ರದ್ದಾಗಿರುವ ಪಡಿತರ ಚೀಟಿ ಎಷ್ಟಿದೆ?:

ಅನರ್ಹಗೊಂಡ ಪಡಿತರ ಚೀಟಿ ಪೈಕಿ ಅಕ್ಟೋಬರ್ ವರೆಗೆ ಸುಮಾರು 3,63,664 ಬಿಪಿಎಲ್ ಕಾರ್ಡುಗಳನ್ನು ರದ್ದು ಪಡಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಇನ್ನೂ ಸುಮಾರು 3.97 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ.‌ ಆರು ತಿಂಗಳಿಂದ ಪಡಿತರ ಪಡೆಯದೇ ಇರುವ ಸುಮಾರು 2,75,647 ಬಿಪಿಎಲ್ ಕಾರ್ಡುಗಳನ್ನು ಆಹಾರ ಇಲಾಖೆ ರದ್ದು ಅಥವಾ ಅಮಾನತು ಮಾಡಿದೆ.

ಆದಾಯ ತೆರಿಗೆ ಪಾವತಿ ಮಾಡುವವರ ಸುಮಾರು 50,462 ಪಡಿತರ ಚೀಟಿಯನ್ನು ರದ್ದುಪಡಿಸಲಾಗಿದೆ. ಇನ್ನು ಸರ್ಕಾರಿ ನೌಕರರ ಸುಮಾರು 2,964 ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ. ಆದಾಯ ಮಿತಿ ಅಧಿಕ ಇರುವವರ 34,591 ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದೆ. ಕೆವೈಸಿ ಮಾಡದೇ ಇರುವ ಹಿನ್ನೆಲೆ 13,44,072 ಅನರ್ಹ ಬಿಪಿಎಲ್ ಕುಟುಂಬ ಸದಸ್ಯರನ್ನು ಪತ್ತೆ ಮಾಡಲಾಗಿದ್ದು, ಈ ಪೈಕಿ 2,06,202 ಸದಸ್ಯರ ಹೆಸರನ್ನು ಕಾರ್ಡ್ ನಿಂದ ರದ್ದು ಪಡಿಸಲಾಗಿದೆ.

ಅರ್ಹರ ಬಿಪಿಎಲ್ ಕಾರ್ಡ್ ಯಾವುದೇ ಕಾರಣಕ್ಕೂ ರದ್ದು ಮಾಡಲ್ಲ. ತೆರಿಗೆ ಪಾವತಿದಾರರು, ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ಎಪಿಎಲ್ ಗೆ ಬದಲಾವಣೆ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ಸಮಗ್ರವಾಗಿ ಪರಿಷ್ಕರಣೆ ಮಾಡಿ ಎಂದು ಸಿಎಂ ಸೂಚನೆ ನೀಡಿದ್ದಾರೆ. ಎಪಿಎಲ್, ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ. ಅರ್ಹರಲ್ಲದವರನ್ನು ಎಪಿಎಲ್ ಗೆ ಸೇರಿಸಲು ಸಿಎಂ ಸೂಚಿಸಿದ್ದಾರೆ. ಪರಿಷ್ಕರಣೆ ವೇಳೆ ಕೈತಪ್ಪಿ ಹೋದ್ರೆ ಬಿಪಿಎಲ್ ಕಾರ್ಡ್ ಪಡೆಯಲು ಮತ್ತೊಮ್ಮೆ ಅವಕಾಶ ನೀಡಲಾಗುತ್ತೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.

More News