ಬೆಂಗಳೂರು: ಬೆಳಗಾವಿ ಸುವರ್ಣ ಸೌಧದಲ್ಲಿ ನಾಳೆಯಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಹಲವು ಮಹತ್ವದ ಮಸೂದೆಗಳು ಮಂಡನೆಯಾಗಲಿದೆ. ವಿಧಾನಸಭೆ ಕಾರ್ಯದರ್ಶಿ ಕಚೇರಿಗೆ ಇನ್ನೂ ಸರ್ಕಾರ ಯಾವುದೇ ವಿಧೇಯಕಗಳನ್ನು ರವಾನಿಸಿಲ್ಲವೆನ್ನಲಾಗಿದೆ. ಮತಾತಂತರ ನಿಷೇಧ ವಿಧೇಯಕ ಸೇರಿ ಕೆಲ ಮಹತ್ವದ ವಿಧೇಯಕಗಳು ಮಂಡನೆಯಾಗಲಿದೆ.
ಬೆಳಗಾವಿ ಅಧಿವೇಶನ ನಾಳೆಯಿಂದ ಪ್ರಾರಂಭವಾಗಲಿದೆ. 10 ದಿನಗಳ ಕಾಲ ನಡೆಯಲಿರುವ ಅಧಿವೇಶನ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ವೇದಿಕೆಯಾಗಲಿದೆ. ಹಲವು ವಿಚಾರಗಳನ್ನು ಎತ್ತಿ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧವಾಗಿದ್ದರೆ, ಇತ್ತ ಸರ್ಕಾರವೂ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಸಜ್ಜಾಗಿವೆ. ಈ ಮಧ್ಯೆ ಸರ್ಕಾರ ಕೆಲ ಮಹತ್ವದ ವಿಧೇಯಕಗಳನ್ನು ಮಂಡಿಸಲು ಮುಂದಾಗಿದೆ.
ಆದರೆ ಈವರೆಗೂ ಸ್ಪೀಕರ್ ಕಚೇರಿಗೆ ಯಾವುದೇ ಮಸೂದೆಗಳು ಬಂದಿಲ್ಲ ಎಂದು ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಅಧಿವೇಶನದಲ್ಲಿ ಯಾವೆಲ್ಲ ಮಸೂದೆಗಳು ಮಂಡನೆಯಾಗಲಿವೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ವಿಧಾನಸಭೆ ಸಚಿವಾಲಯದ ಅಧಿಕಾರಿಗಳ ಪ್ರಕಾರ ವಿಧಾನಸಭೆಯಲ್ಲಿ ಮಂಡನೆಯಾಗಿರುವ ನಾಲ್ಕು ವಿಧೇಯಕಗಳು ಪರ್ಯಾಲೋಚನೆ ಬಾಕಿ ಇದೆ. ಹೊಸದಾಗಿ 8-10 ವಿಧೇಯಕಗಳು ಮಂಡನೆಯಾಗುವ ಸಾಧ್ಯತೆ ಇದೆ.
ಮಂಡನೆಯಾಗಲಿರುವ ವಿಧೇಯಕಗಳ್ಯಾವುವು?
ಈ ಅಧಿವೇಶನದಲ್ಲಿ ಕರ್ನಾಟಕ ಕೆಲವು ಇನಾಂ ಆಬಾಲಿ ಷನ್ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ, 2021″ಕ್ಕೆ ಹಾಗೂ ಸಂಬಂಧಿಸಿದ ಇತರೆ ನಿಯಮಗಳಿಗೆ ತಿದ್ದುಪಡಿ ವಿಧೇಯಕ ಮಂಡನೆಯಾಗಲಿದೆ.

ರಾಜ-ಮಹಾರಾಜರು, ಬ್ರಿಟಿಷರ ಕಾಲದಲ್ಲಿ ಇನಾಂ ಜಮೀನು ನೀಡಲಾಗಿದ್ದು, ಆಗಿನಿಂದ ಸಾಗುವಳಿ ಮಾಡಿಕೊಂಡಿದ್ದರೂ ನಾನಾ ಕಾರಣಗಳಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಭೂಮಿಯ ಹಕ್ಕು ಪಡೆಯಲು ಸಾಧ್ಯವಾಗಿಲ್ಲ. ನಿಯಾಮಾನುಸಾರ ಅರ್ಹರಿಗೆ ಅರ್ಜಿ ಸಲ್ಲಿಸಲು ಒಂದು ವರ್ಷ ಕಾಲಾವಕಾಶ ವಿಸ್ತರಿಸಲು ‘ಕರ್ನಾಟಕ ಕೆಲವು ಇನಾಂ ಅಬಾಲಿಷನ್ ಹಾಗೂ ಕೆಲವು ಇತರೆ ಕಾನೂನು (ತಿದ್ದುಪಡಿ) ವಿಧೇಯಕ- 2021’ ಹಾಗೂ ಸಂಬಂಧಪಟ್ಟ ನಿಯಮಗಳ ತಿದ್ದುಪಡಿ ವಿಧೇಯಕ ಮಂಡನೆಯಾಗಲಿದೆ.
ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ, 2021 ವಿಧೇಯಕ ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಲಿದೆ. ಈ ವಿಧೇಯಕದಡಿ ಸರ್ಕಾರಿ ಭೂಮಾಪಕರಿಗೂ ಅನುಮತಿ ಜಮೀನು ಗುರುತಿಸಲು ಅಗತ್ಯವಿರುವ ವಿವರಣೆ ಹಾಗೂ ಭೂ ಸಮೀಕ್ಷೆ ನಕ್ಷೆ ಅಥವಾ ಭೂ ಮಾಪನ ನಕ್ಷೆ (ನಿಗದಿತ ಅರ್ಜಿ ನಮೂನೆ-11ಇ)ಯನ್ನು ಇನ್ನು ಮುಂದೆ ಸರ್ಕಾರಿ ಭೂಮಾಪಕರು ನೀಡಲು ಅವಕಾಶ ಕಲ್ಪಿಸಲಾಗುವುದು. ಈವರೆಗೆ ಪರವಾನಗಿ ಪಡೆದ ಭೂಮಾಪಕರು ಮಾತ್ರ 11ಇ ಸ್ಕೆಚ್ ನೀಡಬಹುದಾಗಿತ್ತು.ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮೂಲಕ ಅನುಮತಿ ನೀಡಲಾಗುವುದು.
ಕರ್ನಾಟಕ ಮಹಾನಗರಪಾಲಿಕೆಗಳು ಮತ್ತು ಇತರೆ ಕಾನೂನು (ಮೂರನೇ ತಿದ್ದುಪಡಿ) ವಿಧೇಯಕ, 2021 ವಿಧೇಯಕ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡನೆಯಾಗಲಿದೆ. ಈ ವಿಧೇಯಕದಡಿ ವಾಣಿಜ್ಯ ಕಟ್ಟಡಗಳಿಗೆ ವಿಧಿಸುವ ಆಸ್ತಿ ತೆರಿಗೆಯಿಂದ ಕೈಗಾರಿಕೆಗಳನ್ನು ಪ್ರತ್ಯೇಕಗೊಳಿಸಿ ನೂತನ ಆಸ್ತಿ ತೆರಿಗೆ ಮಿತಿ ವಿಧಿಸುವ ವಿಧೇಯಕ ಇದಾಗಿದೆ. ಪ್ರಸ್ತುತ ವಿಧಿಸುತ್ತಿರುವ ವಾಣಿಜ್ಯ ತೆರಿಗೆಯ ಶೇ. 70 ತೆರಿಗೆಯನ್ನು ಕೈಗಾರಿಕೆಗೆ ಸೀಮಿತಗೊಳಿಸುವ ಹೊಸ ವಿಧೇಯಕ ಮಂಡನೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ 2021 ಈ ಅಧಿವೇಶನದಲ್ಲಿ ಮಂಡನೆ ಯಾಗಲಿದೆ. ಈಗಾಗಲೇ ಈ ಸಂಬಂಧ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಈಗಾಗಲೇ ಸಂಗ್ರಹಿಸಿರುವ 2,362 ಕೋಟಿ ರು.ಗಳ ಮರು ಪಾವತಿ ಮಾಡುವುದರಿಂದ ಎದುರಾಗುವ ಆರ್ಥಿಕ ಹೊರೆಯಿಂದ ತಪ್ಪಿಸಿಕೊಳ್ಳಲು ಈ ವಿಧೇಯಕ ರೂಪಿಸಲಾಗಿದೆ.
ಈ ವಿಧೇಯಕಕ್ಕೆ ಈಗಾಗಲೇ ಸುಗ್ರೀವಾಜ್ಞೆ ಮೂಲಕ ರಕ್ಷಣೆ ಪಡೆದಿದ್ದ ಸರ್ಕಾರವು ಇದೀಗ ತಿದ್ದುಪಡಿ ವಿಧೇಯಕವನ್ನು ಮಂಡಿಸಲು ಮುಂದಾಗಿದೆ. ಬಿಬಿಎಂಪಿಯು ಕಟ್ಟಡ ನಕ್ಷೆಯ ಮಂಜೂರಾತಿ ಮತ್ತು ಪ್ರಾರಂಭ ಪ್ರಮಾಣಪತ್ರದ ಅನುಮತಿ ಹಾಗೂ ಕಟ್ಟಡ ಮುಕ್ತಾಯ ಪ್ರಮಾಣಪತ್ರವನ್ನು ಮಂಜೂರು ಮಾಡುವ ಸಮಯದಲ್ಲಿ ಸಂಗ್ರಹಿಸಲಾದ ಫೀಜು ಮತ್ತು ದಂಡಗಳನ್ನು ಮಾನ್ಯಗೊಳಿಸಲಿದೆ.
ಅಧಿವೇಶನದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಜಮೀನು ಹಂಚಿಕೆ ನೀತಿಗೆ ತಿದ್ದುಪಡಿ ವಿಧೇಯ ಮಂಡಿಸುವ ಸಾಧ್ಯತೆ ಇದೆ. ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಜಮೀನು ಹಂಚಿಕೆ ನೀತಿಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಉದ್ದೇಶಿತ ತಿದ್ದುಪಡಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ.) ವತಿಯಿಂದ ಜಮೀನು ಹಂಚಿಕೆ ಹಾಗೂ ಲೀಸ್ ಕಂ ಸೇಲ್ ಆಧಾರದ ಮೇಲೆ ಹಂಚಿಕೆಯಾದ ಜಮೀನಿಗೆ ಕ್ರಯ ಪತ್ರ ನೆರವೇರಿಸುವುದು ಅಂದರೆ ಮಾರಾಟ ಮಾಡುವ ಅಧಿಕಾರ ನೀಡುವುದು ಈ ಹೊಸ ನೀತಿಯ ಉದ್ದೇಶವಾಗಿದೆ.
ಖಾಸಗಿ ಕಂಪನಿಗಳಿಗೆ ಕೆ.ಐ.ಎ.ಡಿ.ಬಿ.ಯಿಂದ ಹಂಚಿಕೆ ಮಾಡುವ ಜಮೀನುಗಳನ್ನು 10 ವರ್ಷಗಳ ಲೀಸ್ ಕಂ ಸೇಲ್ ಆಧಾರದ ಮೇಲೆ ಹಂಚಿಕೆ ಮಾಡಲು ತಿದ್ದುಪಡಿ ತರಲಾಗುತ್ತಿದೆ.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (ತಿದ್ದುಪಡಿ)ವಿಧೇಯಕ 2021,ಕರ್ನಾಟಕ ರಾಜ್ಯ ಆಯುಷ್ ವಿಶ್ವವಿದ್ಯಾಲಯ ವಿಧೇಯಕ 2021,ಮಹಾನರಗ ಪಾಲಿಕೆಗಳು ಮತ್ತು ಇತರೆ ಕಾನೂನು (ಮೂರನೆ ತಿದ್ದಪಡಿ )ವಿಧೇಯಕ 2021,ಕರ್ನಾಟಕ ಸಿವಿಲ್ ಸೇವೆಗಳ(ಪರಿವೀಕ್ಷಣೆ)ತಿದ್ದುಪಡಿ ನಿಯಮಗಳು 2021, ,ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ ) ನಿಯಮಗಳು ಸೇರಿದಂತೆ ಒಟ್ಟು 10 ವಿಧೇಯಕಗಳು ಮಂಡನೆಯಾಗಲಿವೆ.
ಮತಾಂತರ ನಿಷೇಧ ವಿಧೇಯಕ ಮಂಡನೆ ಸಾಧ್ಯತೆ
ಬೆಳಗಾವಿ ಅಧಿವೇಶನದಲ್ಲಿ ವಿವಾದಿತ ಮತಾಂತರ ನಿಷೇಧ ಮಸೂದೆ ಮಂಡನೆಗೆ ಸರ್ಕಾರ ಎಲ್ಲಾ ತಯಾರಿಗಳನ್ನು ನಡೆಸುತ್ತಿದೆ. ಈಗಾಗಲೇ ಕರಡು ವಿಧೇಯಕ ಸಿದ್ಧಪಡಿಸಲಾಗುತ್ತಿದೆ. ಮತ್ತೊಂದು ಸುತ್ತಿನ ಸಮಾಲೋಚನೆ ಬಳಿಕ ಸಚಿವ ಸಂಪುಟದಲ್ಲಿ ವಿಧೇಯಕ ಮಂಡಿಸಿ ಅನುಮೋದನೆ ಪಡೆದು ಉಭಯ ಸದನದಲ್ಲಿ ಮಂಡಿಸಲು ಬಿಜೆಪಿ ಸರ್ಕಾರ ಸಿದ್ದತೆ ನಡೆಸಿದೆ.
ಬಲವಂತದ ಮತಾಂತರಕ್ಕೆ ಕಠಿಣ ಶಿಕ್ಷೆ ಹಾಗೂ ದಂಡ ನಿಗದಿಗೊಳಿಸುವುದು, ಮತಾಂತರದ ವಿಧಾನಗಳು, ಆಮಿಷಗಳನ್ನು ತಡೆಯುವ ನಿಯಮಾವಳಿ, ತನಿಖಾಧಿಕಾರಿ, ಇತರೆ ನ್ಯಾಯಿಕ ವಿಧಾನಗಳನ್ನು ವಿಧೇಯಕದಲ್ಲಿ ಸೇರ್ಪಡೆಗೊಳಿಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಮಂಡನೆಗೆ ಮುಂದಾಗಿರುವ ಮತಾಂತರ ನಿಷೇಧ ವಿಧೇಯಕ ಬಹು ಚರ್ಚಿತ ಹಾಗೂ ಬಿಸಿಬಿಸಿ ಚರ್ಚೆಗೆ ಆಸ್ಪದ ಕಲ್ಪಿಸಿದೆ.
ಈ ಮುಂಚೆ ಕೊನೆ ಕ್ಷಣದಲ್ಲಿ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಕರ್ನಾಟಕ ಧಾರ್ಮಿಕ ಕಟ್ಟಡ (ಸಂರಕ್ಷಣೆ) ವಿಧೇಯಕ 2021ನ್ನು ಮಂಡಿಸಲಾಗಿತ್ತು. ಅದೇ ರೀತಿ ಸರ್ಕಾರ ಬೆಳಗಾವಿ ಅಧಿವೇಶನಲ್ಲೇ ಮತಾಂತರ ನಿಷೇಧ ವಿಧೇಯಕ ಮಂಡಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.




