ಪರಿಷತ್ ವಿಪಕ್ಷ ನಾಯಕನ ಸ್ಥಾನಕ್ಕೆ ತೀವ್ರಗೊಂಡ ಲಾಭಿ: ಸಂಕ್ರಾಂತಿವರೆಗೂ ಕಾದು ನೋಡಿ ಎಂದ ಸಿಎಂ ಇಬ್ರಾಹಿಂ

ಬೆಂಗಳೂರು : ಬಲವಂತವಾಗಿ ಮತಾಂತರ ಮಾಡಬಾರದು ಎಂದು ಸಂವಿಧಾನದಲ್ಲಿಯೇ ಇರುವುದರಿಂದ ಯಾತಕ್ಕಾಗಿ ಈ ಬಿಲ್ ತರುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಲ್ಲಾ ವಲಯದಲ್ಲೂ ಸಂಪೂರ್ಣವಾಗಿ ವಿಫಲವಾಗಿದೆ, ಜನರ ಗಮನ ಬೇರೆಡೆಗೆ ಸೆಳೆಯಲು ಈ ಮಸೂದೆ ತರುತ್ತಿದ್ದಾರೆ ಎಂದು ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದರು.
ನಾಳೆಯಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮತಾಂತರ ತಡೆ ಮಸೂದೆ ಮಂಡನೆ ಮಾಡಿದರೆ ಇದನ್ನು ತೀವ್ರವಾಗಿ ವಿರೋಧ ಮಾಡಲಾಗುವುದು ಎಂದು ತಿಳಿಸಿದ ಅವರು, ಮತಾಂತರವನ್ನು ಯಾರೂ ಬಲವಂತವಾಗಿ ಮಾಡಬಾರದು, ಸ್ವಯಿಚ್ಚೆಯಿಂದ ಮತಾಂತರ ಆದರೆ ಆಗಲಿ ಎಂದು ಹೇಳಿದರು.


ಎಷ್ಟೋ‌ ಜನ ಮುಸ್ಲಿಮರು, ಲಿಂಗಾಯತರಾದರು ನಾವೇನಾದರೂ ಆಕ್ಷೇಪ ವ್ಯಕ್ತಪಡಿಸಿದ್ದೇವಾ ಎಂದು ಪ್ರಶ್ನಿಸಿದ ಅವರು, ರಿಜ್ವಿ ಹಿಂದೂ ಆದರು, ನಾವು ಏನಾದರೂ ಅವರಿಗೆ ಹೇಳಿದ್ವಾ ಎಂದು ಪ್ರಶ್ನಿಸಿದರಲ್ಲದೆ, ಮತಾಂತರ ಎನ್ನುವುದು ಅವರರಿಚ್ಚೆ, ಆದ್ದರಿಂದ ಒಂದು ಮಸೂದೆ ತರುವ ನಾಟಕ ಎಲ್ಲ ಯಾಕೆ ಎಂದರು.
ಮತಾಂತರ ನಿಷೇಧ ಮಸೂದೆಯಲ್ಲಿ ಲವ್ ಜಿಹಾದ್ ಸೇರ್ಪಡೆ ವಿಚಾರವಾಗಿ ಉತ್ತರ ನೀಡಿದ ಅವರು, ಯಾವುದ್ರೀ‌ ಲವ್? ಯಾವುದ್ರೀ ಜಿಹಾದ್? ಮದುವೆಯಾಗೋರು ಲವ್ ಇಲ್ದೇನೇ ಮದುವೆ ಆಗ್ತಾರಾ? ಲವ್ ಇರೋದ್ರಿಂದಾನೇ ಮದುವೆ ಆಗೋದು, ಲವ್ ಇದ್ಮೇಲೆ ಜಿಹಾದ್ ಯಾಕೆ ಬರುತ್ತೆ? ಎಂದು ಪ್ರಶ್ನಿಸಿದರು.


ಶಾಸಕ ಗೂಳಿಹಟ್ಟಿ ಶೇಖರ್ ತಾಯಿ ಮತಾಂತರ ಆಗಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಅಂತಹ ಕೇಸ್ ಇದ್ರೆ ಕ್ರಮ‌ ತೆಗೆದುಕೊಳ್ಳಲಿ, ಅವರ ತಾಯಿ ದೂರು ಕೊಟ್ರೆ ತನಿಖೆ ಮಾಡಲಿ ಎಂದು ಒತ್ತಾಯ ಮಾಡಿದರು. ರಾಜ್ಯದಲ್ಲಿ ಅನೇಕರಿಗೆ ತಿನ್ನೋದಕ್ಕೆ ಅನ್ನ ಇಲ್ಲ, ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ, ರೈತರ ಸಮಸ್ಯೆ ಮುಂತಾದವುಗಳ ಬಗ್ಗೆ ಸರ್ಕಾರ ಮಾತನಾಡಬೇಕು ಎಂದು ಆಗ್ರಹಿಸಿದ ಅವರು, ಧರ್ಮ ಹಾಗೂ ಧರ್ಮಗುರುಗಳು ಇದನ್ನೆಲ್ಲಾ ನೋಡಿಕೊಳ್ತಾರೆ, ಯಾರ್ಯಾರಿಗೆ ಇಚ್ಚೆ ಇದೆಯೋ ಮತಾಂತರ ಆಗ್ತಾರೆ, ಬಲವಂತ ಇದ್ದರೆ ಪೊಲೀಸರು ಕ್ರಮ ಕೈಗೊಳ್ಳಲಿ ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ ವಿಪಕ್ಷ ಸ್ಥಾನದ ಆಕಾಂಕ್ಷಿ ಎಂದ ಸಿಎಂ ಇಬ್ರಾಹಿಂ
ವಿಧಾನ ಪರಿಷತ್ ವಿಪಕ್ಷ ನಾಯಕನ ಸ್ಥಾನ ವಿಚಾರದ ವಿಚಾರವಾಗಿ ಮಾತನಾಡಿದ ಅವರು, ಯೌವನ ತುಂಬಿದಾಗ ಮದುವೆ ಯಾರು ಯಾಕೆ ಬೇಡ ಅಂತಾರೆ? ಎನ್ನುವುದರ ಮೂಲಕ ತಾವೂ ಈ ಸ್ಥಾನದ ಆಕಾಂಕ್ಷಿ ಎಂದು ಹೇಳಿದರು. ವಿಧಾನ ಪರಿಷತ್ ನಲ್ಲಿ ನಾನು ಈಗ ಸದಸ್ಯನಾಗಿದ್ದೇನೆ, ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಕಾದು ನೋಡೋಣ ಎಂದು ಹೇಳಿದರು.
ಈಗಾಗಲೇ ಈ ಸಂಬಂಧ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರೊಂದಿಗೆ ಸುಧೀರ್ಘ ಚರ್ಚೆ ಮಾಡಲಾಗಿದೆ, ಹಾಗೆಯೇ ಹೈಕಮಾಂಡ್ ನಿಂದಲೂ ದೂರವಾಣಿ ಕರೆ ಬಂದಿತ್ತು, ಎಲ್ಲಾದ್ದನ್ನು ಹೇಳಿದ್ದೇನೆ, ಹೈಕಮಾಂಡ್ ತೀರ್ಮಾನಕ್ಕಾಗಿ ಕಾಯುತ್ತಿದ್ದೇನೆ ಎಂದು ವಿವರಿಸಿದರು.
ಪಕ್ಷ ಬಿಡುತ್ತಿದ್ದೇನೆ ಎಂದು ನಾನು ಎಲ್ಲಿಯೂ ಚರ್ಚೆ ಮಾಡಲಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಇವೆಲ್ಲಾ ಮಾಧ್ಯಮದವರ ಸೃಷ್ಟಿ ಎಂದು ಹೇಳುವುದರ ಮೂಲಕ ಕಾಂಗ್ರೆಸ್ ಪಕ್ಷ ಬಿಡುವುದರ ಬಗ್ಗೆ ಸಿ ಎಂ ಉಲ್ಟಾ ಹೊಡೆದರು.


ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡ ಅವರ ಬಳಿಯೂ ಈಗಲೂ ಉತ್ತಮ ವಿಶ್ವಾಸವಿದೆ, ಹಾಗೆಂದ ಮಾತ್ರಕ್ಕೆ ರಾಜಕೀಯ ಬೇರೆ, ವಿಶ್ವಾಸ ಬೇರೆ ಎಂದು ಅವರು ಹೇಳುವುದರ ಮೂಲಕ ಬಿಡಿಎಸ್ ಮರು ಸೇರ್ಪಡೆ ಬಗ್ಗೆ ಮಾರ್ಮಿಕವಾಗಿ ಉತ್ತರ ನೀಡಿದರು. ಸಂಕ್ರಾಂತಿ ಎಲ್ಲರಿಗೂ ಒಳ್ಳೆದನ್ನು ಮಾಡುತ್ತೆ ಎಂದು ಹೇಳಿದ ಅವರು, ಲೆಟ್ ಅಸ್ ವಿ ವಿಲ್ ಸೀ, ಕಾಲವೇ ಎಲ್ಲದ್ದಕ್ಕೂ ಉತ್ತರ ನೀಡುತ್ತೆ ಎಂದು ಹೇಳಿದರು.

More News