SHIGGAON BY ELECTION RESULTS: ನಾಳೆ ಶಿಗ್ಗಾಂವ ಉಪಚುನಾವಣೆ ಫಲಿತಾಂಶ: ಯಾರೇ ಶಾಸಕರಾದರು ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶ

ಶಿಗ್ಗಾಂವ ವಿಧಾನಸಭಾ ಕ್ಷೇತ್ರ ರಾಜ್ಯಕ್ಕೆ ಎರಡೂ ಮುಖ್ಯಮಂತ್ರಿಗಳನ್ನ ಕೊಟ್ಟಂತ ಕ್ಷೇತ್ರ. ಈ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆಗೆ ಕೌಂಟಡೌನ್ ಶುರುವಾಗಿದೆ. ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದ್ಧು, ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆದಿದೆ. ಇತ್ತ ಮತ ಎಣಿಕೆಗೆ ಹಾವೇರಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವ ವಿಧಾನಸಭಾ ಕ್ಷೇತ್ರ 1994 ಕ್ಕಿಂತ ಮುಂಚೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. 2008 ರಿಂದ ಬಿಜೆಪಿ ಭದ್ರಕೋಟೆಯಾಗಿ ಮಾರ್ಪಟ್ಟಿದೆ. 2008 ರಿಂದ ನಡೆದ ನಾಲ್ಕು ವಿಧಾನಸಭೆ ಚುನಾವಣೆಗಳಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗೆದ್ದು ಬೀಗಿದ್ದಾರೆ. ಇದರಿಂದಾಗಿ ಕ್ಷೇತ್ರದಲ್ಲಿ ಸಂಪೂರ್ಣ ಹಿಡಿತವನ್ನ ಬೊಮ್ಮಾಯಿ ಇಟ್ಟುಕೊಂಡಿದ್ದಾರೆ. ಬೊಮ್ಮಯಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹಾವೇರಿಯಿಂದ ಸಂಸದರಾಗಿ ಆಯ್ಕೆ ಆಗಿದ್ದಾರೆ. ಇವರ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದ್ದು, ಈಗಾಗಲೇ ಮತದಾನ ಮುಗಿದಿದೆ. ಬಿಜೆಪಿ ಅಭ್ಯರ್ಥಿಯಾಗಿ ಬೊಮ್ಮಯಿ ಪುತ್ರ ಭರತ ಬೊಮ್ಮಯಿ ಸ್ಫರ್ಧೆ ಮಾಡಿದ್ರೆ, ಕೈ ಅಭ್ಯರ್ಥಿಯಾಗಿ ಯಾಸೀರ ಖಾನ್ ಪಠಾಣ್ ಸೇರಿದಂತೆ ಎಂಟು ಜನ್ರು ಅಖಾಡದಲ್ಲಿದ್ದಾರೆ. ಈಗಾಗಲೇ ಕ್ಷೇತ್ರದ ಮತದಾರರು ಕಳೆದ 13 ರಂದು ಅಭ್ಯರ್ಥಿಗಳ ಹಣೆ ಬರಹ ಬರೆದಿದ್ದಾರೆ. ಅಭ್ಯರ್ಥಿಗಳ ಭವಿಷ್ಯದಲ್ಲಿ ಎವಿಎಂ ಮಷಿನ್‌ಗಳಲ್ಲಿ ಭದ್ರವಾಗಿದ್ದು, ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆದಿದೆ. ಜಾತಿ ಲೆಕ್ಕಾಚಾರದಲ್ಲಿ ಕಳೆದುಕೊಂಡ ಕ್ಷೇತ್ರವನ್ನ ಮರಳಿ ಕೈ ವಶ ಮಾಡಿಕೊಳ್ಳಬೇಕು ಕಾಂಗ್ರೆಸ್ ನಾಯಕರು ಟೊಂಕ ಕಟ್ಟಿ ನಿಂತರೇ, ಕ್ಷೇತ್ರವನ್ನ ತಮ್ಮ ಹತ್ತಿರವೇ ಉಳಿಸಿಕೊಳ್ಳಬೇಕೆಂದು ಬಸವರಾಜ್ ಬೊಮ್ಮಯಿ ಸಕಲ ಪ್ರಯತ್ನ ಮಾಡಿದ್ದಾರೆ. ಶಿಗ್ಗಾಂವ ಕ್ಷೇತ್ರದಲ್ಲಿ ಒಟ್ಟು 2 ಲಕ್ಷ 37 ಸಾವಿರ ಮತದಾರರಲ್ಲಿ, 1 ಲಕ್ಷ 91 ಸಾವಿರ ಮತದಾರರು ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ. ಈಗಾಗಲೇ ಸಮೀಕ್ಷೆಗಳ ಪ್ರಕಾರ ಶಿಗ್ಗಾಂವ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಯಿ ಗೆಲವು ಕಂಡಿದ್ದಾರೆ. ಆದ್ರೆ ಮತದಾರರು ಸಮೀಕ್ಷೆಗಳನ್ನೇ ಉಲ್ಟಾ ಮಾಡಿ ಕೈ ಅಭ್ಯರ್ಥಿ ಯಾಸೀರ ಖಾನ್ ಪಠಾಣ್ ಪರ ತೀರ್ಪು ಕೊಡ್ತಾರಾ ಎಂಬುದು ಕುತೂಹಲಕಾರಿಯಾಗಿದೆ..

* ಶಿಗ್ಗಾಂವ ಕ್ಷೇತ್ರದಲ್ಲಿವೆ 75 ಸಾವಿರ ಲಿಂಗಾಯತ ಮತಗಳು.

* ಅಲ್ಪಸಂಖ್ಯಾತ ಮತಗಳಿವೆ 69 ಸಾವಿರ.

* ಬಂಜಾರ 11 ಸಾವಿರ, ಕುರುಬ 15 ಸಾವಿರ, ವಾಲ್ಮೀಕಿ 14 ಸಾವಿರ, ಗಂಗಾಮತಸ್ಥ 8 ಸಾವಿರ.

ಲಿಂಗಾಯತ ಮತ್ತು ಅಲ್ಪಸಂಖ್ಯಾತ ಮತಗಳ ಹಾಗೆಯೇ ಕುರುಬ, ಬಂಜಾರ, ವಾಲ್ಮೀಕಿ, ಗಂಗಾಮತಸ್ಥ ಮತಗಳು ಶಿಗ್ಗಾಂವ ಕ್ಷೇತ್ರದಲ್ಲಿ ಹೆಚ್ಚಿವೆ. ಈಗಾಗಿ ಅನೇಕ ಸಣ್ಣ ಪುಟ್ಟ ಜಾತಿಗಳನ್ನೇ ಎರಡೂ ರಾಷ್ಟ್ರೀಯ ಪಕ್ಷಗಳು ಟಾರ್ಗೆಟ್ ಮಾಡಿಕೊಂಡಿದ್ದವು. ಆಯಾ ಜಾತಿ ನಾಯಕರುಗಳನ್ನ ಕ್ಷೇತ್ರಕ್ಕೆ ಕರೆಯಿಸಿ ಅಬ್ಬರದ ಪ್ರಚಾರ ಮಾಡಿಸಿದ್ದವು. ಬೊಮ್ಮಯಿ ಕುಟುಂಬಕ್ಕೆ ಸೋಲಿನ ರುಚಿ ಏನೂ ಎಂಬುದು ತೋರಿಸಿಯೇ ಸಿದ್ದ ಎಂದು ಸಚಿವ ಸತೀಶ್ ಜಾರಕಹೊಳಿ ನೇತೃತ್ವದಲ್ಲಿ ಡಜನ್‌ ಸಚಿವರು‌ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದರು. ಇನ್ನೊಂದು ಕಡೆ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಸಯ್ಯದ ಅಜಂ ಪೀರ್ ಖಾದ್ರಿ ಬೊಮ್ಮಯಿ ವಿರುದ್ಧ ಸೇಡು ತೀರಿಸಿಕೊಳ್ಳುವ ಶಪತ್ ಮಾಡಿದ್ದರು. ಬೊಮ್ಮಯಿಯನ್ನ ಕಟ್ಟಿ ಹಾಕಲು ಕಾಂಗ್ರೆಸ್ ನಾಯಕರು ಕ್ಷೇತ್ರದಲ್ಲಿ ಚಕ್ರವ್ಯೂಹವನ್ನೇ ರಚಿಸಿದ್ದರು. ಆದ್ರೆ ಬೊಮ್ಮಯಿ ಇದ್ಯಾವೂದಕ್ಕೂ ತಲೆ ಕೆಡಿಸಿಕೊಳ್ಳದೆ ಮಗನ ಗೆಲವುಗಾಗಿ ತಮ್ಮದೇ ಹಾದಿಯಲ್ಲಿ ತಂತ್ರ ರಣತಂತ್ರವನ್ನ ರೂಪಿಸಿದ್ದರು‌. ಎರಡೂ ರಾಷ್ಟ್ರೀಯ ಪಕ್ಷಗಳು ಶಿಗ್ಗಾಂವ ಕ್ಷೇತ್ರವನ್ನ ಗೆಲ್ಲಲಬೇಕೆಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದರು.‌ ಯಾರ ಮಾಸ್ಟರ್ ಪ್ಲ್ಯಾನ್ ಎಷ್ಟ ಮಟ್ಟಿಗೆ ಸಕ್ಸಸ್ ಆಗಿದೆ ಎಂಬುದಕ್ಕೆ ನಾಳೆಯೇವರೆಗೆ ಕಾಯಬೇಕಿದೆ..

ನಾಳೆ ಮತ ಎಣಿಕೆಯು ಕಾರ್ಯ ಹಾವೇರಿಯ ದೇವಗಿರಿ ಸರ್ಕಾರಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಕೊಂಡಿದೆ. ಬೆಳಿಗ್ಗೆ ಎಂಟು ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದ್ದು, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತಗಳ ಎಣಿಕೆ ಕಾರ್ಯಕ್ಕಾಗಿ ಒಟ್ಟು 14 ಟೇಬಲ್ ಇವಿಎಂ ಎಣಿಕೆಗಾಗಿ ನಿಗದಿಪಡಿಸಲಾಗಿದೆ. 1 ಟೇಬಲ್ ಅಂಚೆ ಮತಪತ್ರ ಹಾಗೂ 1 ಟೇಬಲ್ ಸೇವಾ ಮತದಾರರ ಅಂಚೆ ಮತಪತ್ರ ಎಣಿಕೆಗಾಗಿ ಸಿದ್ದಪಡಿಸಲಾಗಿದೆ. ಪ್ರತಿ ಟೇಬಲ್‌ಗೆ ಒಬ್ಬರು ಎಣಿಕೆ ಮೇಲ್ವಿಚಾರಕರು, ಒಬ್ಬರು ಎಣಿಕೆ ಸಹಾಯಕರು ಹಾಗೂ ಒಬ್ಬರು ಎಣಿಕೆ ಮೈಕ್ರೋ ಅಬ್ಬರವರ್ ನೇಮಕ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಪೊಲೀಸ್ ಇಲಾಖೆ ಕೂಡ ಸೂಕ್ತ ಬಂದೋಬಸ್ತ್ ಮಾಡಿಕೊಂಡಿದೆ..

More News